ಬೆಂಗಳೂರು: ಕಳೆದ ತಿಂಗಳು ಸದಾಶಿವನಗರದ ಉದ್ಯಮಿಯೊಬ್ಬರ ಮನೆಯಲ್ಲಿ ಕೋಟ್ಯಂತರ ರೂ. ಮೌಲ್ಯದ ಚಿನ್ನಾಭರಣ, ಕಾರು ಕಳವು ಮಾಡಿ ಪರಾರಿಯಾಗಿದ್ದ ದಂಪತಿ ನೇಪಾಳ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನೇಪಾಳ ಮೂಲದ ಲಾಲ್‌ಚಂದ್ರ ಸಿಂಗ್ ಸಾಯಿ ಠಾಕೂರ್ (38) ಮತ್ತು ಆತನ ಪತ್ನಿಕಮಲಾ (35) ಬಂಧಿತರು. ಆರೋಪಿಗಳು ನ.8ರಂದು ಉದ್ಯಮಿ ವಂಕಿ ಪೆಂಚಾಲಯ್ಯಎಂಬ ಉದ್ಯಮಿ ಮನೆಯಲ್ಲಿ ಕಳ್ಳತನ ಮಾಡಿ, ಪರಾರಿಯಾಗಿದ್ದರು. ಈ ಖಚಿತ ಮಾಹಿತಿಯನ್ನು ನೇಪಾಳ ಪೊಲೀಸರಿಗೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ನೇಪಾಳ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ಬಾಡಿ ವಾರೆಂಟ್ ಪಡೆದು ದಂಪತಿಯನ್ನು ಬೆಂಗಳೂರಿಗೆ ತರಲು ಸದಾಶಿವನಗರ ಪೊಲೀಸರ ತಂಡವೊಂದು ನೇಪಾಳಕ್ಕೆ ತೆರಳಿದೆ.
ಕಾನೂನು ಪ್ರಕ್ರಿಯೆ ಮುಗಿಸಿ ಶೀಘ್ರದಲ್ಲೇ ಆರೋಪಿಗಳನ್ನು ನಗರಕ್ಕೆ ಕರೆತರುವುದಾಗಿ ಪೊಲೀಸರು ಹೇಳಿದರು.
ಆರೋಪಿಗಳು ಉದ್ಯಮಿ ಪೆಂಚಾಲಯ್ಯ ಮನೆಯಲ್ಲಿ ಒಂದು ವರ್ಷದಿಂದ ಮನೆಗೆಲಸಮಾಡಿಕೊಂಡಿದ್ದರು. ಸಾಯಿ ಠಾಕೂರ್ ಭದ್ರತಾ ಸಿಬ್ಬಂದಿಯಾಗಿದ್ದರೆ, ಕಮಲಾ ಮನೆಕೆಲಸ ಮಾಡಿಕೊಂಡಿದ್ದರು. ಈ ಮಧ್ಯೆ ನ.8ರಂದು ಪೆಂಚಾಲಯ್ಯ ಕುಟುಂಬ ಸಮೇತಚೆನ್ನೈನ ಮಗಳ ಮನೆಯ ಗೃಹಪ್ರವೇಶಕ್ಕೆ ತೆರಳಿದ್ದರು. ಈ ವೇಳೆ ಆರೋಪಿಗಳನ್ನು ಮನೆ ನೋಡಿಕೊಳ್ಳಲು ಹೇಳಲಾಗಿತ್ತು. ಗೃಹಪ್ರವೇಶ ಮುಗಿಸಿ ಮ.13ರಂದು ಪೆಂಚಾಲಯ್ಯ ಕುಟುಂಬ ಮನೆಗೆ ವಾಪಸಾದಾಗ ಮನೆಯ ಮುಂಭಾಗ ನಿಲ್ಲಿಸಿದ್ದ ಕಾರು ಕಳ್ಳತನವಾಗಿತ್ತು.
ನಂತರ ಒಳಗಡೆ ಹೋಗಿ ನೋಡಿದಾಗ ಮನೆಯಲ್ಲಿ ಎರಡು ಸೇಫ್ ಲಾಕರ್‌ಗಳ ಪೈಕಿ ಒಂದನ್ನು ಒಡೆದು ಚಿನ್ನ, ಬೆಳ್ಳಿ, ವಜ್ರ ದೋಚಲಾಗಿತ್ತು. ಮತ್ತೂಂದು ಸೇಫ್ ಲಾಕರ್‌ಒಡೆಯಲು ವಿಫಲಯತ್ನ ನಡೆಸಲಾಗಿತ್ತು. ಅಂತೆಯೆ ಮನೆಯಲ್ಲೇ ನಿಲುಗಡೆ ಮಾಡಿದ್ದ ಕಾರು, ಲ್ಯಾಪ್‌ಟಾಪ್ ಕಳುವಾಗಿತ್ತು. ಮನೆಯ ಸಿಸಿಟಿವಿ ಕ್ಯಾಮರಾ ನೋಡಿದಾಗ ಲಾಲ್‌ಚಂದ್ರಸಿಂಗ್ ಠಾಕೂರ್ ಮತ್ತು ಕಮಲಾ ಕಳ್ಳತನ ಮಾಡಿರುವುದು ಸೆರೆಯಾಗಿತ್ತು. ಈ
ಸಂಬಂಧ ಪೆಂಚಾಲಯ್ಯ ಆರೋಪಿ ದಂಪತಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ನಗರದಲ್ಲಿ ಆರೋಪಿಗಳಿಗಾಗಿ ಶೋಧ ನಡೆಸಿದಾಗ ನೇಪಾಳಕ್ಕೆ ಪರಾರಿಯಾಗಿರುವ ಮಾಹಿತಿ ದೊರಕಿತು. ಈ ಹಿನ್ನೆಲೆಯಲ್ಲಿ ಆರೋಪಿಗಳ ಬಗ್ಗೆ ನೇಪಾಳ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳೀಯ ಪೊಲೀಸರ ಬಲೆಗೆ ಬಿದ್ದಿದ್ದಾರೆ ಎಂದು ಪೊಲೀಸರು ಹೇಳಿದರು.