Advertisement

ಎನ್‌ಇಪಿ: ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ದಾರಿ

12:37 AM Sep 30, 2021 | Team Udayavani |

ಪ್ರಸಕ್ತ ಸಾಲಿನಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಅನುಷ್ಠಾನಕ್ಕೆ ಸರಕಾರ ನಿರ್ಧರಿಸಿದೆ. ಈ ಸಂಬಂಧ ರಾಜ್ಯದ ವಿವಿಧ ವಿಶ್ವವಿದ್ಯಾನಿಲಯಗಳು ಮಾಡಿಕೊಂಡಿರುವ ಸಿದ್ಧತೆ, ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಲ್ಲಿರುವ ಗೊಂದಲ ನಿವಾರಣೆಗೆ ತೆಗೆದುಕೊಂಡ ಕ್ರಮಗಳು, ಪಠ್ಯಕ್ರ ಮದಲ್ಲಿನ ಹೊಸ ವಿಷಯಗಳು ಕುರಿತು “ಉದಯವಾಣಿ’ ಮುಂದಿಟ್ಟಿರುವ ಪಂಚಪ್ರಶ್ನೆಗಳಿಗೆ ಕುಲಪತಿಗಳ ಉತ್ತರ ಇಲ್ಲಿದೆ.

Advertisement

ಶಿಕ್ಷಣ ನೀತಿ ಯಾವುದೇ ಗೊಂದಲ ಸೃಷ್ಟಿ ಮಾಡಿಲ್ಲ
1. ರಾಜ್ಯ ಸರಕಾರ ಈಗಾ ಗಲೇ ಹತ್ತಕ್ಕಿಂತ ಹೆಚ್ಚು ಸಭೆಗಳನ್ನು ನಡೆಸಿದೆ. 2019- 2020ನೇ ಸಾಲಿನಿಂದಲೇ ಸಿದ್ಧತೆಗಳು ಆರಂಭಗೊಂಡಿವೆ. ನಾವು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ. ಉನ್ನತ ಶಿಕ್ಷಣ ಇಲಾಖೆ, ಸರಕಾರ ಸಲಹೆ ಸೂಚನೆಗಳನ್ನು ನೀಡಿದೆ. ಬೋರ್ಡ್‌ ಸಭೆಗಳಲ್ಲಿ ಪ್ರತೀ ಸಿಲೆಬಸ್‌ ಅಪ್ರೂವ್‌ ಮಾಡಿ ದ್ದೇವೆ. ರಾಜ್ಯದಲ್ಲೇ ಪ್ರಪ್ರಥಮ ವಾಗಿ ಹೊಸ ಶಿಕ್ಷಣ ನೀತಿ ಜಾರಿಗೆ ತರುತ್ತಿರುವ ಹೆಮ್ಮೆ ನಮಗಿದೆ.

2. ರಾಜ್ಯ ಸರಕಾರದ ಆದೇಶದ ಮೇರೆಗೆ ಎಲ್ಲ ವಿವಿಗಳಲ್ಲಿ, ಕಾಲೇಜುಗಳಲ್ಲಿ ಹೆಲ್ಪ್ ಡೆಸ್ಕ್ ತೆರೆಯಲಾಗಿದೆ. ಪ್ರತಿಯೊಂದು ವಿಭಾಗದ ಮುಖ್ಯಸ್ಥರು ಆಫ್‌ಲೈನ್‌, ಆನ್‌ಲೈನ್‌ನಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ಕೊಡುತ್ತಿದ್ದಾರೆ. ಉನ್ನತಶಿಕ್ಷಣ ಸಚಿವರು ಹಲವಾರು ಕಾರ್ಯಕ್ರಮಗಳನ್ನು ಮಾಡಿದ್ದಾರೆ. ಶಿಕ್ಷಣ ನೀತಿ ಯಾವುದೇ ಗೊಂದಲ ಸೃಷ್ಟಿ ಮಾಡಿಲ್ಲ. ಯಾವುದೇ ಅನುಮಾನಗಳಿದ್ದರೆ, ಮಾಹಿತಿ ಬೇಕಿದ್ದರೆ ಆಯಾ ಕಾಲೇಜು ಪ್ರಾಂಶುಪಾಲರನ್ನು ಸಂಪರ್ಕಿಸಬಹುದು.

3. ಚಂದ್ರಗುಪ್ತ ಮೌರ್ಯ ಕಾಲದಲ್ಲಿ ನಳಂದಾ, ತಕ್ಷಶಿಲಾ ವಿವಿಗಳಲ್ಲಿ 10 ಲಕ್ಷ ವಿದ್ಯಾರ್ಥಿಗಳಿದ್ದರು, 10 ಸಾವಿರ ಪ್ರಾಧ್ಯಾಪಕರಿದ್ದರು ಎಂಬುದನ್ನು ಇತಿಹಾಸದಲ್ಲೇ ಓದಿದ್ದೇವೆ. ಪ್ರಪಂಚದ ಪ್ರತಿಷ್ಠಿತ ವಿವಿಗಳು ಇಂಟರ್‌ ಡಿಸಿಪ್ಲಿನರಿ, ಇಂಟ್ರಾ ಡಿಸಿಪ್ಲಿನರಿ, ಮಲ್ಟಿ ಡಿಸಿಪ್ಲಿನರಿ ಅಪ್ರೋಚ್‌ ಶಿಕ್ಷಣ ನೀಡಿವೆ. ಆದರೆ ಬಹಳ ಮುಖ್ಯವಾಗಿ ಮಾಡಬೇಕಿರುವುದು ಒಬ್ಬ ವಿದ್ಯಾರ್ಥಿಗೆ ಯಾವುದನ್ನು ಕಲಿಯಲು ಆಸಕ್ತಿ ಇದೆಯೋ ಅದನ್ನು ಕಲಿಯಲು ಹೊಸ ಶಿಕ್ಷಣ ನೀತಿ ಅವಕಾಶ ಮಾಡಿಕೊಡುತ್ತದೆ. ಶಿಕ್ಷಣ ಉದ್ಯೋಗದ ಭರವಸೆಯನ್ನು ಕೊಡುವಂತಿರಬೇಕು. ಪ್ರತೀ ವರ್ಷದಲ್ಲೂ ಉದ್ಯೋಗದ ಪರಿಕಲ್ಪನೆ ಮಾಡಿದ್ದಾರೆ. ಮುಖ್ಯ ಕೋರ್ಸ್‌ ಜತೆ ಹೆಚ್ಚುವರಿ ಎಲೆಕ್ಟಿವ್‌, ನ್ಯೂಮರಿಕ್‌, ಇಂಟ್ರಾ ಡಿಸಿಪ್ಲಿನರಿ, ಪ್ರೊಫೆಶನಲ್‌, ಸ್ಕಿಲ್‌ ಡೆವಲೆಪ್‌ಮೆಂಟ್‌ ಕೋರ್ಸ್‌ಗಳು ಆಫರ್‌ ಮಾಡಲಾಗಿದೆ. ಕೆಲವನ್ನು ಕಡ್ಡಾಯ ಮಾಡಲಾಗಿದೆ. ಆದ್ದರಿಂದ ಹೊಸ ಶಿಕ್ಷಣ ನೀತಿ ಯಾವುದೇ ಸಂಕಷ್ಟಗಳಿಗೆ ದೂಡುವುದಿಲ್ಲ. ಮಕ್ಕಳಿಗೆ ಮೆಡಿಕಲ್‌, ಎಂಜಿನಿಯರಿಂಗ್‌ ಓದಿಸಬೇಕೆಂದು ಬಯಸುತ್ತೇವೆ. ಆದರೆ ಅವರಿಗೆ ಇಷ್ಟವಿರುವುದಿಲ್ಲ. ಬೇರೆ ವಿಷಯಗಳಲ್ಲಿ ಆಸಕ್ತಿ ಇರುತ್ತದೆ. ಈಗ ಅದು ಸಾಧ್ಯವಿರಲಿಲ್ಲ. ಹೊಸ ಶಿಕ್ಷಣ ನೀತಿ ಆ ಅವಕಾಶಗಳನ್ನು ಸೃಷ್ಟಿ ಮಾಡಿದೆ. 64 ವಿದ್ಯೆಗಳನ್ನು ಕಲಿಸುವಂತಹ ನೀತಿಯಾಗಿ ರೂಪುಗೊಂಡಿದೆ.

4. ಹೊಸ ಶಿಕ್ಷಣ ನೀತಿ ದಿಕ್ಕನ್ನೇ ಬದಲಾಯಿಸುತ್ತದೆ. 34 ವರ್ಷಗಳ ಕಾಲ ಇಂಗ್ಲಿಷ್‌, ಮೆಕಾಲೆ ಶಿಕ್ಷಣ ನೀತಿ ಅನುಸರಿಸಿಕೊಂಡು ಬಂದಿದ್ದೇವೆ. ಹೊಸ ಸಂಶೋಧನೆ, ಆವಿಷ್ಕಾರ, ಸುಧಾರಣೆ ಮಾಡಲಿಲ್ಲ. ಹೊಸ ಶಿಕ್ಷಣ ನೀತಿ ವಿದ್ಯಾರ್ಥಿಗಳಿಗೆ ಏನು ಬೇಕೋ ಅದನ್ನೇ ನೀಡುತ್ತದೆ. ಎಕನಾಮಿಕ್ಸ್‌ ಜತೆ ಮ್ಯೂಸಿಕ್‌ ಓದಬಹುದು. ಫೈನ್‌ ಆರ್ಟ್ಸ್ ಓದಬಹುದು. ಹೀಗೆ ಹಲವು ವೈಶಿಷ್ಟಗಳು ಇವೆ. ಹೊಸ ಶಿಕ್ಷಣ ನೀತಿ ಜಾರಿಯಿಂದ ಉಪನ್ಯಾಸಕರ ಕೊರತೆ ಕಾಡಬಹುದು. ಉನ್ನತ ಶಿಕ್ಷಣ ಸಚಿವರು ಈ ಕೊರತೆಯನ್ನು ನೀಗಿಸುವ ಭರವಸೆ ನೀಡಿದ್ದಾರೆ. ವಾರ್ಷಿಕ ಪರೀಕ್ಷೆ ಮಾದರಿಯಿಂದ ಸೆಮಿಸ್ಟರ್‌ ಮಾದರಿಗೆ ಬಂದಾಗ ಒಂದೆರೆಡು ವರ್ಷ ತೊಂದರೆ ಆಗಿತ್ತು. ಹೊಸ ನೀತಿಯಿಂದ ಒಂದೆರೆಡು ವರ್ಷ ತೊಂದರೆಯಾಗಬಹುದು.

Advertisement

ಇದನ್ನೂ ಓದಿ:ಹತ್ತು ಸಾವಿರ ಮೆಗಾವ್ಯಾಟ್‌ ಉತ್ಪಾದನ ಗುರಿಯ ನೂತನ ಇಂಧನ ನೀತಿ: ಸುನಿಲ್‌

5. ಖಂಡಿತ ಇಲ್ಲ. ಅದು ಕೇವಲ ಉಹಾಪೋಹವಷ್ಟೆ.ನೂರು ಜನ ಅಡ್ಮಿಷನ್‌ ಆದರೆ ಎರಡೂ¾ರು ಡ್ರಾಪ್‌ಔಟ್‌ ಇದ್ದೇ ಇರುತ್ತಾರೆ. ಮದುವೆ, ಕೆಲಸ ವಿವಿಧ ಕಾರಣಗಳಿಗೆ ಶಿಕ್ಷಣ ಮೊಟಕುಗೊಳಿಸುವವರು ಇರುತ್ತಾರೆ. ನೂರಕ್ಕೆ ನೂರು ಜನ ಹೊರಹೋಗುವುದಿಲ್ಲ. ಪ್ರಥಮ ವರ್ಷ ಹೊರಹೋದರೆ ಸರ್ಟಿಫಿಕೆಟ್‌ ಕೋರ್ಸ್‌, ಎರಡು ವರ್ಷ ಪೂರೈಸಿದರೆ ಡಿಪ್ಲೊಮಾ, ಮೂರು ವರ್ಷಕ್ಕೆ ಡಿಗ್ರಿ ಸರ್ಟಿಫಿಕೆಟ್‌ ನೀಡಲಾಗುತ್ತದೆ.

-ಪ್ರೊ| ಬಿ.ಪಿ.ವೀರಭದ್ರಪ್ಪ
ಕುಲಪತಿಗಳು, ಕುವೆಂಪು ವಿವಿ ಶಿವಮೊಗ್ಗ

ಎಲ್ಲ ಸಂಶಯ ಪರಿಹಾರಕ್ಕೂ ವ್ಯವಸ್ಥೆ
1. ನಮ್ಮ ವಿಶ್ವವಿದ್ಯಾ ನಿಲಯ ಹೊಸದಾಗಿ ಆರಂಭವಾಗಿರುವುದರಿಂದ ಎನ್‌ಇಪಿ ಅನುಷ್ಠಾನಕ್ಕೂ ಅಷ್ಟೇ ಮಹತ್ವ ನೀಡಿದ್ದೇವೆ. ಈ ಸಂಬಂಧ ವಿಶ್ವವಿದ್ಯಾನಿಲಯದಿಂದ ರೂಪಿಸಿರುವ ಸಲಹಾ ಮಂಡಳಿಯಿಂದ ಹಾಗೂ ಎಲ್ಲ ವಿಭಾಗಗಳ ಮುಖ್ಯಸ್ಥರಿಂದಲೂ ಒಪ್ಪಿಗೆ ಪಡೆದಿದ್ದೇವೆ.

2.ಎನ್‌ಇಪಿ ಬಗ್ಗೆ ಇರುವ ಗೊಂದಲ ನಿವಾರಣೆಗಾಗಿಯೇ ಅನುಷ್ಠಾನ ಸಮಿತಿಯೊಂದನ್ನು ರೂಪಿಸಿದ್ದೇವೆ. ಇದರಲ್ಲಿ ಹಿರಿಯ ಪ್ರಾಧ್ಯಾಪಕರು ಇದ್ದಾರೆ. ಅಲ್ಲದೆ, ವಿದ್ಯಾರ್ಥಿಗಳಿಗೆ ದಾಖಲಾತಿ ಸಂದರ್ಭದಲ್ಲೇ ಕಾಂಬಿನೇಶನ್‌ ಸೇರಿದಂತೆ ಎಕ್ಸಿಟ್‌, ಎಂಟ್ರಿ ಬಗ್ಗೆ ಮಾಹಿತಿ, ಆನರ್ಸ್‌, ಸ್ನಾತಕೋತ್ತರ ಪದವಿಯ ಬಗ್ಗೆಯೂ ಮಾಹಿತಿ ನೀಡುತ್ತಿದ್ದೇವೆ. ಜತೆಗೆ ಕೋರ್ಸ್‌ಗಳ ಆಯ್ಕೆಯು ವಿದ್ಯಾರ್ಥಿಗಳಿಗೆ ಮುಕ್ತವಾಗಿದ್ದು, ಅವರ ಎಲ್ಲ ಸಂಶಯ ಪರಿಹಾರಕ್ಕೂ ವ್ಯವಸ್ಥೆ ಮಾಡಿದ್ದೇವೆ.

3. ಎನ್‌ಇಪಿ ಅನುಷ್ಠಾನಕ್ಕೆ ತಕ್ಕಂತೆ ಪಠ್ಯಕ್ರಮದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡಿದ್ದೇವೆ. ಏನೇ ಬದಲಾವಣೆ ಆಗಿದ್ದರೂ, ಅದೆಲ್ಲವೂ ವಿದ್ಯಾರ್ಥಿಗಳ ಶೈಕ್ಷಣಿಕ ಹಾಗೂ ಔದ್ಯೋಗಿಕ ಅಭಿವೃದ್ಧಿಗೆ ಪೂರಕವಾಗಿರಲಿದೆ.

4.ಶಿಕ್ಷಣ ಗುಣಮಟ್ಟ ಸುಧಾರಣೆ ಹೇಗಾಗಲಿದೆ ಎಂಬುದನ್ನು ತತ್‌ಕ್ಷಣ ಹೇಳಲು ಸಾಧ್ಯವಿಲ್ಲ. ಎನ್‌ಇಪಿ ಅನುಷ್ಠಾನದ ಅನಂತರ ಒಂದೆರೆಡು ಬ್ಯಾಚ್‌ ವಿದ್ಯಾರ್ಥಿಗಳು ಪದವಿ ಪೂರೈಸಿ ಹೊರಬಂದ ನಂತರ ಅದರ ಸ್ಪಷ್ಟ ಚಿತ್ರಣ ಸಿಗಲಿದೆ. ಉಪನ್ಯಾಸಕರ ಕೊರತೆ ಸ್ವಲ್ಪಮಟ್ಟಿನ ಸಮಸ್ಯೆ ತಂದೊಡ್ಡಲಿದೆ. ಇದಕ್ಕೆ ಅತಿಥಿ ಉಪನ್ಯಾಸಕರ ನೇಮಕಾತಿ ಸದ್ಯದ ಪರಿಹಾರ ನೀಡಿದರೂ, ಸರಕಾರ ಮುಂದೆ ಖಾಯಂ ಉಪನ್ಯಾಸಕರ ನೇಮಕ ಮಾಡುವ ಮೂಲಕ ಪರಿಹಾರ ನೀಡಬಹುದು.

5.ಖಂಡಿತವಾಗಿಯೂ ಡ್ರಾಪ್‌ಔಟ್‌ ಹೆಚ್ಚಾಗಲು ಸಾಧ್ಯವಿಲ್ಲ. ಹಿಂದಿನ ವ್ಯವಸ್ಥೆಯಲ್ಲಿ ಪದವಿ ಶಿಕ್ಷಣ ಅರ್ಧಕ್ಕೆ ಮೊಟಕು ಗೊಳಿಸಿದವರು ಪುನಃ ಅದೇ ತರಗತಿ ಸೇರಲು ಸಾಧ್ಯವಿರಲಿಲ್ಲ. ಮೊದಲಿನಿಂದಲೇ ಪದವಿ ಮಾಡಬೇಕಿತ್ತು. ಈಗ ಎಕ್ಸಿಟ್‌ ಮತ್ತು ಎಂಟ್ರಿ ಪ್ರತೀ ವರ್ಷ ಇರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲ ಹೆಚ್ಚು. ಅನಿವಾರ್ಯ ಕಾರಣಕ್ಕೆ ಕೆಲವರು ಶಿಕ್ಷಣ ಮೊಟಕುಗೊಳಿಸುವುದು ಈಗಲೂ ಇದೆ, ಮುಂದೆಯೂ ಇರಲಿದೆ.

-ಪ್ರೊ| ಶ್ರೀನಿವಾಸ ಬಳ್ಳಿ
ಕುಲಪತಿ, ನೃಪತುಂಗ
ವಿವಿ, ಬೆಂಗಳೂರು

ಪಂಚ ಪ್ರಶ್ನೆಗಳು
1. ಎನ್‌ಇಪಿ ಅನುಷ್ಠಾನಕ್ಕೆ ಸಿದ್ಧತೆ ಹೇಗಿದೆ?
2. ಎನ್‌ಇಪಿ ಅನುಷ್ಠಾನಕ್ಕೆ ಸಂಬಂ ಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಲ್ಲಿ ಗೊಂದಲ ನಿವಾರಣೆಗೆ ತೆಗೆದುಕೊಂಡ ಕ್ರಮಗಳು ಯಾವುವು?
3.ಎನ್‌ಇಪಿ ಅನುಷ್ಠಾನದ ಅನಂತರ ಪಠ್ಯಕ್ರಮದಲ್ಲಿ ಆಗಬಹುದಾದ ಬದಲಾವಣೆ ಏನು?
4.ಎನ್‌ಇಪಿ ಅನುಷ್ಠಾನದ ನಂತರ ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಹೇಗೆ ಸುಧಾರಿಸಲಿದೆ ಮತ್ತು ಉಪನ್ಯಾಸಕರ ಕೊರತೆ ಅನುಷ್ಠಾನಕ್ಕೆ ಅಡ್ಡಿಯಾಗಲಿದೆಯೇ?
5. ಎನ್‌ಇಪಿಯಿಂದ ಮೂರು ವರ್ಷವೂ ಎಕ್ಸಿಟ್‌ ಇರುವುದರಿಂದ ಉನ್ನತ ಶಿಕ್ಷಣದಲ್ಲಿ ಡ್ರಾಪ್‌ಔಟ್‌ ಹೆಚ್ಚಾಗುವ ಆತಂಕ ಇದೆಯೇ?

Advertisement

Udayavani is now on Telegram. Click here to join our channel and stay updated with the latest news.

Next