ರಾಷ್ಟ್ರೀಯ ಶಿಕ್ಷಣ ನೀತಿ(ಎನ್‌ಇಪಿ)ಯಿಂದ ಯಾವುದೇ ಉಪಯೋಗ ಇಲ್ಲ. ಮೊದಲ ವರ್ಷದ ಡಿಗ್ರಿ ಮುಗಿಯುತ್ತಿದ್ದಂತೆ ಸರ್ಟಿಫಿಕೇಟ್ ಕೊಡುತ್ತೇವೆ. ಎರಡನೇ ವರ್ಷದ ಡಿಗ್ರಿ ಆದ ಮೇಲೆ ಸರ್ಟಿಫಿಕೇಟ್ ಕೊಡು ತ್ತೇವೆ ಎನ್ನುತ್ತಿದ್ದಾರೆ. ಅದನ್ಯಾರು ಕೇಳು ವುದೂ ಇಲ್ಲ. ಆ ರೀತಿಯ ವ್ಯವಸ್ಥೆಯೇ ಇಟ್ಟು ಕೊಳ್ಳಬಾರದು. ನಮ್ಮದೇ ಆಗಿರಲಿ ಯಾವುದೇ ಸರಕಾರ ಆಗಿರಲಿ ಎಲ್‌ಕೆಜಿ ಇಂದ ಪಿಯುಸಿವರೆಗೆ ಏಕರೂಪ ಪಠ್ಯಕ್ರಮ ಇರಬೇಕು. ಸಿಬಿಎಸ್‌ಸಿ, ಐಸಿಎಸ್‌ಸಿ, ಸ್ಟೇಟ್ ಸಿಲೆಬಸ್ ಎಂಬುದನ್ನು ತೆಗೆದು ಹಾಕಬೇಕು. ಜೀವಶಾಸ್ತ್ರದಲ್ಲಿ, ಭೌತಶಾಸ್ತ್ರದಲ್ಲಿ ಯಾವುದನ್ನು ಬದಲಾಯಿಸಲು ಸಾಧ್ಯ. ವಿಜ್ಞಾನ ಪಠ್ಯದಲ್ಲೂ ಯಾವುದನ್ನೂ ಬದಲಾಯಿಸಲು ಸಾಧ್ಯವಿಲ್ಲ. ಭಾಷಾ ವಿಷಯದಲ್ಲಿ, ಇತಿಹಾಸದಲ್ಲಿ ಸ್ಥಳೀಯವಾಗಿ ಏನಾದರೂ ಬದಲಾವಣೆ ಇರಬಹುದು. ಭೌತಶಾಸ್ತ್ರದ ಯಾವುದೇ ಪಠ್ಯದ ಸಾರಾಂಶ ಬದಲಾಗುವುದಿಲ್ಲ.
ನೀಟ್ ಮೊದಲು ಕಿತ್ತೆಸೆಯಬೇಕು. ನೀಟ್ ಮಾಡಿ ಇಲ್ಲ ಸಿಇಟಿ ಮಾಡಿ. ಮಕ್ಕಳಿಗೆ ಎಷ್ಟು ಪರೀಕ್ಷೆ ಬರೆಯಲು ಸಾಧ್ಯ. ಪಿಯುಸಿ ಆದ ಮೇಲೆ ಅವರು ಎಷ್ಟು ಕಡೆ ಕ್ವಾಲಿಫೈ ಆಗಬೇಕು. ಸಿಬಿಎಸ್‌ಇ, ಐಸಿಎಸ್‌ಇ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಬರೆಯುವುದು ಸುಲಭ. ರಾಜ್ಯ ಪಠ್ಯಕ್ರಮ ಓದುವವರು ಅಪ್‌ಗ್ರೇಡ್ ಆಗಿರುವುದಿಲ್ಲ. ಅವರಿಗೆ ಪ್ರತ್ಯೇಕ ತರಬೇತಿ ಕೊಡಬೇಕು. ಇದು ಅರ್ಥ ರಹಿತ. ಪಿಯುಸಿವರೆಗೆ ಎಲ್ಲರಿಗೂ ಸಮಾನ ಪಠ್ಯಕ್ರಮ ಬೇಕು. ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸಿ ಮೆಡಿಕಲ್, ಎಂಜಿನಿಯರಿಂಗ್ ಯಾವುದಕ್ಕೆ ಬೇಕಾದರೂ ಹೋಗಬಹುದು. ಆರ್ಥಿಕ ಪರಿಸ್ಥಿತಿ ಇಲ್ಲದವರು ಕೆಲಸಕ್ಕೆ ಹೋಗಬಹುದು. 70ನೇ ವಯಸ್ಸಿನಲ್ಲಿ ಬೇಕಾದರೆ ಡಾಕ್ಟರ್ ಓದಲಿ. ಪದವಿ ಪೂರ್ವವರೆಗೆ ಕಡ್ಡಾಯವಾಗಿ ಏಕರೂಪ ಶಿಕ್ಷಣ ನೀತಿ ಬೇಕು. ಇದು ಸರಕಾರದ ಜವಾಬ್ದಾರಿ ಕೂಡ ಹೌದು.
ಆರೋಗ್ಯ, ಶಿಕ್ಷಣಕ್ಕೆ ಯಾವುದೇ ಸರಕಾರಗಳು ಅತೀ ಹೆಚ್ಚಿನ ಗಮನ ಕೊಡಬೇಕು. ಪಿಯುಸಿವರೆಗೆ ಒಂದೇ ಪಠ್ಯಕ್ರಮ ಇರಬೇಕು. ಕಾಶ್ಮೀರದಲ್ಲಿ, ಕರ್ನಾಟಕ, ಕೇರಳದಲ್ಲಿ ಶಿಕ್ಷಣದ ಗುಣಮಟ್ಟ ಒಂದೇ ರೀತಿ ಇರಬೇಕು. ಒಬ್ಬ ಶಿಕ್ಷಕರು ಸಿಕ್ಕಿ ಒಂದರಿಂದ ಏಳನೇ ತರಗತಿವರೆಗ 15 ಮಕ್ಕಳಿದ್ದಾರೆ. ಒಬ್ಬರೇ ಶಿಕ್ಷಕರು ಎಂದರು. ಎರಡು ತರಗತಿಗಳಿಗೆ ಯಾರೂ ಪ್ರವೇಶ ಪಡೆದಿಲ್ಲ ಎಂದರು. ಇದು ಅರ್ಥ ರಹಿತ. ಕೇಂದ್ರ- ರಾಜ್ಯ ಸರಕಾರಗಳು ಪ್ರಾಥಮಿಕ ಶಿಕ್ಷಣದ ಬಗ್ಗೆ ಗಮನ ಹರಿಸಬೇಕು. ಎಲ್ಲ ಸೌಕರ್ಯ ಗಳನ್ನು ಒದಗಿಸಬೇಕು. 45 ನಿಮಿಷಕ್ಕೆ ಪ್ರತೀ ತರಗತಿಗೆ ಒಬ್ಬರು ಶಿಕ್ಷಕರು ಇರಬೇಕು. ಯಾವ ಕಾರಣಕ್ಕೂ ಶಿಕ್ಷಕರು ಇಲ್ಲ ಎಂಬ ಪ್ರಶ್ನೆ ಬರಬಾರದು. ಪ್ರತೀ ಶಾಲೆಯಲ್ಲೂ ದೈಹಿಕ ಶಿಕ್ಷಣ ಶಿಕ್ಷಕರು, ಕಂಪ್ಯೂಟರ್ ರೂಮ್, ಕ್ರೀಡಾ ಕೊಠಡಿ ಇರಬೇಕು. ಪ್ರತೀ ಗ್ರಾಮ ಪಂಚಾಯತ್‌ನಲ್ಲಿ ಐದಾರು ಶಾಲೆ, ಐದಾರು ಅಡುಗೆ ಕೋಣೆ, ಅದಕ್ಕೆ ಕಾಂಪೌಂಡ್, ರಂಗಮಂದಿರ ಎಲ್ಲ ವ್ಯರ್ಥ. ಮಳೆಗಾಲದಲ್ಲಿ ಎಮ್ಮೆ ನಿಂತಿರುತ್ತವೆ. ಇಲ್ಲದಿ ದ್ದರೆ ಇಸ್ಪೀಟ್ ಆಡುತ್ತಾರೆ. ರಂಗಮಂದಿರದಲ್ಲಿ ಮೂರೇ ಕಾರ್ಯಕ್ರಮ ನಡೆಯೋದು. ಪ್ರತಿಭಾ ಕಾರಂಜಿ, ಗಣೇಶ ಉತ್ಸವ, ಸ್ಕೂಲ್ ಡೇ ಮಾತ್ರ. ಹಾಗಾಗಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಂದು ಅಥವಾ ಎರಡು ಶಾಲೆ ಇದ್ದರೆ ಸಾಕು.ರಾಷ್ಟ್ರೀಯ ಶಿಕ್ಷಣ ನೀತಿ ಈಗಿರುವ ಶಿಕ್ಷಣ ನೀತಿಯನ್ನು ಏನು ಉತ್ತಮಗೊಳಿಸುತ್ತಿದೆ ಎಂಬುದು ಮೊದಲು ತಿಳಿಯಬೇಕು.
ನಿಜವಾಗಲೂ ಹೇಳಬೇಕೆಂದರೆ ಎನ್‌ಇಪಿ ಬರುವುದರಿಂದ ಈ ದೇಶದಲ್ಲಿ ಶ್ರೀಮಂತರು ಮಾತ್ರ ಓದಬೇಕು. ಬಡವರು ಮಾತ್ರ ಕೂಲಿ ಕೆಲಸಕ್ಕೆ ಹೋಗಬೇಕು ಎನ್ನುವಂತಿದೆ. ಎಷ್ಟು ಬೇಕಾದರೂ ವಿಶ್ವ ವಿದ್ಯಾ ಲಯ ತೆರೆಯಲು ಅವ ಕಾಶ ಕೊಟ್ಟಿ ದ್ದಾರೆ. ನಿಮ್ಮ ಬಳಿ ದುಡ್ಡಿದ್ದರೆ ನೀವು ಒಂದು ಕಾಲೇಜು ತೆರೆಯಬಹುದು. ಹಣ ಮಾಡಲು ಶಿಕ್ಷಣ ಸಂಸ್ಥೆ ತೆರೆದಂತಾಗುತ್ತದೆಯೇ ಹೊ ರತು ಮಕ್ಕಳ ವಿದ್ಯಾಭ್ಯಾಸಕ್ಕೆ ಅಲ್ಲ. ಮಕ್ಕಳ ಉದ್ಧಾರಕ್ಕೆ ಎಷ್ಟು ಶಾಲೆ ತೆರೆದಿವೆ. ಹಿಂದೆ 10 ಜನ ಸೇರಿ ಹಣ ಹಾಕಿ ಗ್ರಾಮದಲ್ಲಿ ಒಂದು ಶಾಲೆ ತೆರೆಯುತ್ತಿದ್ದರು. ಈಗ ಹಣ ಮಾಡಲು ಶಾಲೆ ತೆರೆಯುತ್ತಿದ್ದಾರೆ. ಇದಕ್ಕೆ ಯಾಕೆ ಪ್ರೋತ್ಸಾಹ ನೀಡುತ್ತೀರಿ. ಉನ್ನತ ಶಿಕ್ಷಣದಲ್ಲಿ ಹೇಗೆ ಇರಲಿ. ಎಲ್‌ಕೆಜಿಯಿಂದ ಪಿಯುಸಿವರೆಗೆ ಏಕರೂಪ, ಉಚಿತ, ಕಡ್ಡಾಯ ಶಿಕ್ಷಣ ಬೇಕು. ಸರಕಾರ ಈಗಾಗಲೇ ಊಟ, ಬಟ್ಟೆ, ಶೂ, ಪುಸ್ತಕ ಉಚಿತವಾಗಿ ಕೊಡುತ್ತಿದೆ. ಜತೆಗೆ ಮಕ್ಕಳನ್ನು ಕರೆದುಕೊಂಡು ಬರ ಲು ವಾಹನ ವ್ಯವಸ್ಥೆ ಮಾಡಬೇಕು. ನಾನೇ ಇದರ ಬಗ್ಗೆ ಸಲಹೆ ಕೊಟ್ಟಿದ್ದೆ. ಆರಂಭಿಕವಾಗಿ 26 ಕೋಟಿ ಖರ್ಚು ಬರಬಹುದು. ಹೇಗೆ ಅನುಷ್ಠಾನ ಮಾಡಬೇಕು ಎಂಬುದನ್ನು ಯೋಜನೆ ಮಾಡಬೇಕು. ಗ್ರಾ.ಪಂ. ಮಟ್ಟದಲ್ಲಿ ಒಂದರಿಂದ ಎರಡು ಉತ್ತಮ ಶಾಲೆ ಆಯ್ಕೆ ಮಾಡಿಕೊಂಡು ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡಿ ಅಲ್ಲಿಗೆ ಶಿಕ್ಷಕರನ್ನು ನಿಯೋಜಿಸಬೇಕು.
ನಾವು ಯಾವುದನ್ನೂ ಬೇಕಾದರೂ ಓದುವ ಆಯ್ಕೆ ಕೊಟ್ಟಿದ್ದು ಸರಿ. ಆದರೆ ಒಂದರಿಂದ ಏಳನೇ ತರಗತಿವರೆಗೆ ಒಬ್ಬರೇ ಶಿಕ್ಷಕರಿದ್ದರೆ ಯಾವ ಪಾಠ ಮಾಡುತ್ತೀರಾ. ಈ ವ್ಯವಸ್ಥೆ ಮೊದಲು ಕೊನೆಗಾಣಬೇಕಿದೆ.
-ಕಿಮ್ಮನೆ ರತ್ನಾಕರ್, ಮಾಜಿ ಶಿಕ್ಷಣ ಸಚಿವರು