Advertisement
ಮಕ್ಕಳ ಭವಿಷ್ಯದ ಜತೆ ಚೆಲ್ಲಾಟ ಆಡುವುದು ಬೇಡ
Related Articles
Advertisement
2023ರಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯ ಸರಕಾರ ರಾಜಕಾರಣವನ್ನು ಮನಸ್ಸಿನಲ್ಲಿಟ್ಟುಕೊಂಡು “ರಾಷ್ಟ್ರೀಯ ಶಿಕ್ಷಣ ನೀತಿ 2020′ ಧಿಕ್ಕರಿಸಿದೆ. ಅದರ ಬದಲು ನಮ್ಮ ರಾಜ್ಯಕ್ಕೆ ಪ್ರತ್ಯೇಕ ಶಿಕ್ಷಣ ನೀತಿಯನ್ನು ಹೊಂದುವುದಾಗಿ ಘೋಷಿಸಿದೆ. 50 ಲಕ್ಷಕ್ಕೂ ಹೆಚ್ಚು ಮಕ್ಕಳು ರಾಜ್ಯ ಪಠ್ಯಕ್ರಮದ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿ¨ªಾರೆ. ಇಷ್ಟೇ ಸಂಖ್ಯೆಯ ಮಕ್ಕಳು ಖಾಸಗಿ ವ್ಯವಸ್ಥೆಯಲ್ಲಿ ರಾಜ್ಯ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡುತ್ತಿ¨ªಾರೆ. ರಾಜ್ಯದ ಭವಿಷ್ಯದ ಮೇಲೆ ಪರಿಣಾಮ ಬೀರುವ ನೀತಿ ನಿರೂಪಿಸುವ ಸಂದರ್ಭದಲ್ಲಿ ರಾಜ್ಯ ಸರಕಾರ ಶಿಕ್ಷಣ ತಜ್ಞರನ್ನು, ಪಾಲಕರನ್ನು ಒಳಗೊಂಡಿರುವ ಸಮಿತಿಯನ್ನು ರಚಿಸಿಲ್ಲ. ಯಾವುದೇ ವೈಜ್ಞಾನಿಕ, ನ್ಯಾಯಿಕ ತಳಹದಿಯ ಅಭಿಪ್ರಾಯವನ್ನು ಪಡೆದಿಲ್ಲ. ಎನ್‌ಇಪಿಯಲ್ಲಿ ಇರುವಂಥ ಲೋಪ-ದೋಷಗಳ ಬಗ್ಗೆ ಸ್ಪಷ್ಟಪಡಿಸಿಲ್ಲ. ಸಕಾರಣಗಳು ಇಲ್ಲದೇ ಕಾಂಗ್ರೆಸ್ ಪಕ್ಷದ ಚುನಾವಣ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿ, ಅಧಿಕಾರಕ್ಕೆ ಬಂದ ಕೂಡಲೇ ರದ್ದುಗೊಳಿಸಲು ಹೊರಟಿರುವುದು ದುರಾದೃಷ್ಟಕರ. ಯಾವುದೇ ಅಧ್ಯಯನ ವರದಿ ಇಲ್ಲದೆ ಏಕಾಏಕಿ ರದ್ದು ಗೊಳಿಸುವುದು “ಸರ್ವಾಧಿಕಾರ ಧೋ ರಣೆ’ಯನ್ನು ತೋರುತ್ತದೆ.
ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವಾಗ ಅದಕ್ಕೆ ಸಂಬಂಧಿಸಿದ ವಿಷಯಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಸಾರ್ವಜನಿಕರು ಆ ಕ್ಷೇತ್ರಕ್ಕೆ ಸಂಬಂಧಿಸಿದ ತಜ್ಞರ ಅಭಿಪ್ರಾಯ ಪಡೆಯಬೇಕು. ಬಳಿಕ ನಿಯಮಾನುಸಾರ ಕ್ರಮ ಕೈಗೊಳ್ಳಲು ಮುಂದಾಗಬೇಕು. ಪಕ್ಷದ ರಿಸರ್ಚ್ ಟೀಮ್ ಪ್ರಕಟಿಸಿರುವ ಸುಳ್ಳುಗಳ ಆಧಾರದ ಮೇಲೆ ನೀತಿಯನ್ನು ರದ್ದುಗೊಳಿಸುತ್ತೇವೆ ಎನ್ನುವುದು ಕೋಟ್ಯಂತರ ಮಕ್ಕಳ ಭವಿಷ್ಯವನ್ನು ಡೋಲಾಯಮಾನಗೊಳಿಸಿ ಅನಾಹುತಕ್ಕೆ ಎಡೆ ಮಾಡಿಕೊಡುತ್ತದೆ. ಕಾಂಗ್ರೆಸ್ ಪಕ್ಷದ ರಿಸರ್ಚ್ ಟೀಮ್ ಪ್ರಕಟಿಸಿರುವ ದಾಖಲೆಯ ಕೊನೆಯಲ್ಲಿ, ಎಚ್ಚರಿಕೆಯನ್ನು ಮುದ್ರಿಸಲಾಗಿದೆ. ಎನ್‌ಇಪಿ ರದ್ದುಗೊಳಿಸುವ ವಿಚಾರವೂ “ಕಾಂಗ್ರೆಸ್ ಪಕ್ಷದ ಅಧಿಕೃತ ನಿಲುವು ಅಲ್ಲ’ ಎಂದಿದೆ. ಹೀಗಿರುವಾಗ ತಜ್ಞರ ಸಲಹೆ ಪಡೆಯದೇ ಎನ್‌ಇಪಿ ರದ್ದುಗೊಳಿಸುವ ಔಚಿತ್ಯವೇನು? ಅದರ ಪರಿಣಾಮಗಳು ಏನು? ಎನ್‌ಇಪಿ ಈ ರಾಷ್ಟ್ರದ ಭವಿಷ್ಯಕ್ಕಾಗಿ ರೂಪಿಸಿರುವ ನೀತಿಯಾಗಿದೆ. ಹೀಗಾಗಿ ಏಕಪಕ್ಷೀಯ ನಿರ್ಧಾರವನ್ನು ರಾಜ್ಯ ಸರಕಾರ ತೆಗೆದುಕೊಂಡರೆ ಜನರಿಂದ ಬಹುದೊಡ್ಡ ವಿರೋಧವನ್ನು ಎದುರಿಸಬೇಕಾಗುತ್ತದೆ.
ಕರ್ನಾಟಕ ಸರಕಾರ ಎನ್‌ಇಪಿ ರದ್ದುಪಡಿಸಿದರೆ ರಾಜ್ಯ ಪಠ್ಯಕ್ರಮಕ್ಕೆ ಮಾತ್ರ ಅನ್ವಯವಾಗುವುದು. ಸಿಬಿಎಸ್‌ಇ, ಐಸಿಎಸ್‌ಇ ಮತ್ತು ಐಬಿ ಶಾಲೆಗಳಿಗೆ ಅನ್ವಯವಾಗದು. ಆಗ ಸರಕಾರಿ ಶಾಲೆಗಳು ಹಾಗೂ ರಾಜ್ಯ ಪಠ್ಯಕ್ರಮದಲ್ಲಿ ವ್ಯಾಸಂಗ ಮಾಡುವ ಖಾಸಗಿ ಶಾಲೆಗಳ ಮಕ್ಕಳಿಗೆ ಎನ್‌ಇಪಿ ಆಧಾರಿತ ಪಠ್ಯಕ್ರಮದ ಸಮಾನ ಗುಣಮಟ್ಟದ ಶಿಕ್ಷಣದಿಂದ ವಂಚಿಸಿದಂತಾಗುತ್ತದೆ. ರಾಜ್ಯ ಸರಕಾರದ ಅಲ್ಪಸಂಖ್ಯಾಕರ ಶಾಲೆಗಳಲ್ಲಿ ಸಿಬಿಎಸ್‌ಇ ಪಠ್ಯಕ್ರಮ ಇದ್ದು, ಅಲ್ಲಿಯು ವಾಪಸ್ ರಾಜ್ಯ ಪಠ್ಯಕ್ರಮ ಅಳವಡಿಸಿಕೊಳ್ಳಲಾಗುವುದೇ? ಕರ್ನಾಟಕ ರಾಜ್ಯದಲ್ಲಿ ಎನ್‌ಇಪಿ ಆಧಾರಿತಿ ಸಿಬಿಎಸ್‌ಇ ಪಠ್ಯಕ್ರಮ ನಿಷೇಧಿಸಲು ಸಾಧ್ಯವೇ? ಕಾಂಗ್ರೆಸ್ ನಾಯಕರ ಮಕ್ಕಳು ಓದುವ, ಕಾಂಗ್ರೆಸ್ ನಾಯಕರ ಒಡೆತನ ಸಿಬಿಎಸ್‌ಇ ಶಾಲೆಗಳಲ್ಲಿ ಉದ್ದೇಶಿತ ರಾಜ್ಯ ಪಠ್ಯಕ್ರಮವನ್ನು ಅಳವಡಿಸಿಕೊಳ್ಳಲಾಗುವುದೇ?
ಎನ್‌ಇಪಿ ಎಂದರೆ ದೇಶದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಒಂದು ಧನಾತ್ಮಕವಾದ ಅಮೂಲಾಗ್ರ ಬದಲಾವಣೆಯಾಗಿದೆ. ಅದನ್ನು ರೂಪಿಸುವಾಗ ದೇಶದ ಎಲ್ಲ ಕಡೆಗಳಿಂದಲೂ ಅಭಿಪ್ರಾಯ ಸಂಗ್ರಹಿಸಲಾಯಿತು. ಚರ್ಚೆಗಳು ನಡೆದವು, ಸಲಹೆಗಳನ್ನು ಪಡೆಯಲಾಯಿತು. ಅವುಗಳನ್ನು ಸಾರ್ವಜನಿಕಗೊಳಿಸಲಾಯಿತು. ಎನ್‌ಇಪಿಯನ್ನು ಕರ್ನಾಟಕದಲ್ಲಿ ಬಿಜೆಪಿ ಸರಕಾರ ಸಾರ್ವಜನಿಕವಾಗಿ, ಶಿಕ್ಷಣ ತಜ್ಞರ ಜತೆಗೆ ಚರ್ಚಿಸಿ, ಈಗಾಗಲೇ ಅನುಷ್ಠಾನಗೊಳಿಸಿದೆ. ಈ ಹಂತದಲ್ಲಿ ವ್ಯತಿರಿಕ್ತವಾಗಿ ನಿರ್ಣಯ ತೆಗೆದುಕೊಂಡರೆ, ರಾಜ್ಯ ಸರಕಾರದ ನಿರ್ಧಾರದ ಕಾರಣದಿಂದ ಉಳಿದೆಲ್ಲ ಕ್ಷೇತ್ರಗಳಲ್ಲಿ ಗೊಂದಲಗಳು ಹೇಗೆ ಹೆಚ್ಚಾಗಿದೆಯೋ ಹಾಗೆ ಶಿಕ್ಷಣ ಕ್ಷೇತ್ರದಲ್ಲೂ ಆಗುವ ಮೂಲಕ ನಮ್ಮ ಯುವಕರಿಗೆ ಭವಿಷ್ಯದ ಅವಕಾಶಗಳಿಂದ ವಂಚಿತರಾಗುವಂತ ದುಸ್ಥಿತಿಯನ್ನು ಕಾಂಗ್ರೆಸ್ ಸರಕಾರ ತಂದಂತಾಗುತ್ತದೆ.
ಸಿದ್ದರಾಮಯ್ಯ ಸರಕಾರ ಎನ್‌ಇಪಿಗೆ ಮಿಗಿಲಾದ ಶಿಕ್ಷಣ ನೀತಿಯನ್ನು ತರುವುದಾದರೆ ಆ ಬಗ್ಗೆ ಶಿಕ್ಷಣ ಕ್ಷೇತ್ರದಲ್ಲಿ ಸಮಗ್ರ ಚರ್ಚೆಯಾಗಲಿ. ತಜ್ಞರು ಅಭಿಪ್ರಾಯವನ್ನು ಪಡೆಯಲಿ. ಲೋಕಸಭೆ ಚುನಾವಣೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಒಕ್ಕೂಟ ವ್ಯವಸ್ಥೆಯಲ್ಲಿ ಬಿಕ್ಕಟ್ಟು ಸೃಷ್ಟಿಸುವ ಕೆಟ್ಟ ನಿರ್ಧಾರದಿಂದ ಹಿಂದೆ ಸರಿಯಲಿ. ಸಂಕುಚಿತ ಮನೋಭಾವವನ್ನು ರಾಜ್ಯ ಸರಕಾರ ತ್ಯಜಿಸಲಿ. ಚರ್ಚೆ, ಅಭಿಪ್ರಾಯ, ಪಾರದರ್ಶಕತೆ ಇಲ್ಲದೇ ಎನ್‌ಇಪಿ ರದ್ದುಗೊಳಿಸಿ, ರಾಜ್ಯ ನೀತಿಯನ್ನು ರೂಪಿಸಲು ಮುಂದಾದರೆ ಕಾಂಗ್ರೆಸ್ ಸರಕಾರವನ್ನು ಜನರೇ ಕಿತ್ತೂಗೆಯುತ್ತಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಿಕ್ಷಣ ಸಚಿವ
ಎನ್‌ಇಪಿ-ಎಸ್‌ಇಪಿ ಉತ್ತಮ ಅಂಶಗಳನ್ನು ಪಡೆಯಿರಿ
ಕೇಂದ್ರ ಸರಕಾರ ರೂಪಿಸಿದ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯನ್ನು ಕರ್ನಾಟಕದ ಹಿಂದಿನ ಬಿಜೆಪಿ ಸರಕಾರ ರಾಷ್ಟ್ರದಲ್ಲಿ ಮೊಟ್ಟ ಮೊದಲ ಬಾರಿಗೆ ಜಾರಿಗೆ ತಂದಿತು. ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಎನ್‌ಇಪಿಯನ್ನು ಕೈಬಿಟ್ಟಿದೆ. ಇದು ಈಗ ರಾಜ್ಯದಲ್ಲಿ ಚರ್ಚೆಯ ವಿಷಯವಾಗಿದೆ. ಈ ವಿಚಾರದಲ್ಲಿ ನನ್ನ ನಿಲುವು ಸ್ಪಷ್ಟವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಾರಸಾಗಟು ತಿರಸ್ಕರಿಸಬೇಕು ಅಂತ ಏನೂ ಇಲ್ಲ. ಎನ್‌ಇಪಿಯಲ್ಲೂ ಹಲವಾರು ಉತ್ತಮ ಅಂಶಗಳಿವೆ. ರಾಜ್ಯ ಶಿಕ್ಷಣ ನೀತಿಯಲ್ಲೂ ಅನೇಕ ಉತ್ತಮ ಅಂಶಗಳಿವೆ. ಈ ಎರಡೂ ಶೈಕ್ಷಣಿಕ ಪದ್ಧತಿಯಲ್ಲಿರುವ ಉತ್ತಮ ಅಂಶಗಳನ್ನು ನಾವು ಸ್ವೀಕರಿಸಬೇಕು. ಉಳಿದ ಅಂಶಗಳನ್ನು ತಿರಸ್ಕರಿಸಬೇಕು. ಇಂತಹ ನಿರ್ಧಾರ ಕೈಗೊಳ್ಳುವ ಮುನ್ನ ತಜ್ಞರ ಸಮಿತಿ ರಚಿಸಿ ವರದಿ ಪಡೆಯಬೇಕು. ಎನ್‌ಇಪಿ ಹಾಗೂ ರಾಜ್ಯ ಶಿಕ್ಷಣ ನೀತಿಯನ್ನು ಮಿಶ್ರಣ ಮಾಡಿ ಹೊಸ ಪದ್ಧತಿ ರೂಪಿಸಬೇಕು.
ಜನತಂತ್ರ ವ್ಯವಸ್ಥೆಯಲ್ಲಿ ಜನಾದೇಶ ಪಡೆದ ಸರಕಾರಗಳು ಜನಹಿತಕ್ಕಾಗಿ ಕಾರ್ಯಕ್ರಮ ಜಾರಿಗೊಳಿಸುವಾಗ ಸಮುದಾಯದ ಸಹಭಾಗಿತ್ವ ಬಹಳ ಮುಖ್ಯ. ಸಮುದಾಯದ ಸಹಭಾಗಿತ್ವ ಇದ್ದರೆ ಮಾತ್ರ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯ. ಆದರೆ ನಾವು ಹೊಸ ಶಿಕ್ಷಣ ಪದ್ಧತಿ ಜಾರಿಗೊಳಿಸುವ ಮುನ್ನ ಸಮುದಾಯವನ್ನು ಕೇಳುತ್ತಿಲ್ಲ, ಶಿಕ್ಷಕರನ್ನು ಕೇಳುತ್ತಿಲ್ಲ, ಪೋಷಕರನ್ನೂ ಕೇಳುತ್ತಿಲ್ಲ. ವಿದ್ಯಾರ್ಥಿಗಳನ್ನೂ ಮಾತೇ ಆಡಿಸುತ್ತಿಲ್ಲ. ನಿಜವಾದ ಶಿಕ್ಷಣ ತಜ್ಞರ ಜತೆ ಸಮಾಲೋಚಿಸುತ್ತಿಲ್ಲ. ಹೀಗಾದರೆ ಹೇಗೆ? ಹತ್ತಾರು ಶಾಲಾ- ಕಾಲೇಜುಗಳನ್ನು ಹೊಂದಿ ಶಿಕ್ಷಣವನ್ನು ವ್ಯಾಪಾರದ ಸರಕನ್ನಾಗಿಸಿಕೊಂಡಿರುವವರ ಬಳಿ ಚರ್ಚಿಸುವುದು ಸರಿಯೇ? ಶಿಕ್ಷಣದ ವ್ಯಾಪಾರಿಗಳು ನಿಜವಾದ ಶಿಕ್ಷಣ ತಜ್ಞರೇ? ಸರಕಾರಗಳು ಇಂತಹ ಶಿಕ್ಷಣ ವ್ಯಾಪಾರಿಗಳನ್ನೇ ಶಿಕ್ಷಣ ತಜ್ಞರು ಅಂತ ಭಾವಿಸಿ ಅವರ ಸಲಹೆ ತೆಗೆದುಕೊಳ್ಳಲು ಉತ್ಸುಕಗೊಂಡಿವೆ. ಹೀಗೆ ಸಲಹೆ ಪಡೆದರೆ ಅದು ಶಿಕ್ಷಣದ ಉತ್ಸವ ಆಗುತ್ತದೆ ಅಷ್ಟೇ, ಜ್ಞಾನ ಆಗುವುದಿಲ್ಲ.
ನಮ್ಮ ಶಿಕ್ಷಣ ವ್ಯವಸ್ಥೆ ವಿಷಯ ಆಧರಿತ, ಜ್ಞಾನ ಆಧರಿತ, ಸ್ವಾತಂತ್ರ್ಯ ಆಧರಿತ, ವಿಜ್ಞಾನ ಆಧರಿತ, ಸಂಸ್ಕೃತಿ ಆಧರಿತ, ಸಂಸ್ಕಾರದ ಆಧರಿತ, ಸಮಾಜದ ಸಮಸ್ತರನ್ನೂ ಒಳಗೊಂಡ ಶಿಕ್ಷಣ ವ್ಯವಸ್ಥೆ ಆಗಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ 1 ರಿಂದ 12ನೇ ತರಗತಿವರೆಗೆ ಶಿಕ್ಷಣ ಬಹಳ ಮುಖ್ಯವಾದದ್ದು. ಎನ್‌ಇಪಿಯನ್ನು ಶಾಲಾ ಶಿಕ್ಷಣ ಹಂತದಲ್ಲಿ ಜಾರಿಗೊಳಿಸದೇ ಪದವಿ ಹಂತದಲ್ಲಿ ಜಾರಿಗೆ ತಂದಿದ್ದೇವೆ. ಇದರಿಂದ ಏನು ಪ್ರಯೋಜನ? ಬುಡವನ್ನು ಬಿಟ್ಟು ಕೊಂಬೆಗೆ ನೀರು ಹರಿಸಿದರೆ ಹೇಗಿರುತ್ತದೆ? ಬುಡಕ್ಕೆ ನೀರುಣಿಸಿ ಕೊಂಬೆ ಬೆಳೆಯಬೇಕು. ಬುಡಕ್ಕೆ ನೀರು ಹಾಕದೇ ಕೊಂಬೆಗೆ ನೀರು ಹಾಕುತ್ತೀರಾ? ಹಿಂದಿನ ಬಿಜೆಪಿ ಸರಕಾರ ಹೀಗೆ ಮಾಡಿತ್ತು.
ಇನ್ನು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕನ್ನಡಕ್ಕೆ ಅನುವಾದಗೊಂಡಿಲ್ಲ. ಎನ್‌ಇಪಿ ಎಲ್ಲ ಭಾಷೆಗಳಲ್ಲೂ ಭಾಷಾಂತರವಾಗಬೇಕು. ಕನ್ನಡ ಭಾಷೆಯಲ್ಲಿ ಕನ್ನಡಿಗರಿಗೆ ದೊರೆಯಬೇಕು. ಎನ್‌ಇಪಿಯನ್ನು ಯಾವ ಶಾಲಾ-ಕಾಲೇಜುಗಳ ಪ್ರಾಂಶುಪಾಲರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ನಾನು ವಿಧಾನಪರಿಷತ್ತಿನಲ್ಲಿ ಎನ್‌ಇಪಿ ಕುರಿತು ಮಾತಾಡಿದ್ದೇನೆ. ಆಗ ಬಿಜೆಪಿ ಸರಕಾರದಲ್ಲಿದ್ದ ಸಚಿವರಿಗೇ ಎನ್‌ಇಪಿ ಬಗ್ಗೆ ಹೆಚ್ಚಿನ ಅರಿವಿಲ್ಲ ಅಂತ ಹೇಳಿದ್ದೇನೆ. ಮಂತ್ರಿಗಳು, ಅಧಿಕಾರಿಗಳು ಎನ್‌ಇಪಿಯನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಸುಖಾಸುಮ್ಮನೇ ಮಾತಾಡಿದರೆ ಹೇಗೆ? ಎನ್‌ಇಪಿ ಅಥವಾ ಎಸ್‌ಇಪಿ ಯಾವುದೇ ಶಿಕ್ಷಣ ಪದ್ಧತಿ ಇರಬಹುದು, ಶೈಕ್ಷಣಿಕ ವಾತಾವರಣದಲ್ಲಿ ವಿಸ್ತೃತವಾದ ಚರ್ಚೆ ಆಗಬೇಕು. ಶಿಕ್ಷಣವನ್ನು ಆಮೂಲಾಗ್ರವಾಗಿ ಬಲ್ಲ ತಜ್ಞರನ್ನು ಸೇರಿಸಿಕೊಂಡು ಚರ್ಚೆ ಮಾಡಬೇಕು. ಇಂತಹ ಚರ್ಚೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಇರಬೇಕು. ಜನತಂತ್ರ ವ್ಯವಸ್ಥೆಯಲ್ಲಿ ಜನ ಹೇಳಿದ್ದನ್ನು ಸ್ವೀಕಾರ ಮಾಡಬೇಕು. ಸರಕಾರಗಳು ಈ ಸಲಹೆಗಳನ್ನು ಜಾರಿಗೊಳಿಸಬೇಕು.
ಹಿಂದಿನ ಬಿಜೆಪಿ ಸರಕಾರ ಜಾರಿಗೊಳಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಸ್ತುತ ರಾಜ್ಯ ಸರಕಾರ ಏಕಾಏಕಿ ರದ್ದುಪಡಿಸಿದ್ದೇವೆ ಅಂತ ಹೇಳಿದ್ದು ಸರಿಯಲ್ಲ. ನಿಜ, ಸರಕಾರಕ್ಕೆ ಇಂತಹ ತೀರ್ಮಾನಗಳನ್ನು ಕೈಗೊಳ್ಳಲು ಅಧಿಕಾರ ಇರುತ್ತದೆ. ಆದರೆ ಜನತಂತ್ರ ವ್ಯವಸ್ಥೆಯಲ್ಲಿ ಸರಕಾರಗಳು ತೀರ್ಮಾನಿಸುವ ಮುನ್ನ ಜನರ ಜತೆ ಚರ್ಚಿಸಬೇಕು. ಹಿಂದಿನ ಬಿಜೆಪಿ ಸರಕಾರ ಹೇಗೆ ಎನ್‌ಇಪಿಯನ್ನು ಏಕಾಏಕಿ ಆತುರದಿಂದ ಜಾರಿಗೊಳಿಸಿ ತಪ್ಪು ಮಾಡಿತೋ ಅದೇ ರೀತಿ ಪ್ರಸ್ತುತ ರಾಜ್ಯ ಸರಕಾರ ಏಕಾಏಕಿ ಎನ್‌ಇಪಿಯನ್ನು ರದ್ದುಪಡಿಸಿದ್ದು ಕಾರ್ಯಸಾಧುವಲ್ಲ. ರಾಜ್ಯ ಶಿಕ್ಷಣ ನೀತಿಯೊಂದಿಗೆ ಎನ್‌ಇಪಿಯ ಉತ್ತಮ ಅಂಶಗಳನ್ನು ಮಿಶ್ರಣ ಮಾಡಿಕೊಳ್ಳಬೇಕು.
ಕೊನೆಯದಾಗಿ ಒಂದು ಮಾತು-
ಒಂದು ಸರಕಾರದ ನೀತಿಯು ಮತ್ತೂಂದು ಸರಕಾರಕ್ಕೆ ಮೈಲಿಗೆ ಆಗಬಾರದು. ಒಂದು ಸರಕಾರದ ನೀತಿಯನ್ನು ಕೈಬಿಡುವ ಮುನ್ನ ಚರ್ಚೆ ಮಾಡಬೇಕು. ಮೊದಲು ನಿರ್ಧಾರ ಮಾಡುತ್ತೇವೆ ಅನಂತರ ಚರ್ಚೆ ಮಾಡುತ್ತೇವೆ ಎಂಬ ನಿಲುವು ಸರಿಯಲ್ಲ.
ಎಚ್.ವಿಶ್ವನಾಥ್, ಮಾಜಿ ಶಿಕ್ಷಣ ಸಚಿವ, ವಿಧಾನ ಪರಿಷತ್ ಸದಸ್ಯ