ಏನಯ್ಯ ನಿನ್ನ ಲೀಲೆ? ಹೀಗ್ಯಾಕೆ ಅನುಕ್ಷಣ ಎಡೆಬಿಡದೆ, ನಿದ್ದೆಯ ಕನವರಿಕೆಯಲ್ಲೂ, ಹಗಲಿನ ಜೋಂಪಿನಲ್ಲೂ, ಸಂತಸದಲ್ಲಿ, ಕೋಪದಲ್ಲಿ, ವೇದನೆಯಲ್ಲಿ ಅಷ್ಟೆಲ್ಲಾ ಯಾಕೆ ಎಕ್ಸಾಮ್ ಹಾಲ್‌ನಲ್ಲೂ ಕಾಡುವುದೇನೋ ಹುಡುಗ? ಹೊರಗಡೆ ಮೈ ಕೊರೆವ ಚಳಿ ಒಳಗಡೆ ಧಗಧಗಿಸುವ ನಿನ್ನ ನೆನಪು. ಯಾಕಿಷ್ಟು ಕೋಪ, ತಿರಸ್ಕಾರ ನನ್ನ ಮೇಲೆ? ಯಾಕೋ ಕಣ್ಣೀರಾದೆ ಇಂದು ನಿನ್ನ ನೆನೆದು. ಹರೆಯದಲ್ಲಿ ಈ ಅನುರಾಗ ಚೆಲ್ಲಾಟಗಳು ಇನಿಯನ ದನಿಗಾಗಿ ಹಾತೊರೆಯುವುದು ಸಹಜ ಬಿಡು. ಆದರೆ ಮುಪ್ಪಿನಲ್ಲೂ ಒಬ್ಬರಿಗೊಬ್ಬರು ಆಸರೆಯಾಗಿ, ಮುಪ್ಪಿನ ಭಯ, ಆತಂಕಗಳು, ಜಿಗುಪ್ಸೆ ಕಾಡದಂತೆ ನಿನ್ನ ಆದರಿಸಿ ಜೊತೆಯಾಗಿರಬೇಕು. ಬರುವ ಸವಾಲುಗಳಿಗೆ ಎದೆಯೊಡ್ಡಿ ನಿನ್ನ ಜತನದಿಂದ ಕಾಪಿಟ್ಟುಕೊಳ್ಳಬೇಕು ಎನಿಸುತ್ತದೆ.
Advertisement
ಆ ಕಾಲವು ನಿರ್ಧರಿಸುತ್ತದೆ ನನ್ನ ಒಲವ ಬಲವು ಎಷ್ಟಿದೆಯೆಂದು. ಒಂದೊಮ್ಮೆ ನಿನ್ನನ್ನು ವರ್ಣಿಸಿ ಕವನವನ್ನೋ ಲೇಖನವನ್ನೋ ಬರೆಯೋಣ ಎಂದುಕೊಳ್ಳುತ್ತೇನೆ. ಪದಗಳು ಸಾಕೆನಿಸುವುದಿಲ್ಲ, ಮುಗಿಯದಷ್ಟು ರಾಶಿ ರಾಶಿ ಭಾವಗಳು. ಏನಿದೆಯೋ ಅಷ್ಟು ನಿನ್ನಲ್ಲಿ? ಈ ತರಹ ಒಬ್ಬ ಹುಡುಗಿಗೆ ನಿನ್ನ ಹುಚ್ಚು ಹಿಡಿಸುವ ಪರಿಯೇನು ಹುಡುಗ? ಮನಸ್ಸು ನಿನ್ನಲ್ಲಿ ಸೋತಾಯಿತು. ಅದೆಂತಹ ಮನೋಹರವಾದ ಮೋಹ ನಿನ್ನಲ್ಲಿ ತಳೆದಿದೆ. ಸದಾ ಹಠ ಹಿಡಿವ ಕಣ್ಣ ಬಿಂದುಗಳು ನಿನ್ನ ನೆನೆದಾಗ ಮಾತ್ರ ಸರಾಗವಾಗಿ ಹರಿಯುತ್ತವೆ. ಹೀಗೇಕೆ ನೀ ಮೌನದಿ ದೂರ ಸರಿದೆ ಜೀವ ಚೇತನವೆ? ಸುಖವಿರಲಿ ದುಃಖವಿರಲಿ, ನಿನ್ನ ನೆನಪಿರಲಿ ಕಣೋ. ಜೀವ ಜೀವದ ಕಣವೂ ನೀನಾಗಿರುವಾಗ ಬೇರೇನನ್ನೂ ನೆನೆಯದಾದೆ ಗೆಳೆಯ. ಒಲವಿನ ಭಾವ ತರಂಗಿಣಿಯನ್ನು ಹರಿಸುವ ಸವಿಜೇನ ಪನ್ನೀರು ನೀನು. ಇಷ್ಟು ದಿನದ ನಿನ್ನ ಸಾಂಗತ್ಯದಲ್ಲಿ ಒಂದು ದಿನವೂ ಒಂಟಿಯೆನಿಸಿರಲಿಲ್ಲ. ದೂರವಿದ್ದರೂ, ನೀ ನನಗೆ ಸಿಗುವುದಿಲ್ಲ ಎಂದು ತಿಳಿದಿದ್ದರೂ ನಿನ್ನ ನೆನಪಲ್ಲಿ ಬದುಕಬಲ್ಲೆ ಎಂದು ಪಣ ತೊಟ್ಟವಳು. ಆದರೂ ನನ್ನ ಪ್ರೀತಿಯಲ್ಲಿ ನಿನಗ್ಯಾಕೆ ಅಪಶ್ರುತಿ ಹೊಮ್ಮಿತು? ಕಾರಣ ತಿಳಿಯುತ್ತಿಲ್ಲ.
– ಇಂತಿ ನಿನ್ನ ಅಭಿಸಾರಿಕೆ
Related Articles
Advertisement