Advertisement
ನೆಲ್ಲಿ ತೀರ್ಥ ಸೋಮೇಶ್ವರ ಗುಹಾ ದೇವಾಲಯವು ಕರಾವಳಿಯ ಪ್ರಸಿದ್ಧವಾದ ದೇವಾಲಯಗಳಲ್ಲಿ ಒಂದಾಗಿದೆ. ಇದೊಂದು ಗುಹಾ ದೇವಾಲಯವಾಗಿದ್ದು ಮಹಾ ಶಿವನು ಲಿಂಗ ಸ್ವರೂಪಿಯಾಗಿ ಇಲ್ಲಿ ನೆಲೆಸಿದ್ದಾನೆ.
Related Articles
Advertisement
ಶಿವಲಿಂಗದ ದರ್ಶನ ಪಡೆಯಲು ಬರುವ ಭಕ್ತರು ಗುಹೆಯ ಹೊರಭಾಗದಲ್ಲಿರುವ ನಾಗಪ್ಪ ಕೆರೆಯಲ್ಲಿ ಸ್ನಾನ ಮಾಡಿ ಮಡಿ ಬಟ್ಟೆಯಲ್ಲಿ ಗುಹೆಯನ್ನು ಪ್ರವೇಶಿಸಬೇಕು ಎಂಬುದು ಇಲ್ಲಿನ ಪ್ರತೀತಿ, ಹಾಗಾಗಿ ಭಕ್ತರು ದೇವರ ದರ್ಶನಕ್ಕೆ ಬರುವ ಸಂದರ್ಭ ಒಂದು ಜೊತೆ ಬಟ್ಟೆಯನ್ನು ತರಬೇಕಾಗುತ್ತದೆ. ಕಿರಿದಾದ ಗುಹೆ :
ಗುಹೆಯು ಸುಮಾರು ಇನ್ನೂರು ಮೀಟರ್ ದೂರ ಇರುವುದರಿಂದ ಕೆಲವೊಂದು ಕಡೆ ತುಂಬಾ ಕಿರಿದಾಗಿದೆ ಇಲ್ಲಿ ಮಂಡಿಯೂರಿ ಮುಂದೆ ಸಾಗಬೇಕಾಗುತ್ತದೆ, ಅಲ್ಲದೆ ಬೆಳಕು ಇಲ್ಲದಿರುವುದರಿಂದ ಬೆಳಕಿನ ವ್ಯವಸ್ಥೆ (ಟಾರ್ಚ್ ಅಥವಾ ದೊಂದಿ) ಮಾಡಿಕೊಂಡು ಸಾಗಬೇಕಾಗುತ್ತದೆ. ನೆಲ್ಲಿತೀರ್ಥ ಹೆಸರು ಬಂದದ್ದು ಹೀಗೆ :
ಗುಹೆಯು ಕೆಂಪು ಕಲ್ಲಿನಿಂದ ಆವರಿಸಿದ್ದು ಒಳ ಪ್ರವೇಶಿಸಿದಂತೆ ಕಲ್ಲಿನ ಸಂದುಗಳಲ್ಲಿ ನೆಲ್ಲಿಕಾಯಿ ಆಕಾರದಲ್ಲಿ ನೀರಿನ ಹನಿಗಳು ಜಿನುಗುತ್ತಿರುತ್ತವೆ ಹಾಗಾಗಿ ಈ ಪ್ರಸಿದ್ಧ ಸ್ಥಳಕ್ಕೆ ನೆಲ್ಲಿತೀರ್ಥ ಎಂಬ ಹೆಸರು ಬಂತು ಎಂದು ಹೇಳಲಾಗುತ್ತಿದೆ. ಈ ಶಿವಲಿಂಗದ ಸುತ್ತಲೂ ಸದಾ ನೀರು ಹರಿಯುತ್ತಿರುತ್ತದೆ ಇದನ್ನು ಉದ್ಭವ ಗಂಗೆ ಎಂದು ಕರೆಯುತ್ತಾರೆ ಅಲ್ಲದೆ ಇಲ್ಲಿಗೆ ಭೇಟಿ ನೀಡಿದ ಭಕ್ತರು ಈ ನೀರಿನಿಂದಲೇ ಶಿವಲಿಂಗಕ್ಕೆ ಅಭಿಷೇಕವನ್ನು ಮಾಡುತ್ತಾರೆ. ಜೊತೆಗೆ ತೀರ್ಥ ರೂಪದಲ್ಲಿ ಈ ನೀರನ್ನು ಕೊಂಡೊಯ್ಯುತ್ತಾರೆ ಅಷ್ಟು ಮಾತ್ರವಲ್ಲದೆ ಇಲ್ಲಿರುವ ಮೃತ್ತಿಕೆಯನ್ನು ಮೈಗೆ ಹಚ್ಚಿಕೊಂಡರೆ ಚರ್ಮ ರೋಗಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆಯೂ ಇದೆ.
ಅಂದಹಾಗೆ ಈ ಗುಹೆಯಲ್ಲಿ ಭಕ್ತರಿಗೆ ಶಿವ ಲಿಂಗದ ಬಳಿ ತನಕ ಹೋಗಲು ಅವಕಾಶ ಮಾಡಲಾಗಿದೆ ಪುರಾಣದ ಪ್ರಕಾರ ಈ ಗುಹೆಯು ಮುಂದುವರೆದು ಕಾಶಿಗೆ ಸಂಪರ್ಕ ಹೊಂದಿದೆ ಎಂದು ಹೇಳಲಾಗಿದೆ. ಮುಂದೆ ಈ ಗುಹೆಯು ತೀರಾ ಕಡಿದಾದ ರೀತಿಯಲ್ಲಿ ಗೋಚರಿಸುತ್ತಿದ್ದು ಶಿವಲಿಂಗದಿಂದ ನಂತರ ಗುಹೆಯೊಳಗೆ ಮುಂದುವರೆಯಲು ಯಾರಿಗೂ ಅವಕಾಶವಿಲ್ಲ. ಜಾಬಾಲಿ ಮಹರ್ಷಿಯ ತಪಸ್ಸಿನ ತಾಣ
ಸ್ಥಳ ಪುರಾಣದ ಪ್ರಕಾರ ಈ ಗುಹೆಯು ಮಹರ್ಷಿ ಜಾಬಾಲಿಯ ತಪಸ್ಸಿನ ತಾಣವಾಗಿತ್ತಂತೆ ಈ ನೆಲ್ಲಿತೀರ್ಥಕ್ಕೂ ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರಕ್ಕೂ ಅನನ್ಯವಾದ ಸಂಬಂಧವಿದೆಯಂತೆ ಜಾಬಾಲಿ ಮಹರ್ಷಿಯ ಬಳಿ ಅರುಣಾಸುರನೆಂಬ ರಾಕ್ಷಸ ಗಾಯತ್ರಿ ಮಂತ್ರ ಕಲಿಯುತ್ತಿದ್ದನಂತೆ ಆದರೆ ಅರುಣಾಸುರ ಕಲಿಯುತ್ತಿರುವ ಗಾಯತ್ರಿ ಮಂತ್ರವನ್ನು ಜನರ ಒಳಿತಿಗಾಗಿ ಬಳಸುವ ಬದಲು ಗಾಯತ್ರಿ ಮಂತ್ರದ ಶಕ್ತಿಯಿಂದ ರಾಕ್ಷಸ ಅರುಣಾಸುರ ಜಗತ್ತಿನಲ್ಲಿ ಪರಾಕ್ರಮವನ್ನು ಮೆರೆಯಲ್ಲು ಆರಂಭಿಸುತ್ತಾನೆ. ಜಾಬಾಲಿ ಮುನಿಗಳು ಅರುಣಾಸುರನ ಪರಾಕ್ರಮವನ್ನು ತಡೆಯಲಾರದೆ ನೆಲ್ಲಿತೀರ್ಥದಲ್ಲಿರುವ ಗುಹೆಯೊಳಗೆ ಆದಿಶಕ್ತಿಯನ್ನು ಒಲಿಸಿಕೊಳ್ಳಲು ತಪಸ್ಸು ಮಾಡುತ್ತಾರೆ. ಈ ಜಾಬಾಲಿ ಮಹರ್ಷಿಯ ತಪಸ್ಸಿಗೆ ಒಲಿದ ಆದಿಶಕ್ತಿಯು ದುಂಬಿಯ ಆಕಾರದಲ್ಲಿ ಅರುಣಾಸುರನನ್ನು ಸಂಹರಿಸಿ ದುರ್ಗಾಪರಮೇಶ್ವರಿಯಾಗಿ ಅವತರಿಸಿ ಕಟೀಲಿನಲ್ಲಿ ನೆಲೆನಿಲ್ಲುತ್ತಾಳೆ.
ಮಂಗಳೂರಿನಿಂದ ಸುಮಾರು 30ಕಿ.ಮೀ ದೂರದಲ್ಲಿದೆ ಗುಹಾಂತರ ದೇವಾಲಯ. ಮಂಗಳೂರಿನಿಂದ ಮೂಡಬಿದರೆ ರಸ್ತೆಯಲ್ಲಿ ಚಲಿಸುತ್ತಾ ಎಡಪದವಿನಲ್ಲಿ ಎಡಗಡೆ ತಿರುಗಿ 8 ಕಿ.ಮೀ.ಸಾಗಿಯೂ ನೆಲ್ಲಿತೀರ್ಥ ತೀರ್ಥ ಸೋಮೇಶ್ವರ ಗುಹಾ ದೇವಾಲಯವನ್ನು ತಲುಪಬಹುದು. ಕಟೀಲಿನಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿದೆ. ಅದೇ ರೀತಿ ಬಜ್ಪೆಯಿಂದ ಕತ್ತಲ್‌ಸರ್ ರಸ್ತೆಯ ಮೂಲಕವೂ ಇಲ್ಲಿಗೆ ಬರಬಹುದು. ಉಡುಪಿಯಿಂದ ಬರುವವರು ಮೂಲ್ಕಿ, ಕಿನ್ನಿಗೋಳಿ ನಿಡ್ಡೋಡಿಯಿಂದಾಗಿ ನೆಲ್ಲಿತೀರ್ಥಕ್ಕೆ ತಲುಪಬಹುದು. – ಸುಧೀರ್ ಪರ್ಕಳ