ಬಾಗಲಕೋಟೆ: ನೇಕಾರರಿಗೆ ಸರ್ಕಾರ ಜಾರಿಗೊಳಿಸಿದ ನೇಕಾರ ಸಮ್ಮಾನ್ ಯೋಜನೆ ಲಾಭ ಪಡೆದ ಜಿಲ್ಲೆಯ ಯುವ ನೇಕಾರರೊಬ್ಬರು ಸರ್ಕಾರಕ್ಕೆ ವಿಶಿಷ್ಟ ರೀತಿಯಲ್ಲಿ ಕೃತಜ್ಞತೆ ತಿಳಿಸಿದ್ದಾರೆ.
ಇಳಕಲ್ಲ ಪಟ್ಟಣದ ಯುವ ನೇಕಾರ ಮೇಘರಾಜ ಈರಣ್ಣ ಗುದಟಿ ತಮ್ಮ ಕೈಯಾರೇ ಇಳಕಲ್ಲ ಸೀರೆ ನೇಯ್ಗೆ ಮಾಡಿದ್ದು, ಅದು ಪೂರ್ಣಗೊಳ್ಳುವ ಮೊದಲೇ, ರಾಜ್ಯಾದ್ಯಂತ ಫೋಟೋ ವೈರಲ್ ಆಗಿದೆ.
ಮೇಘರಾಜ್ ಬೇರೊಬ್ಬ ನೇಕಾರರ ಬಳಿ ನೇಯ್ಗೆಗಾಗಿ ಕೆಲಸಕ್ಕೆ ಹೋಗುತ್ತಿದ್ದು, ಸರ್ಕಾರದ ನೇಕಾರ ಸಮ್ಮಾನ್ ಯೋಜನೆ ಲಾಭ ಪಡೆದ ಹಿನ್ನೆಲೆಯಲ್ಲಿ ಇಳಕಲ್ಲ ಸೀರೆಯಲ್ಲಿ ಕಮಲದ ಚಿನ್ಹೆ ಜತೆಗೆ 120ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲಲಿ ಎಂದು ಹಾರೈಸಿ ಸೀರೆ ನೇಯ್ದಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಈ ಸೀರೆ ನೇಯ್ಗೆ ಆರಂಭಿಸಿದ್ದು, ಗುರುವಾರ ಸಂಜೆ 6ಕ್ಕೆ ಪೂರ್ಣಗೊಂಡಿದೆ.ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದು ವೈರಲ್ ಆಗಿದೆ.
ಸಿಎಂಗೆ ತಲುಪಿಸುವೆ: ನೇಕಾರ ಸಮ್ಮಾನ ಯೋಜನೆಯಡಿ ಸರ್ಕಾರ ನೀಡಿದ 5 ಸಾವಿರ ಹಣ ನನ್ನ ಬ್ಯಾಂಕ್ ಖಾತೆಗೆ ಹಾಕಿದೆ. ಸಂಕಷ್ಟದಲ್ಲಿರುವ, ನಿತ್ಯವೂ 500ರಿಂದ 600ಕ್ಕೆ ದುಡಿಯುವ ನೇಕಾರರಿಗೆ ಸರ್ಕಾರದ ಈ ಯೋಜನೆಯಿಂದ ಬಹಳಷ್ಟು ಅನುಕೂಲವಾಗುತ್ತಿದೆ. ಹೀಗಾಗಿ ನಾನು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಸೀರೆಯಲ್ಲಿ ಕಮಲ ಚಿನ್ಹೆ, ಮುಂದಿನ ಚುನಾವಣೆಯಲ್ಲಿ 120ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿ ಎಂದು ಹಾರೈಸಿ, ನೇಯ್ದಿದ್ದೇನೆ. ಈ
ಸೀರೆಯನ್ನು ನಮ್ಮ ಸ್ಥಳೀಯ ಶಾಸಕರಾದ ದೊಡ್ಡನಗೌಡ ಪಾಟೀಲ ಅವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಲುಪಿಸಲು ನಿರ್ಧರಿಸಿದ್ದೇನೆ. ಅವರು ಎರಡು ದಿನಗಳ ಹಿಂದೆ ಬಂದಾಗ, ಅವರ ಪತ್ನಿ ಇಳಕಲ್ಲ ಸೀರೆ ತರಲು ಹೇಳಿದ್ದಾರೆ ಎಂದು ಭಾಷಣದಲ್ಲೇ ಹೇಳಿದ್ದರು. ಹೀಗಾಗಿ ಇದೇ ಸೀರೆ ತಲುಪಿಸುತ್ತೇನೆ ಎಂದು ಯುವ ನೇಕಾರ ಮೇಘರಾಜ ಈರಣ್ಣ ಗುದಟಿ ಉದಯವಾಣಿಗೆ ತಿಳಿಸಿದರು.