Advertisement

ನೇಕಾರರ ಅಭಿವೃದ್ಧಿಗೆ ನಿಗಮ ಸ್ಥಾಪನೆ ಮಾಡಿ

05:33 PM Feb 07, 2021 | Team Udayavani |

ಬಾಗಲಕೋಟೆ: ಮಾನವರ ಮಾನ ಮುಚ್ಚುವ ಕೆಲಸ ಮಾಡುವ ಸಮಸ್ತ ನೇಕಾರರ ಅಭಿವೃದ್ಧಿಗಾಗಿ  ನೇಕಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಜಿಲ್ಲೆಯ ಸಮಸ್ತ ನೇಕಾರರ  ಸಮಾಜದವರು ಶನಿವಾರ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ನೇಕಾರ ಸಮುದಾಯದ ವಿವಿಧ ಸ್ವಾಮೀಜಿಗಳ ನೇತೃತ್ವದಲ್ಲಿ ನವನಗರದ ಎಲ್‌ಐಸಿ ವೃತ್ತದಿಂದ ಪ್ರತಿಭಟನೆ ಆರಂಭಿಸಿ, ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಬಳಿಕ ಡಿಸಿ ಕಚೇರಿ ಎದುರು ಕೆಲಹೊತ್ತು ಧರಣಿ ನಡೆಸಿ, ತಮ್ಮ ಬೇಡಿಕೆ ಈಡೇರಿಕೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು. ಉಗ್ರ ಹೋರಾಟಕ್ಕೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹಳೆಹುಬ್ಬಳ್ಳಿಯ ವೀರಭೀಕ್ಷಾವರ್ತಿ ಮಠದ ಜಗದ್ಗುರು ಶ್ರೀ ಶಿವಶಂಕರ ಸ್ವಾಮೀಜಿ, ಗುಳೇದಗುಡ್ಡ ಗುರುಸಿದ್ದೇಶ್ವರ ಮಠದ ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ನೇರಳಕೆರೆಯ ಸಿದ್ದಾರೂಢ ಮಠದ ಶ್ರೀ ಘಣಲಿಂಗ ಸ್ವಾಮೀಜಿ, ಮಾಜಿ ಶಾಸಕ ಮಲ್ಲಿಕಾರ್ಜುನ ಬನ್ನಿ, ಪ್ರಮುಖರಾದ ಎಂ.ಎಂ. ಹಂಡಿ ಮುಂತಾದವರು ಮಾತನಾಡಿ, ನಾವು ಮಾನವನ ಮಾನ ಮುಚ್ಚಿದವರು ಎಂಬ ಹೆಗ್ಗಳಿಕೆ ಪಡೆದಿದ್ದೇವೆ. ನೇಕಾರರಿಗಾಗಿ ಸರ್ಕಾರ ಯಾವುದೇ ಯೋಜನೆ ಜಾರಿಗೊಳಿಸಿದರೂ ಅವರು, ಸಂಘಟಿತ ನೇಕಾರ ವಲಯಕ್ಕೆ ಮಾತ್ರ ತಲುಪುತ್ತಿವೆ. ಅಸಂಘಟಿತ ನೇಕಾರರಿಗೆ ಸರ್ಕಾರದ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ನೇಕಾರ ಸಮಾಜದಲ್ಲಿ ಒಟ್ಟು 42 ಒಳ ಪಂಗಡಗಳಿದ್ದು, ಸಮಸ್ತ ನೇಕಾರರ ಅಭಿವೃದ್ಧಿಗೆ ನಿಗಮ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಅತ್ಯಂತ ಹಿಂದುಳಿದ ಸಮಾಜ: ಕಳೆದ 1979ರಲ್ಲಿ ಎಲ್‌.ಜಿ. ಹಾವನೂರ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ವರದಿಯಂತೆ ಅತ್ಯಂತ ಹಿಂದುಳಿದ ಜಾತಿ ಎಂದು ನೇಕಾರ ಸಮಾಜದ ಉಪ ಪಂಗಡಗಳಾದ ಕುರುಹಿನಶೆಟ್ಟಿ, ಪದ್ಮಸಾಲಿ,ಸ್ವಕುಳಸಾಳಿ, ಹಟಗಾರ, ಬಣಗಾರ, ಶಿಂಪಿ, ಶಿವಶಿಂಪಿ,ಪಟ್ಟಸಾಲಿ, ಮಗ್ಗ, ಬಿಳಿ ಮಗ್ಗ, ಜಾಡ, ಕುರ್ಣಿ,ಕೋಷ್ಟಿ, ತೋಟಗವೀರ, ದೇವಾಂಗ ಎಂಬ ವಿವಿಧ ಹೆಸರಿನಲ್ಲಿ  ಗುರುತಿಸಲಾಗಿದೆ. ಸಧ್ಯ ಪ್ರವರ್ಗ 2ಎ ಮೀಸಲಾತಿಯಡಿ ಬರುತ್ತಿದ್ದು, ಸರ್ಕಾರದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ನೇಕಾರಿಕೆ ಕುಲಕಸುಬನ್ನೇ ನಂಬಿ ಲಕ್ಷಾಂತರ ಜನರು ಜೀವನ ನಡೆಸುತ್ತಿದ್ದಾರೆ ಎಂದರು.

ರಾಜ್ಯದಲ್ಲಿ 1.50 ಲಕ್ಷ ಕೈಮಗ್ಗಗಳು ಇದ್ದವು. 2010ರ ಅಂಕಿ-ಸಂಖ್ಯೆಯ ಪ್ರಕಾರ 85 ಸಾವಿರ ಮಗ್ಗಗಳು ಮಾತ್ರ ಉಳಿದಿವೆ. ಜಿಲ್ಲೆಯಲ್ಲಿ 25 ಸಾವಿರ ಮಗ್ಗಗಳಿದ್ದು, 100 ನೇಕಾರ ಸಹಕಾರ ಸಂಘಗಳಿವೆ. ಅಲ್ಲದೇ 6 ಸಾವಿರ ಕೈಮಗ್ಗಗಳು ಸಹಕಾರಿ ಕ್ಷೇತ್ರದಲ್ಲಿ, 19 ಸಾವಿರ ಮಗ್ಗಗಳಲ್ಲಿ 4 ಸಾವಿರ ಮಗ್ಗಗಳು ಕೈಮಗ್ಗ ಅಭಿವೃದ್ಧಿ ನಿಗಮದಡಿ ಇವೆ. ಉಳಿದ 15 ಸಾವಿರ ಕೈಮಗ್ಗಗಳು, ಅಸಂಘಟಿತ ವಲಯದಲ್ಲಿದ್ದು, ಇದು ಸರ್ಕಾರದ ಅಂಕಿ-ಅಂಶವೇ ಹೇಳುತ್ತದೆ. ಅಸಂಘಟಿತ ವಲಯದ ನೇಕಾರರಿಗೆ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Advertisement

1 ಸಾವಿರ ಕೋಟಿ ಆವರ್ತ ನಿಧಿ ಸ್ಥಾಪಿಸಿ: ರಾಜ್ಯದ ಸಮಸ್ತ ನೇಕಾರರ ಅಭಿವೃದ್ಧಿ ಸ್ಥಾಪಿಸಿ, ನಿಗಮಕ್ಕೆ ಪ್ರಸಕ್ತ ಬಜೆಟ್‌ನಲ್ಲಿ 1 ಸಾವಿರ ಕೋಟಿ ಆವರ್ತ ನಿಧಿಸಿ ಕೊಡಬೇಕು. ಆ ಮೂಲಕ ನೇಕಾರರು ಅನುಭವಿಸುತ್ತಿರುವ ಭವನ ದೂರ ಮಾಡಬೇಕು. ಅಲ್ಲದೇ ನೇಕಾರ ಅಭಿವೃದ್ಧಿ ನಿಗಮ ಸ್ಥಾಪಿಸುವ ಜತೆಗೆ  ಅರಿವು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕರ್ನಾಟಕ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮ, ಕಾವೇರಿ ಕೈಮಗ್ಗ ಅಭಿವೃದ್ಧಿ ನಿಗಮ, ರೇಷ್ಮೆ ಅಭಿವೃದ್ಧಿ ನಿಗಮಕ್ಕೆ ನೇಕಾರಿಗೆ ಕ್ಷೇತ್ರದಲ್ಲಿ ದುಡಿದ ನೇಕಾರ ಸಮುದಾಯದವರನ್ನೇ ಅಧ್ಯಕ್ಷ ಮತ್ತು ಸದಸ್ಯರನ್ನಾಗಿ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ನೇಕಾರರು ಉತ್ಪಾದಿಸಿದ ಬಟ್ಟೆ, ಸೀರೆ, ಇತರೆ ಉತ್ಪನ್ನಗಳನ್ನು ನಿಗಮಗಳ ಮೂಲಕ ಖರೀದಿಸಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಯಾವುದೇ ಭದ್ರತೆ ಇದಲ್ಲೆ ಕನಿಷ್ಠ 10 ಲಕ್ಷ ವರೆಗೆ ಸಾಲ ಸೌಲಭ್ಯ  ಕಲ್ಪಿಸಬೇಕು. ಮಿಲ್‌ ಗಳಲ್ಲಿ ಉತ್ಪಾದಿಸುವ ಬಟ್ಟೆ, ಸೀರೆ ಹೊರತುಪಡಿಸಿ, ನೇಕಾರ ಸಮುದಾಯದವರು ಉತ್ಪಾದಿಸುವ ಮತ್ತು ಅದಕ್ಕೆ ಬೇಕಾಗುವ ಕಚ್ಚಾ ಸಾಮಗ್ರಿಗಳಾದ ನೂಲು, ರೇಷ್ಮೆ ಮುಂತಾದ ಕಚ್ಚಾ ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.

ರೈತರಿಗೆ ನೀಡುವಂತೆ ನೇಕಾರರಿಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಬೇಕು. ರೈತರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ರೀತಿ ನೇಕಾರ ಸಹಕಾರ ಸಂಘ ಸ್ಥಾಪಿಸಿ, ಈ ಸಂಘಗಳ ಮೂಲಕ ನೇಕಾರರಿಗೆ ಕಚ್ಚಾ ವಸ್ತು ಪೂರೈಸಬೇಕು ಎಂದು ಆಗ್ರಹಿಸಿದರು.

ನೇಕಾರ ಅಭಿವೃದ್ಧಿ ನಿಗಮ ಸೇರಿದಂತೆ ಒಟ್ಟು15 ಪ್ರಮುಖ ಬೇಡಿಕೆಗಳ ಮನವಿಯನ್ನು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಸಲ್ಲಿಸಿದರು.

ಇದನ್ನೂ ಓದಿ :ತಾಪಂ ಅಧ್ಯಕ್ಷರಿಗೆ ಸನ್ಮಾನ ಸಮಾರಂಭ

ಬಣಗಾರ ಸಮಾಜದ ಅಧ್ಯಕ್ಷರೂ ಆಗಿರುವ ನಗರಸಭೆ ಸದಸ್ಯ ವೀರಪ್ಪ ಶಿಗರನ್ನವರ, ಹಟಗಾರ ಸಮಾಜದ ಡಾ|ಎಂ.ಎಸ್‌. ದಡ್ಡೇನವರ, ಪದ್ಮಸಾಲಿ ಸಮಾಜದ ಅಧ್ಯಕ್ಷ ಶ್ರೀನಿವಾಸ ಬಳ್ಳಾರಿ, ಶಿವಶಿಂಪಿ ಸಮಾಜದ ಅಧ್ಯಕ್ಷ ನಾಗರಾಜ ಕುಪ್ಪಸ್ತ, ಪಟ್ಟಸಾಲಿ ಸಮಾಜದ ಅಧ್ಯಕ್ಷ ಮುರಿಗೆಪ್ಪ ನಾರಾ, ಮುಖರಾದ ಸದಾನಂದ ನಾರಾ, ಗೋವಿಂದರಾಜ ಬಳ್ಳಾರಿ, ಅನಿತಾ ಸರೋದೆ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next