ಮೊಳಕಾಲ್ಮೂರು: ರಾಜ್ಯದಲ್ಲಿ ನೇಕಾರ ಅಭಿವೃದ್ಧಿ ನಿಗಮ ಸ್ಥಾಪನೆ ಮತ್ತು ಹಿಂದುಳಿದ 2ಎ ಪ್ರವರ್ಗದಲ್ಲಿ ಶೇ. 6 ರಷ್ಟು ಒಳಮೀಸಲಾತಿ ಸೌಲಭ್ಯ ನೀಡಬೇಕೆಂದು ಆಗ್ರಹಿಸಿ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ನೇಕಾರ ಸಮುದಾಯಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ತಾಲೂಕು ನೇಕಾರರ ಸಮುದಾಯಗಳ ಒಕ್ಕೂಟದ ತಾಲೂಕು ಅಧ್ಯಕ್ಷ ಕೆ.ಸಿ. ಮಂಜುನಾಥ ಮಾತನಾಡಿ, ನೇಕಾರರ ಸಮುದಾಯದಲ್ಲಿ ಪದ್ಮಶಾಲಿ, ಪಟ್ಟಸಾಲೆ, ದೇವಾಂಗ, ಕುರುಹಿನಶೆಟ್ಟಿ, ಸ್ವಕುಳಸಾಲಿ, ತೊಗಟವೀರ, ಹಟಗಾರ, ಜಾಡ, ನೇಯ್ಗೆ, ಜೇಡ ಹೀಗೆ ಹಲವಾರು ಸುಮಾರು 26 ಒಳಪಂಗಡಗಳಿವೆ. ನೇಕಾರರು ಕುಲ ಕಸುಬಾದ ಕೈಮಗ್ಗಗಳಿಂದ ಬಟ್ಟೆ ನೇಯ್ಗೆ ಕೆಲಸವನ್ನೇ ನಂಬಿಕೊಂಡು ಸಂಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ. ಯಾಂತ್ರೀಕರಣ ಮತ್ತು ಆಧುನೀಕರಣದ ಪ್ರಭಾವದಿಂದಾಗಿ ಕ್ರಮೇಣ ಕೈಮಗ್ಗದ ಬಟ್ಟೆಗಳಿಗೆ ಬೇಡಿಕೆ ಕಡಿಮೆಯಾಗಿದ್ದರಿಂದ ನೇಕಾರರ ಬದುಕು ಶೋಚನೀಯ ಸ್ಥಿತಿಗೆ ತಲುಪಿದೆ. ಮಕ್ಕಳಿಗೆ ಶಿಕ್ಷಣ ನೀಡಲು ಸಾಧ್ಯವಾಗದ್ದರಿಂದ ಆರ್ಥಿಕವಾಗಿ, ರಾಜಕಿಯವಾಗಿ ಸಾಮಾಜಿಕವಾಗಿ, ಔದ್ಯೋಗಿಕವಾಗಿ ಹಿಂದುಳಿಯುವಂತಾಗಿದೆ ಎಂದು ಆರೋಪಿಸಿದರು.
ಸರ್ಕಾರ ನೇಕಾರರಿಗಾಗಿ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ, ಕರ್ನಾಟಕ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮ ಹಾಗೂ ಕಾವೇರಿ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದರೂ ಪ್ರಯೋಜನವಾಗುತ್ತಿಲ್ಲ. ನೇಕಾರ ಸಮುದಾಯ ಹಿಂದುಳಿದ 2ಎ ವರ್ಗದಲ್ಲಿದೆ. ಇತರೆ ಪ್ರಬಲ ಜಾತಿಗಳು ಹಿಂದುಳಿದ 2ಎ ಪ್ರವರ್ಗಕ್ಕೆ ಸೇರ್ಪಡೆಯಾದರೆ ಅವರೊಂದಿಗೆ ಪೈಪೋಟಿ ನೀಡುವುದು ಕಷ್ಟವಾಗುತ್ತದೆ. ಆದ್ದರಿಂದ ನೇಕಾರರ ಸಮುದಾಯಕ್ಕೆ ಪ್ರತ್ಯೇಕ ಶೇ. 6 ರಷ್ಟು ಮೀಸಲಾತಿ ನೀಡಬೇಕು. ನೇಕಾರರ ಸಾಲ ಮನ್ನಾ ಯೋಜನೆಯನ್ನು ರಾಷ್ಟ್ರೀಕೃತ ಬ್ಯಾಂಕುಗಳಿಗೂ ವಿಸ್ತರಣೆ ಮಾಡಿ ಶ್ಯೂರಿಟಿ ರಹಿತ ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ನೀಡುವ ಉದ್ಯೋಗ , ವಿದ್ಯಾರ್ಥಿ ವೇತನ, ಗಾರ್ಮೆಂಟ್ ಉದ್ಯಮ, ಕೈಮಗ್ಗ ನೇಕಾರಿಕೆ ಉದ್ಯಮ, ಪವರ್ ಲೂಮ್ ಉದ್ಯಮ ಘಟಕಗಳ ಸ್ಥಾಪನೆ ಮಾಡಲು ಶೇ. 90 ರಷ್ಟು ಸಹಾಯಧನವನ್ನು ಕೈಮಗ್ಗ ಇಲಾಖೆಯಿಂದ ನೀಡಲಾಗುತ್ತಿದೆ. ಈ ಯೋಜನೆಯನ್ನು 26 ಪಂಗಡಗಳಿಗೂ ವಿಸ್ತರಿಸಬೇಕಾಗಿದೆ.
ಕುಲಶಾಸ್ತ್ರ ಅಧ್ಯಯನ ಮಾಡಿ ನೇಕಾರ ಸಮುದಾಯದ ಅಭಿವೃದ್ಧಿಗೆ ಮುಂದಾಗಬೇಕೆಂದರು. ಪಟ್ಟಣದ ಕೋಟೆ ಬಡಾವಣೆಯ ಶ್ರೀ ನುಂಕೆಮಲೆ ಸಿದ್ದೇಶ್ವರಸ್ವಾಮಿ ದೇವಸ್ಥಾನದ ಆವರಣದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ನಂತರ ತಹಶೀಲ್ದಾರ್ ಬಿ.ಆರ್. ಆನಂದಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ತಾಲೂಕು ನೇಕಾರರ ಸಮುದಾಯಗಳ ಒಕ್ಕೂಟದ ಕೇಶವಮೂರ್ತಿ, ಅಶೋಕ ಗಾಯಕವಾಡ್ ,ದೇವದಾಸ್, ಶಿವಾಜಿ ವಾಂಜ್ರೆ, ಪಿ.ಎನ್. ಶ್ರೀನಿವಾಸಲು, ಡಿ.ಎಂ. ಈಶ್ವರಪ್ಪ, ಜ್ಞಾನದೇವ್, ಜಿಂಕಾ ಶ್ರೀನಿವಾಸ್, ಕೋದಂಡರಾಮಯ್ಯ, ಕಿರಣ್ ಗಾಯಕವಾಡ್, ನರೇಂದ್ರ ದೇವ್, ದೇವರತ್ನ, ಸಂತೋಷ್, ಜಿಂಕಾ ರಾಮದಾಸ್, ಶರಣಪ್ಪ, ರಾಜಶೇಖರ, ಮಂಚಿ ಮಾರುತಿ, ಆನಂದ, ಶ್ರೀನಿವಾಸುಲು, ಗೋವಿಂದಪ್ಪ, ಮಲ್ಲೇಶಪ್ಪ, ಸಾಯಿಬಾಬಾ ಸರೋದೆ, ಟಿ.ಟಿ. ನಿರ್ಮಲಾ, ಶೈಲಜಾ, ಜಯಮ್ಮ, ಕವಿತಾ, ಶಾರದಾ, ಸೀತಾಲಕ್ಷ್ಮಿ, ಸಾವಿತ್ರಿ, ಸುಜಾತಾ, ಲಕ್ಷ್ಮೀದೇವಿ, ಚಂದ್ರಕಲಾ, ಮೀರಾ ವಾಂಜ್ರೆ, ಜಯಲಕ್ಷ್ಮೀ, ಲಕ್ಷ್ಮೀಕಾಂತಮ್ಮ ಮೊದಲಾದವರು ಭಾಗವಹಿಸಿದ್ದರು.