ಚನ್ನಗಿರಿ: ಮರಾಠ ಸಮಾಜ ಬಾಂಧವರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಮುಂದರೆಯರೆಯ ಬೇಕಾದರೆ ಸಮಾಜದ ಸಂಘಟನೆಯ ಮುಖಂಡರುಗಳ ಮನಸ್ಸುಗಳು ಸರಿಯಾಗಿರಬೇಕು ಎಂದು ಮಾಜಿ ಸಚಿವ ಪಿ.ಜಿ.ಆರ್ ಸಿಂಧ್ಯಾ ಸಲಹೆ ನೀಡಿದರು.
ತಾಲೂಕಿನ ಹೊದಿಗೆರೆ ಗ್ರಾಮದಲ್ಲಿ ದಾವಣಗೆರೆ ಕ್ಷತ್ರೀಯ ಮರಾಠ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಛತ್ರಪತಿ ಶಿವಾಜಿ ಮಹರಾಜರ ತಂದೆಯವರಾದ ಶ್ರೀ ಶಹಾಜಿ ರಾಜೇ ಭೋಸ್ಲೆಅವರ 353ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಹಾಜಿ ಮಹಾರಾಜರು ಮತ್ತು ಶಿವಾಜಿ ಮಹಾರಾಜರು ಹಿಂದೂ ಸಾಮ್ರಾಜ್ಯಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಅಂತವರ ಸ್ಮಾರಕಗಳನ್ನು ಮತ್ತು ಸಮಾಜವನ್ನು ಸಂಘಟಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಧಾರವಾಡ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆ , ಮರಾಠ ಸಮಾಜವು ಈ ಮೊದಲಿನಿಂದಲೂ ಹೋರಾಟದ ಮನೋಭಾವವನ್ನು ಬೆಳೆಸಿಕೊಂಡು ಬಂದಿದೆ.
ನಮ್ಮ ಹಿರಿಯರು ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಸಮಾಜ ಬಾಂದವರು ಸಂಘಟಕರಾಗಬೇಕಿದೆ. ರಾಜ್ಯದಲ್ಲಿ ಸುಮಾರು 40 ಲಕ್ಷ ಜನ ಮರಾಠ ಕನ್ನಡಿಗರಿದ್ದು, ಈ ವರ್ಗವನ್ನು 3ಬಿ ಪ್ರವರ್ಗದಿಂದ 2ಎ ಪ್ರವರ್ಗಕ್ಕೆ ಸೇರಿಸಬೇಕು. ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸರಕಾರಕ್ಕೆ ಒತ್ತಾಯಿಸಬೇಕಿದೆ ಎಂದರು.
ಹೊದಿಗೆರೆ ಕ್ಷೇತ್ರ ಶಹಾಜಿ ಮಹಾರಾಜರ ಸಮಾಧಿ ಸ್ಥಳವಿದ್ದರೂ ಆ ಸ್ಥಳಕ್ಕೆ ಸೌಲಭ್ಯಗಳಿಲ್ಲ. ಇದನ್ನು ಅಭಿವೃದ್ಧಿ ಪಡಿಸುವ ಮೂಲಕ ರಾಷ್ಟ್ರೀಯ ಸ್ಮಾರಕ ಮಾಡಬೇಕು ಎಂದು ಆಗ್ರಹಿಸಿದರು. ದಾವಣಗೆರೆ ಮರಾಠ ಸಮಾಜದ ಗೌರವಾಧ್ಯಕ್ಷ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತ್‌ರಾವ್ ಜಾಧವ್ ಮಾತನಾಡಿ, ಕಳೆದ ಎಲ್ಲಾ ವರ್ಷಗಳಿಗಿಂತ ಈ ಬಾರಿ ಶಹಾಜಿ ಅವರ ಪುಣ್ಯತಿಥಿ ಕಾರ್ಯಕ್ರಮಕ್ಕೆ ಉತ್ತಮ ಸಂಖ್ಯೆಯಲ್ಲಿ ಸಮಾಜದ ಬಾಂಧವರು ಸೇರಿದ್ದಾರೆ.
ಬೀದರನಿಂದ ಅರಂಭಗೊಂಡ ಏಕ್ ಮರಾಠ್ ಲಾಕ್ ಮರಾಠ್ ಘೋಷಣೆ ಕನ್ನಡಿಗ ಮರಾಠರಲ್ಲಿ ಸಂಚಲನ ಮೂಡಿಸಿದೆ ಎಂದರು. ದಾವಣಗೆರೆ ಮರಾಠ ಸಮಾಜದ ವತಿಯಿಂದ 500 ಜನ ಯುವಕರು ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ. ಟೀಕೆಗಳಿಂದ ಏನು ಮಾಡಲು ಸಾಧ್ಯವಿಲ್ಲ. ಯಾರು ಎಷ್ಟು ಪಕ್ಷಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ ಸಮಾಜದ ವಿಚಾರ ಬಂದಾಗ ಸಹೋದರರಾಗಿ ನಡೆದುಕೊಳ್ಳಬೇಕು.
ಈಗಾಗಲೇ ದಾವಣಗೆರೆ ಸಮಾಜದ ವತಿಯಿಂದ ಅನೇಕ ಸಮಾಜಮುಖೀ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು. ಶಾಸಕ ವಡ್ನಾಳ್ ರಾಜಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಹೊದಿಗೆರೆ ರಮೇಶ್, ಬೀದರ್‌ನ ಮಾಜಿ ಶಾಸಕ ಎಂ.ಜಿ.ಮೂಳೆ, ದಾವಣಗೆರೆ ಮರಾಠ ಸಮಾಜದ ಅಧ್ಯಕ್ಷ ಮಾಲತೇಶ್‌ರಾವ್, ಶ್ರೀಕಾಂತ್ ಗೋಠಕರ್, ಚನ್ನಗಿರಿ ತಾಲೂಕು ಮರಾಠ ಸಮಾಜದ ಅಧ್ಯಕ್ಷ ನಿಂಗೋಜಿರಾವ್, ಕೆ.ಕೆ.ಎಂ.ಪಿ ಅಧ್ಯಕ್ಷ ರಾಣೋಜಿರಾವ್ ಸಾಠೆ, ಮರಾಠ ಸಮಾಜದ ಪದಾಧಿಕಾರಿಗಳು ಇದ್ದರು.