Advertisement

ಮೂಲ ಸೌಕರ್ಯ ಸಂಕಲ್ಪವಾಗಲಿ

12:38 PM Mar 22, 2017 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪರಿಣಾಮಕಾರಿ ಕ್ರಮ, ಕೆರೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ, ವೈಜ್ಞಾನಿಕ ತ್ಯಾಜ್ಯ ವಿಲೇವಾರಿ, ಪಾಲಿಕೆ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು, ಮಳೆ ನೀರು ಸಂಗ್ರಹಣಾ ವ್ಯವಸ್ಥೆ ಕಲ್ಪಿಸುವ ಮೂಲಕ ಅಂತರ್ಜಲ ವೃದ್ಧಿ… ಇದು  ಬಿಬಿಎಂಪಿ 2017-18ನೇ ಸಾಲಿನ ಬಜೆಟ್‌ನಲ್ಲಿ ಆದ್ಯತೆ ನೀಡಬೇಕಿರುವ ಅಂಶಗಳ ಬಗ್ಗೆ ಮಾಜಿ ಮೇಯರ್‌ಗಳು ನೀಡಿರುವ ಸಲಹೆ. 

Advertisement

ಮಾರ್ಚ್‌ 25ರಂದು ಮಂಡನೆಯಾಗಲಿರುವ ಬಜೆಟ್‌ನಲ್ಲಿ ನಗರದ ಸಮಸ್ಯೆಗಳಿಗೆ ತುರ್ತು ಪರಿಹಾರದ ಜತೆಗೆ ಶಾಶ್ವತ ಪರಿಹಾರ ಕ್ರಮಗಳಿಗೆ ಆದ್ಯತೆ ನೀಡಬೇಕು. ಜತೆಗೆ ಕುಡಿಯುವ ನೀರು, ಘನತ್ಯಾಜ್ಯ ನಿರ್ವಹಣೆ, ಕೆರೆ ಅಭಿವೃದ್ಧಿ, ಸಂಚಾರ ದಟ್ಟಣೆ ನಿವಾರಣೆ, ಪರಿಸರ ಸಂರಕ್ಷಣೆ, ಮೂಲ ಸೌಕರ್ಯಕ್ಕೂ ಪ್ರಾಮುಖ್ಯತೆ ನೀಡಿ ಜನಪರ ಬಜೆಟ್‌ ಮಂಡಿಸಬೇಕು ಎಂಬುದು ಅವರ ಅಭಿಪ್ರಾಯವಾಗಿದೆ. 

ಬಜೆಟ್‌ನಲ್ಲಿ ಪ್ರತಿವರ್ಷ ಮೂಲಸೌಕರ್ಯ ವಿಭಾಗಕ್ಕೆ ಸಾವಿರಾರು ಕೋಟಿ ರೂ. ಮೀಸಲಿಡಲಾಗುತ್ತದೆ. ಆದರೆ, ಕುಡಿಯುವ ನೀರು, ಮಾಲಿನ್ಯ ಮುಕ್ತ ವಾತಾವರಣ, ಕೆರೆಗಳ ಅಭಿವೃದ್ಧಿ, ಮಳೆನೀರಿನ ಸಂಗ್ರಹ ಸೇರಿದಂತೆ ಇತರೆ ಮೂಲಸೌಕರ್ಯವನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.

ಹಾಗಾಗಿ ನಗರದ ಅಭಿವೃದ್ಧಿ ಬಗ್ಗೆ ದೂರದರ್ಶಿತ್ವ ಹಾಗೂ ಪರಿಣಾಮಕಾರಿ ಯೋಜನೆಗಳನ್ನು ಘೋಷಿಸುವತ್ತ ಗಮನ ಹರಿಸಬೇಕು. ಜತೆಗೆ ನಗರದ ಎಲ್ಲ ಪ್ರದೇಶಗಳ ಸಮಾನ ಅಭಿವೃದ್ಧಿಗೆ ಅಗತ್ಯ ಅನುದಾನ ಹಂಚಿಕೆಯಾಗಬೇಕು ಎಂಬ ಸದಾಶಯವನ್ನೂ ಮಾಜಿ ಮೇಯರ್‌ಗಳು ವ್ಯಕ್ತಪಡಿಸಿದ್ದಾರೆ. 

ಮಾಜಿ ಮೇಯರ್‌ಗಳು ಹೇಳಿದ್ದು
ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆಗೆ ಬಿಬಿಎಂಪಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ನಗರದ ರಸ್ತೆಗಳನ್ನು ಅಭಿವೃ ದ್ಧಿಪಡಿಸಿ, ಗುಂಡಿ ಮುಕ್ತಗೊಳಿಸುವ ಉದ್ದೇಶದಿಂದ ಕಾಂಕ್ರಿಟ್‌ ರಸ್ತೆಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಭಾರಿ ಸಂಚಾರ ದಟ್ಟಣೆಯಿರುವ ಪ್ರದೇಶಗಳಲ್ಲಿ ಗ್ರೇಡ್‌ ಸೆಪರೇಟರ್‌ ಅಥವಾ ಮೇಲ್ಸೇತುವೆಗಳ ನಿರ್ಮಾಣಕ್ಕೆ ಮುಂದಾಗಬೇಕು. 
-ಎಂ. ರಾಮಚಂದ್ರಪ್ಪ

Advertisement

ನಗರದ ನೀರಿನ ಮೂಲಗಳು ನಾಶವಾಗುತ್ತಿದ್ದು, ಪಾಲಿಕೆ ವ್ಯಾಪ್ತಿ ಯಲ್ಲಿರುವ ಕೆರೆಗಳನ್ನು ಪುನಶ್ಚೇತನ ಗೊಳಿಸಬೇಕಿದೆ. ಮಲಿನಗೊಂಡಿರುವ ಕೆರೆಗಳನ್ನು ಸ್ವತ್ಛಗೊಳಿಸಿ ಅಲ್ಲಿ ಮಳೆ ನೀರು ಸಂಗ್ರಹಕ್ಕೆ ಸೂಕ್ತ ಯೋಜನೆ ರೂಪಿಸಬೇಕಿದೆ. ವಾರ್ಡ್‌ ಕಮಿಟಿಗಳಿಗೆ ಹೆಚ್ಚಿನ ಒತ್ತು ನೀಡುವ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ನಾಗರಿಕರ ಪಾಲ್ಗೊಳ್ಳುವಿಕೆಗೆ ಆದ್ಯತೆ ನೀಡಬೇಕಿದೆ. 
-ಪಿ.ಆರ್‌.ರಮೇಶ್‌

ನಗರದಲ್ಲಿ ಘನತ್ಯಾಜ್ಯ ನಿರ್ವಹಣೆ ಯಲ್ಲಿನ ಅವ್ಯವಸ್ಥೆಯಿಂದ ತೀವ್ರ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಘಟಕದ ಸುತ್ತಮುತ್ತಲಿನ ಪ್ರದೇಶದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಾಲಿಕೆ ಎಂಟೂ ಘಟಕಗಳನ್ನು ವೈಜ್ಞಾನಿಕವಾಗಿ ನಡೆಸಬೇಕಿದೆ. ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಆಸ್ತಿಗಳು, ಜಾಹೀರಾತು ಫ‌ಲಕಗಳು ಮತ್ತು ಒಎಫ್ಸಿ ಕೇಬಲ್‌ಗ‌ಳಿಂದ ತೆರಿಗೆ ಸಂಗ್ರಹಕ್ಕೆ ಮಹತ್ವ ನೀಡಿ ಆದಾಯ ಸಂಗ್ರಹಿಸಬೇಕು. 
-ಬಿ.ಎಸ್‌.ಸತ್ಯನಾರಾಯಣ

ನಗರದಲ್ಲಿನ ರಸ್ತೆಗಳು, ಉದ್ಯಾನಗಳು, ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿ ಪಡಿಸಬೇಕಿದೆ. ಇದರೊಂದಿಗೆ ಬೇಸಿಗೆಯಲ್ಲಿ ಎದುರಾಗುವ ನೀರಿನ ಸಮಸ್ಯೆಯಿಂದ ಜನರಿಗಾಗುವ ತೊಂದರೆ ತಡೆಗೆ ಸೂಕ್ತ ಪರಿಹಾರ ಕ್ರಮಗಳನ್ನು ಘೋಷಿಸಬೇಕು. ಜತೆಗೆ ಪಾಲಿಕೆಯ ಕೊಳವೆಬಾವಿಗಳನ್ನು ದುರಸ್ತಿಪಡಿಸಿ, ಕೆರೆಗಳನ್ನು ಸ್ವತ್ಛಗೊಳಿಸಲು ಹೆಚ್ಚಿನ ಅನುದಾನ ಮೀಸಲಿಡಬೇಕು. 
-ಎಸ್‌.ಕೆ.ನಟರಾಜ್‌

ಕಳೆದ ರಾಜ್ಯ ಬಜೆಟ್‌ನಲ್ಲಿ ಸರ್ಕಾರ ಹಲವಾರು ಕಾಮಗಾರಿಗಳಿಗೆ ಅನುದಾನವನ್ನು ನೀಡಿದ್ದು, ನಾನಾ ಯೋಜನೆಗಳು ಡಿಪಿಆರ್‌, ಟೆಂಡರ್‌ ಹಂತದಲ್ಲಿರುವುದರಿಂದ ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಪಾಲಿಕೆ ಬಜೆಟ್‌ನಲ್ಲಿ ಜನಪರ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು. ಜತೆಗೆ ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ಆಸ್ತಿದಾರರು ಘೋಷಿಸಿಕೊಂಡಿರುವ ಆಸ್ತಿ ವಿವರದ ಸತ್ಯಾಸತ್ಯತೆ ತಿಳಿಯಲು ಪರಿಶೀಲಿಸಬೇಕು.
-ಬಿ.ಎನ್‌.ಮಂಜುನಾಥ ರೆಡ್ಡಿ

ಪಾಲಿಕೆಯ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕಿದ್ದು, ಕನ್ನಡದೊಂದಿಗೆ ಇಂಗ್ಲಿಷ್‌ ಕಲಿಕೆಗೂ ಒತ್ತು ನೀಡಬೇಕಿದೆ. ಕೆರೆಗಳಿಗೆ ಕಲುಷಿತ ಹಾಗೂ ವಿಷಕಾರಿ ಅಂಶಗಳನ್ನು ಹರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಕೆರೆಗಳ ಸಂರಕ್ಷಣೆಗೆ ಯೋಜನೆ ರೂಪಿಸಬೇಕಿದ್ದು, ಬೇಸಿಗೆಯಲ್ಲಿ ನಗರದಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಯೋಜನೆ ರೂಪಿಸಬೇಕು.
-ಎನ್‌. ಶಾಂತಕುಮಾರಿ 

Advertisement

Udayavani is now on Telegram. Click here to join our channel and stay updated with the latest news.

Next