Advertisement

ಜನಪ್ರತಿನಿಧಿಗಳ ಜತೆ ನೆರೆ, ಬರ ಪರಿಶೀಲಿಸಿ

12:13 PM Nov 21, 2018 | |

ಮೈಸೂರು: ಜಿಲ್ಲೆಯಲ್ಲಿನ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಸಂಬಂಧಿಸಿದಂತೆ ಮತ್ತೂಮ್ಮೆ ಸರ್ವೆ ನಡೆಸುವ ಮೂಲಕ ಸಂಪೂರ್ಣ ವರದಿ ನೀಡಬೇಕಿದ್ದು, ಈ ವೇಳೆ ಸ್ಥಳೀಯ ಜನಪ್ರತಿನಿಧಿಗಳನ್ನು ಕಡ್ಡಾಯವಾಗಿ ಕರೆದುಕೊಂಡು ಹೋಗಬೇಕು ಎಂದು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ಸೂಚಿಸಿದರು.

Advertisement

ನಗರದ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಮಂಗಳವಾರ ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಸಂಬಂಧಿಸಿದಂತೆ ಕೃಷಿ ಇಲಾಖೆ ಈಗಾಗಲೇ ನೀಡಿರುವ ಮಾಹಿತಿಯು ಸಂಪೂರ್ಣವಾಗಿಲ್ಲ.

ವರದಿಯಲ್ಲಿ ಅನುದಾನ, ಯೋಜನೆ, ಕಾರ್ಯಕ್ರಮಗಳ ಬಗ್ಗೆಯೂ ಮಾಹಿತಿ ನೀಡಬೇಕಿದ್ದು, ಮಾಹಿತಿ ಕೊರತೆಯ ಕಾರಣದಿಂದ ಪ್ರಗತಿ ಕುಂಠಿತವಾಗಲಿದೆ. ಹೀಗಾಗಿ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಸಂಬಂಧಿಸಿದಂತೆ ಮತ್ತೂಮ್ಮೆ ಸರ್ವೆ ನಡೆಸಿ ಸಂಪೂರ್ಣ ವರದಿ ನೀಡಬೇಕಿದೆ.

ಸರ್ವೆ ನಡೆಸಲು ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಹೋದ ಸಂದರ್ಭದಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ಕರೆದುಕೊಂಡು ಹೋಗಬೇಕಿದೆ ಎಂದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಹಾಂತೇಶಪ್ಪ ಮಾತನಾಡಿ, ಜಿಲ್ಲೆಯ ಎಚ್‌.ಡಿ.ಕೋಟೆ ತಾಲೂಕಿನಲ್ಲಿ 58 ಎಕರೆ ಪ್ರದೇಶ ಹಾನಿಯಾಗಿದ್ದು, 6.75 ಲಕ್ಷ ರೂ. ಪರಿಹಾರಕ್ಕೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಹ ಸಲ್ಲಿಸಲಾಗಿದೆ.

ಅಪೂರ್ಣ ಮಾಹಿತಿ: ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಜಿಲ್ಲೆಯಲ್ಲಿ ಉಂಟಾಗಿರುವ ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಸಂಬಂಧಿಸಿದಂತೆ ಸಂಪೂರ್ಣ ವರದಿ ನೀಡಿಲ್ಲ. ಅತಿವೃಷ್ಟಿಯಿಂದಾಗಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು,

Advertisement

ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ಅಧಿಕಾರಿಗಳು ನೀಡಿದ ಮಾಹಿತಿಯನ್ನೇ ಸರ್ಕಾರಕ್ಕೆ ನೀಡಬಾರದು. ಹುಣಸೂರು, ಪಿರಿಯಾಪಟ್ಟಣ ಹಾಗೂ ನಂಜನಗೂಡು ತಾಲೂಕಿನಲ್ಲಿ ಭಾರೀ ಪ್ರಮಾಣದ ಬೆಳೆ ನಾಶವಾಗಿದ್ದು, ಈ ಬಗ್ಗೆ ಇಲಾಖೆ ನೀಡಿರುವ ಮಾಹಿತಿ ತಪ್ಪಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. 

ಅನುದಾನ ಖರ್ಚಾಗಿಲ್ಲ: ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ವೆಂಕಟಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‌ಗ‌ಳ ಸಮಸ್ಯೆ ಕುರಿತ ಚರ್ಚೆಯಲ್ಲಿ ಎಸ್‌ಸಿಪಿ-ಟಿಎಸ್‌ಪಿ ಅನುದಾನ ಬಳಕೆ ಕುರಿತು ಪ್ರಸ್ತಾಪಿಸಿದರು. ಪ್ರತಿಯೊಂದು ಇಲಾಖೆಯಲ್ಲೂ ಎಸ್‌ಸಿಪಿ ಹಾಗೂ ಟಿಎಸ್‌ಪಿ ಅನುದಾನ ಮೀಸಲಿಡಲಾಗಿದ್ದು, ಈ ಅನುದಾನ ಖರ್ಚಾಗಿದೆಯೋ? ಇಲ್ಲವೋ? ಎಂದು ಪರಿಶೀಲಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಮಟ್ಟದ ಆಧಿಕಾರಿಗಳು ಕೇವಲ ತಾಲೂಕು ಅಧಿಕಾರಿಗಳು ನೀಡುವ ವರದಿಯನ್ನು ನಮಗೆ ನೀಡಲಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿದ್ದೀರಾ ಎಂದು ಪ್ರಶ್ನಿಸಿದರು. ಜಿಲ್ಲಾಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವ ಜತೆಗೆ ಅನುದಾನ ಬಳಕೆ ಕುರಿತು ಪರಿಶೀಲಿಸಿದರೆ ಉತ್ತಮ ಎಂದರು. 

ಹತ್ತಿರಕ್ಕೆ ನಿಯೋಜನೆ ಏಕೆ?: ಎಚ್‌.ಡಿ.ಕೋಟೆ ತಾಲೂಕಿನ ಗಡಿಭಾಗದ ಸರ್ಕಾರಿ ಶಾಲೆಗಳಲ್ಲಿ ಕಾಯಂ ಶಿಕ್ಷಕರ ಕೊರತೆ ಇದ್ದರೂ ಹತ್ತಿರದ ಸ್ಥಳಗಳಿಗೆ ನಿಯೋಜನೆ ಮಾಡುತ್ತಿರುವ ಬಗ್ಗೆ ವೆಂಕಟಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ಬಹುತೇಕ ಶಿಕ್ಷಕರು ಮಧ್ಯಾಹ್ನವಾಗುತ್ತಿದ್ದಂತೆ ಊರಿಗೆ ಹೊರಡಲಿದ್ದು, ಇನ್ನೂ ಕೆಲವರು ವಿವಿಧ ಕಾರಣಗಳನ್ನು ನೀಡಿ ಶಾಲೆಗೆ ಬರುವುದಿಲ್ಲ. ಈ ಶಾಲೆಗಳಿಗೆ ಕಾಯಂ ಶಿಕ್ಷಕರನ್ನು ನಿಯೋಜಿಸಿದ್ದರೂ, ಅವರನ್ನು ಹತ್ತಿರದ ಶಾಲೆಗಳಿಗೆ ನಿಯೋಜಿಸಿರುವುದೇಕೆ? ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದರ ಡಿಡಿಪಿಐ ಮಮತಾ, ಈ ಬಗ್ಗೆ ಪರಿಶೀಲನೆ ನಡೆಸಲಿದ್ದು, ಅಗತ್ಯ ಕ್ರಮಕೈಗೊಳ್ಳುವುದಾಗಿ ಹೇಳಿದರು. 

ಸೈಕಲ್‌ ದುರ್ಬಳಕೆ: ಜಿಪಂ ಉಪಾಧ್ಯಕ್ಷ ಜಿ.ನಟರಾಜು, ಮಕ್ಕಳಿಗೆ ಕೊಡುವ ಸೈಕಲ್‌ಗ‌ಳನ್ನು ಮರಳು ಸಾಗಣೆ, ಹುಲ್ಲು ಸಾಗಿಸಲು ಬಳಸಲಾಗುತ್ತಿದ್ದು, ಮಕ್ಕಳಿಗಾಗಿ ನೀಡುವ ಸೈಕಲ್‌ಗ‌ಳನ್ನು ಮರಳು ಸಾಗಿಸಲು ಉಪಯೋಗಿಸಿದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದರು.

ಸರ್ಕಾರಿ ಶಾಲೆಗೆ ಶೀಘ್ರ ಬಯೋಮೆಟ್ರಿಕ್‌: ಸರ್ಕಾರಿ ಶಾಲೆಗಳಲ್ಲಿ ಬಯೋಮೆಟ್ರಿಕ್‌ ವ್ಯವಸ್ಥೆ ಜಾರಿಗೆ ಬರುವ ತನಕ ಸಿಆರ್‌ಸಿ, ಬಿಆರ್‌ಸಿಗಳು ಶಾಲೆಗೆ ಅನಿರೀಕ್ಷಿತ ಭೇಟಿ ನೀಡಬೇಕು. ಪ್ರತಿ ಇಲಾಖೆಗಳ ಮುಖ್ಯಸ್ಥರು ಅನಿರೀಕ್ಷಿತ ಭೇಟಿ ಮಾಡಿದಾಗ ಪುಸ್ತಕದಲ್ಲಿ ಷರಾ ಬರೆಯಬೇಕು ಹಾಗೂ ಅಲ್ಲಿನ ವ್ಯವಸ್ಥೆ, ಲೋಪದ ಬಗ್ಗೆ ತಿಳಿಸಬೇಕಿದೆ ಎಂದು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ತಿಳಿಸಿದರು.  

ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ ಮಾತನಾಡಿ, ಅಧಿಕಾರಿಗಳು ಮೊದಲು ತಮ್ಮ ಇಲಾಖೆಗಳ ಪ್ರಗತಿಗೆ ಸಂಬಂಧಿಸಿದ ಮಾಹಿತಿ ನೀಡಬೇಕು. ಜಿಪಂ ಸದಸ್ಯರು ಫೋನ್‌ ಮಾಡಿದಾಗ ಸ್ವೀಕರಿಸಬೇಕಿದ್ದು, ಜಿಪಂ ಸದಸ್ಯರು ಜನರ ಸಮಸ್ಯೆ ಹೇಳುತ್ತೇವೆ ಹೊರತು ಬೇರೇನನ್ನೂ ಹೇಳುವುದಿಲ್ಲ ಎಂದು ತಿಳಿಸಿದರು. 

ಭತ್ತ ಖರೀದಿಗೆ ಅನುಮತಿಗಾಗಿ ಕಾದಿದ್ದೇವೆ: ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲು ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದು, ಸರ್ಕಾರ ಅನುಮತಿ ನೀಡಿದ ಕೂಡಲೇ ಆರಂಭಿಸುತ್ತೇವೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಎಪಿಎಂಸಿ, ಆರ್‌ಎಂಸಿ ಮೊದಲಾದ ಕಡೆಗಳಲ್ಲಿ ಗೋದಾಮು ಸಿದ್ಧಪಡಿಸಲಾಗಿದ್ದು,

ಸರ್ಕಾರ ಏಜೆನ್ಸಿ ನಿಗದಿಪಡಿಸಿ ಅನುಮೋದನೆ ನೀಡಿದ ಕೂಡಲೇ ಖರೀದಿ ಪ್ರಾರಂಭವಾಗಲಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಸೇರಿ ಪ್ರತಿಟನ್‌ಗೆ 1,750 ರೂ.ನಿಗದಿಯಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಹಾಂತೇಶಪ್ಪ ಸಭೆಗೆ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next