Advertisement

ಪಾಳು ಬಿದ್ದ ನಿವೇಶನ-ಕಟ್ಟಡ ವಿರುದ್ಧ ಅಕ್ಕಪಕ್ಕದವರ ಆತಂಕ, ಆಕ್ರೋಶ

12:55 AM Jul 28, 2019 | mahesh |

ಮಹಾನಗರ: ನಗರದಲ್ಲಿ ಡೆಂಗ್ಯೂ, ಮಲೇರಿಯ ರೋಗಗಳ ಹಾವಳಿ ತೀವ್ರಗೊಳ್ಳುತ್ತಿದ್ದಂತೆ, ಪಾಳು ಬಿದ್ದಿರುವ ಮನೆಗಳು, ನಿರ್ವಹಣೆಯಿಲ್ಲದೆ ವರ್ಷಗಳಿಂದ ಪೊದೆ-ಕಸ-ಗಲೀಜು ತುಂಬಿಕೊಂಡು ಸೊಳ್ಳೆಗಳ ಆವಾಸ ಸ್ಥಾನವಾಗಿರುವ ಖಾಲಿ ನಿವೇಶನಗಳು ಹಾಗೂ ಅರ್ಧಕ್ಕೆ ಕಾಮಗಾರಿ ಸ್ಥಗಿತಗೊಂಡಿರುವ ಕಟ್ಟಡಗಳ ವಿರುದ್ಧ ಅದರ ಸುತ್ತಮುತ್ತ ವಾಸಿಸುವ ಜನರು ಇದೀಗ ಆತಂಕದ ಜತೆಗೆ ಆಕ್ರೋಶ ಗೊಂಡಿದ್ದಾರೆ.

Advertisement

ಡೆಂಗ್ಯೂ ಕುರಿತಂತೆ ಉದಯವಾಣಿಯ ‘ಸುದಿನ’ವು ನಾಲ್ಕೈದು ದಿನಗಳಿಂದ ಜನರಲ್ಲಿ ಜಾಗೃತಿ, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳನ್ನು ಎಚ್ಚರಿಸುವ ಸದುದ್ದೇಶದಿಂದ ಪ್ರಾರಂಭಿಸಿರುವ ಅಭಿಯಾನಕ್ಕೆ ಓದುಗರಿಂದ ಅತ್ಯುತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಅದರಲ್ಲಿಯೂ ಈಗಾಗಲೇ ವಾಟ್ಸಪ್‌ ಮೂಲಕ ಸಮಸ್ಯೆಗಳನ್ನು ತಿಳಿಸಿ ಎಂದಿದ್ದರು ಕೂಡ ಸಾವಿರಕ್ಕೂ ಅಧಿಕ ಮೊಬೈಲ್ ಕರೆಗಳು ಬಂದಿವೆ. ನಗರದಲ್ಲಿ ಜನರು ವಾಸ್ತವ್ಯದಲ್ಲಿ ನೈರ್ಮಲ್ಯ, ಸ್ವಚ್ಛತೆಗೆ ಸಂಬಂಧಿಸಿದಂತೆ ಎಷ್ಟೊಂದು ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನುವುದಕ್ಕೆ ಇದು ಸಾಕ್ಷಿ. ಅಷ್ಟೇಅಲ್ಲ, ಪಾಲಿಕೆ ಸಹಿತ ಸಂಬಂಧಪಟ್ಟ ಇಲಾಖೆ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸುವಲ್ಲಿ ವಿಫಲವಾಗಿವೆ ಎಂಬುದನ್ನು ಸೂಚಿಸುತ್ತದೆ. ಸುದಿನಕ್ಕೆ ಈಗ ಬರುತ್ತಿರುವ ಹೆಚ್ಚಿನ ದೂರುಗಳ ಪೈಕಿ ಶೇ.60ರಷ್ಟು ದೂರುಗಳು ಪಾಳು ಬಿದ್ದಿರುವ ಮನೆ, ಕಟ್ಟಡ ಅಥವಾ ನಿವೇಶನಗಳಿಂದ ಸೊಳ್ಳೆಗಳ ಉತ್ಪತ್ತಿಯಾಗಿ ಸುತ್ತಮುತ್ತಲಿನ ಮನೆಯ ನಿವಾಸಿಗಳಿಗೆ ತೊಂದರೆಯಾಗುತ್ತಿದ್ದು, ಸಂಬಂಧಪಟ್ಟವರು ಕೂಡಲೇ ಶಿಸ್ತು ಕ್ರಮ ಜರಗಿಸುವಂತೆ ಮನವಿ ಮಾಡುತ್ತಿದ್ದಾರೆ. ಈಗಾಗಲೇ ಮನೆಗಳು, ಕಟ್ಟಡಗಳಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿರ್ಮೂಲನೆಗೊಳಿಸುವ ಕಾರ್ಯಾಚರಣೆ ಪಾಲಿಕೆಯಿಂದ ನಡೆಯುತ್ತಿದೆ.ಲಾರ್ವಾ ಗಳು ಕಂಡುಬಂದರೆ ಸಂಬಂಧಪಟ್ಟ ಮನೆ, ಕಟ್ಟಡಗಳ ಮಾಲಕರಿಗೆ ದಂಡ ವಿಧಿಸಲಾಗುತ್ತಿದೆ.

ಬಲ್ಮಠದ ಸನ್ಯಾಸಿಗುಡ್ಡೆ ಬಳಿ ಇರುವ ಖಾಸಗಿ ನಿವೇಶವೊಂದು ಹಲವಾರ ವರ್ಷಗಳಿಂದ ಖಾಲಿ ಇದೆ. ಈ ನಿವೇಶನ ಕುರಿತು ನ್ಯಾಯಾಲಯದಲ್ಲಿ ವ್ಯಾಜ್ಯ ಇದೆ ಎನ್ನಲಾಗಿದೆ. ಆದರೆ ಆ ಪ್ರದೇಶದಲ್ಲಿ ಗಿಡಗಂಟಿಗಳು ಬೆಳೆದು, ನೀರು ತುಂಬಿ ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿ ಪರಿಣಾಮಿಸಿವೆ. ಇದರ ಸುತ್ತಮುತ್ತಲ ಪ್ರದೇಶದಲ್ಲಿ ಈಗಾಗಲೇ ಹಲವು ಮಂದಿಗೆ ಡೆಂಗ್ಯೂ ಬಾಧಿತವಾಗಿದೆ ಎಂಬುದಾಗಿ ಸ್ಥಳೀಯರಿಂದ ದೂರುಗಳು ವ್ಯಕ್ತವಾಗಿವೆ. ನಗರದ ಕೋಡಿಕಲ್ ಒಂದನೇ ಅಡ್ಡರಸ್ತೆಯ ಕೊನೆಯಲ್ಲಿ ಬಸ್‌ನಿಲ್ದಾಣದ ಬಳಿ ಮೂರು ನಿವೇಶನಗಳು 15 ವರ್ಷಗಳಿಂದ ಖಾಲಿ ಇದೆ. ಇದನ್ನು ಸ್ವಚ್ಛಗೊಳಿಸುವ ಕಾರ್ಯ ಆಗಿಲ್ಲ. ಅಲ್ಲಿ ಗಿಡಗಂಟಿಗಳು ಬೆಳೆದಿದ್ದು, ನೀರು ನಿಂತಿವೆ. ಪರಿಸರದ ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ ಆವರಿಸಿದೆ ಎಂಬುದಾಗಿ ಸ್ಥಳೀಯ ನಿವಾಸಿಯೋರ್ವರು ಉದಯವಾಣಿಗೆ ಚಿತ್ರ ಸಮೇತ ವಿವರ ಕಳುಹಿಸಿದ್ದಾರೆ. ಇದೇ ರೀತಿಯಲ್ಲಿ ಪಂಪ್‌ವೆಲ್ ಉಜ್ಡೋಡಿ, ಅತ್ತಾವರ ವೈದ್ಯನಾಥ ನಗರ, ಬಿಜೈ ಕಾಫಿಕಾಡ್‌, ಜೆಪ್ಪು ಬಪ್ಪಲ್-ಜೆಪ್ಪು ಕುಡುಪ್ಪಾಡಿ ರಸ್ತೆ ಬಳಿ ಸೇರಿದಂತೆ ಬಹಳಷ್ಟು ಖಾಲಿ ನಿವೇಶನ, ಕಟ್ಟಡಗಳಿಂದಾಗಿ ಆಗಿರುವ ಸಮಸ್ಯೆಗಳ ಕುರಿತ ವಿವರಗಳನ್ನು ಸಾರ್ವಜನಿಕರು ಚಿತ್ರ ಸಮೇತ ಉದಯವಾಣಿಗೆ ವಾಟ್ಸಪ್‌ ಮೂಲಕ ಕಳುಹಿಸಿದ್ದಾರೆ.

ಮುಂಬಯಿ, ಬೆಂಗಳೂರು ಸಹಿತ ದೇಶದ ವಿವಿಧೆಡೆಗಳಲ್ಲಿ ಉದ್ಯೋಗ, ವ್ಯವಹಾರ ನಿಮಿತ್ತ ನೆಲೆಸಿರುವ ಮಂಗಳೂರು ಮೂಲದ ನಿವಾಸಿಗಳು ನಗರದಲ್ಲಿ ನಿವೇಶನಗಳನ್ನು ಖರೀದಿಸಿ ಅದಕ್ಕೆ ಆವರಣ ಗೋಡೆ ಹಾಕಿ ಖಾಲಿಯಾಗಿ ಬಿಟ್ಟಿರುತ್ತಾರೆ. ಅದರಲ್ಲಿಯೂ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿರುವ ನಿವಾಸಿಗಳ ಪೈಕಿಯೂ ಹಲವರು ಇದೇರೀತಿ ನಿವೇಶನ ಖರೀದಿಸಿ ಅಥವಾ ಇರುವ ಆಸ್ತಿಯನ್ನು ನಿರ್ವಹಣೆ ಮಾಡಲು ಸಾಧ್ಯವಾಗದೆ ಖಾಲಿ ಬಿಟ್ಟು ಹೋಗಿದ್ದಾರೆ. ಈ ಕಾರಣದಿಂದಲೇ ನಗರದಲ್ಲಿ ಈ ರೀತಿ ಜನವಾಸವಿಲ್ಲದೆ ಖಾಲಿ ಬಿದ್ದಿರುವ ಮನೆ-ನಿವೇಶನಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅದರ ಅಕ್ಕ-ಪಕ್ಕ ವಾಸಿಸುವ ಜನರಿಗೆ ಅದು ತೊಂದರೆಯುಂಟು ಮಾಡುತ್ತಿವೆ. ಕೆಲವು ನಿವೇಶನಗಳಲ್ಲಿ ಮನೆಗಳನ್ನು ನಿರ್ಮಿಸಿದ್ದರೂ ಅವುಗಳಲ್ಲಿ ಜನವಾಸ ಇರುವುದಿಲ್ಲ. ಈ ಖಾಲಿ ನಿವೇಶನಗಳು, ಮನೆಗಳ ನಿರ್ವಹಣೆ ಇಲ್ಲದೆ ಗಿಡಗಂಟಿಗಳು ಬೆಳೆದಿರುತ್ತವೆ. ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಂತಿರುತ್ತವೆ. ಪರಿಣಾಮ ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿ ಪರಿಣಾಮಿಸಿವೆ. ನಗರದಲ್ಲಿ ವಸತಿ, ವಾಣಿಜ್ಯ ಸಮುಚ್ಚಯಗಳ, ಮನೆಗಳ ನಿರ್ಮಾಣಕ್ಕೆ ಅಡಿಪಾಯ ತೆಗೆದು ಬಳಿಕ ಯಾವುದೋ ಕಾರಣಕ್ಕೆ ಕಾಮಗಾರಿ ಮುಂದುವರಿಸದೆ ಖಾಲಿ ಬಿಟ್ಟಿರುವ ಅನೇಕ ತಾಣಗಳ ಬಗ್ಗೆಯೂ ನಗರದಲ್ಲಿ ಸಾರ್ವಜನಿಕರು ಗಮನ ಸೆಳೆದಿದ್ದಾರೆ. ಅಡಿಪಾಯ ಹಾಕಲು ತೆಗೆದಿರುವ ಗುಂಡಿಗಳಲ್ಲಿ ನೀರು ಸಂಗ್ರಹವಾಗಿವೆ. ನಿರ್ಮಾಣಕಾರ್ಯ ಅರ್ಧಕ್ಕೆ ನಿಂತಿರುವ ಕಟ್ಟಡಗಳ ಆವರಣದಲ್ಲಿ, ಟೆರೇಸ್‌ಗಳಲ್ಲೂ ನೀರು ಸಂಗ್ರಹವಾಗಿ ಡೆಂಗ್ಯೂ, ಮಲೇರಿಯಾ ಹರಡುವ ಸೊಳ್ಳೆಗಳ ಉತ್ಪತ್ತಿಗೆ ಅತ್ಯಂತ ಪ್ರಶಸ್ತ ತಾಣಗಳಾಗಿ ಪರಿಣಾಮಿಸಿವೆ.

ಪಾಳು ಬಿಟ್ಟಿರುವವರ ವಿರುದ್ಧ ಕ್ರಮ ಅಗತ್ಯ
ಖಾಲಿ ನಿವೇಶನಗಳು, ವಾಸವಿಲ್ಲದ ಮನೆಗಳ ಅವರಣಗಳಲ್ಲಿ ಸ್ವಚ್ಛತಾ ಲೋಪ ಕಂಡುಬಂದರೆ ಅವುಗಳ ಮಾಲಕರಿಗೆ ಭಾರಿ ಪ್ರಮಾಣದಲ್ಲಿ ದಂಡ ವಿಧಿಸುವ ಕ್ರಮ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಜಾರಿಯಲ್ಲಿದೆ. ಮಂಗಳೂರು ನಗರ ರಾಜ್ಯದಲ್ಲೇ ಮಲೇರಿಯಾ, ಡೆಂಗ್ಯೂ ಹಾವಳಿ ಹೆಚ್ಚು ಇರುವ ನಗರ. ಇದನ್ನು ನಿಯಂತ್ರಿಸುವಲ್ಲಿ ಪೂರಕವಾಗಿ ಅವಶ್ಯ ಎಲ್ಲ ಕ್ರಮಗಳನ್ನು ಕೈಗೊಳ್ಳುವುದು ಅಗತ್ಯ. ಮನೆ, ವಸತಿ, ವಾಣಿಜ್ಯ ಸಮುಚ್ಚಯಗಳಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನ ಕಾರ್ಯವನ್ನು ನಿವಾಸಿಗಳ ಮೂಲಕ ಮಾಡಿಸಲಾಗುತ್ತದೆ. ಆದರೆ ನಿವೇಶನಗಳನ್ನು ಖರೀದಿಸಿ ಅವುಗಳನ್ನು ಖಾಲಿಯಾಗಿರಿಸಿ, ಸೂಕ್ತ ನಿರ್ವಹಣೆ ಮಾಡದೆ ಸೊಳ್ಳೆಗಳ ಉತ್ಪತ್ತಿ ತಾಣವಾಗಿ ಮಾಡಿರುವವರ ವಿರುದ್ಧವೂ ಕಠಿನ ಕ್ರಮಗಳಾಗಬೇಕು ಎಂಬ ಪ್ರಬಲ ಆಗ್ರಹ ನಗರದ ಸಾರ್ವಜನಿಕರಿಂದ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಲೋಪಗಳು ಆಗದಂತೆ ಎಚ್ಚರಿಕೆ ರವಾನಿಸುವ ಕಾರ್ಯ ಮಹಾನಗರ ಪಾಲಿಕೆ, ಜಿಲ್ಲಾಡಳಿತದಿಂದ ಆಗಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಜಿಲ್ಲಾಡಳಿತದಿಂದ ಕಠಿನ ಕ್ರಮ

ಖಾಲಿ ನಿವೇಶನಗಳನ್ನು ನಿರ್ವಹಣೆ ಮಾಡದೆ ಸೊಳ್ಳೆಗಳ ಉತ್ಪತ್ತಿ ತಾಣಗಳಾಗಿರುವ ಪ್ರಕರಣಗಳು ನಗರದಲ್ಲಿ ಕಂಡುಬಂದಿದ್ದು ಜಿಲ್ಲಾಡಳಿತದಿಂದ ಅವರಿಗೆ ಎಚ್ಚರಿಕೆ ನೀಡಲಾಗಿದೆ. ಇವುಗಳ ವಿರುದ್ಧ ಕ್ರಮಗಳನ್ನು ಜರಗಿಸಲು ಮಹಾನಗರ ಪಾಲಿಕೆಗೆ ಸೂಚಿಸಲಾಗಿದೆ. ಈಗಾಗಲೇ ನಗರದಲ್ಲಿ ರಚಿಸಿರುವ ಗ್ರಿಡ್‌ ತಂಡದ ಸದಸ್ಯರು ಸಮೀಕ್ಷೆ ಸಂದರ್ಭದಲ್ಲಿ ಇಂತಹ ನಿವೇಶನ, ತಾಣಗಳನ್ನು ಗುರುತಿಸು ಕಾರ್ಯ ಮಾಡುತ್ತಿದ್ದಾರೆ. ಲೋಪವೆಸಗಿರುವ ಮಾಲಕರ ಮೇಲೆ ಕ್ರಮ ಕೈಗೊಂಡು ದಂಡ ವಿಧಿಸಲಾಗುತ್ತಿದ್ದು ಈಗಾಗಲೇ ಇಂತಹ ಎರಡು ಪ್ರಕರಣಗಳಲ್ಲಿ ಕ್ರಮ ಜರಗಿಸಲಾಗಿದೆ. ಇದಲ್ಲದೆ ಖಾಲಿ ಇರುವ ನಿವೇಶನಗಳಲ್ಲಿ ನೀರು ನಿಂತಿರುವ ಕಡೆ ಮಹಾನಗರ ಪಾಲಿಕೆ ವತಿಯಿಂದ ಸೊಳ್ಳೆನಾಶಕವನ್ನು ಸ್ಪ್ರೆ ಮಾಡಲಾಗುತ್ತಿದೆ.
– ಶಶಿಕಾಂತ್‌ ಸೆಂಥಿಲ್, ದ.ಕ. ಜಿಲ್ಲಾಧಿಕಾರಿ

ಸಮಸ್ಯೆ ಇದ್ದರೆ ನಮಗೆ ವಾಟ್ಸಪ್‌ ಮಾಡಿ
ನಗರದಲ್ಲಿ ಡೆಂಗ್ಯೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ‘ಸುದಿನ’ ಕೂಡ ಜಾಗೃತಿ ಮೂಡಿಸುವ ಜತೆಗೆ ನಗರವಾಸಿಗಳಿಗೆ ತಮ್ಮ ಸಮಸ್ಯೆ-ಪರಿಹಾರ ಮಾರ್ಗೋ ಪಾಯಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲು ವೇದಿಕೆ ನೀಡುತ್ತಿದೆ. ಆ ಮೂಲಕ, ಜನರು ಕೂಡ ಡೆಂಗ್ಯೂ ವ್ಯಾಪಕವಾಗುವುದನ್ನು ತಡೆಗಟ್ಟುವುದಕ್ಕೆ ತಮ್ಮ ಜವಾಬ್ದಾರಿ ಮೆರೆಯುವುದು ಆವಶ್ಯಕ. ನಗರದಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳು ಕಂಡುಬಂದರೆ ಆ ಬಗ್ಗೆ ಸೂಕ್ತ ವಿವರದೊಂದಿಗೆ ಫೋಟೋ ತೆಗೆದು ಕಳುಹಿಸಬಹುದು. ಅಲ್ಲದೆ ಕೆಳ ಹಂತದ ಅಧಿಕಾರಿಗಳಿಂದ ಸಮಸ್ಯೆಗೆ ಸೂಕ್ತ ಸ್ಪಂದನೆ ದೊರೆಯದಿದ್ದರೂ ಆ ಬಗ್ಗೆ ಗಮನಕ್ಕೆ ತಂದರೆ ಉನ್ನತ ಅಧಿಕಾರಿಗಳ ಗಮನಸೆಳೆಯುವ ಪ್ರಯತ್ನ ಮಾಡಲಾಗುವುದು.
9900567000
Advertisement
Advertisement

Udayavani is now on Telegram. Click here to join our channel and stay updated with the latest news.

Next