ಹೊಸದಿಲ್ಲಿ: ಟಿಬೆಟ್‌ಗೆ ಸಂಬಂಧಿಸಿ ಸೂಕ್ಷ್ಮ ನೀತಿಯೊಂದನ್ನು ರೂಪಿಸುವಲ್ಲಿ ಮತ್ತು ಗಡಿಯ ವಿಚಾರದಲ್ಲಿ ನೆಹರೂ ಅವರು ಚೀನದ ಕುರಿತು ಮೃದುಧೋರಣೆ ಹೊಂದಿದ್ದರು. ಈ ವೇಳೆ ಯಾರಾದರೂ ಅವರ ದಾರಿ ತಪ್ಪಿಸಿದ್ದರೇ ಅಥವಾ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳಲ್ಲಿನ ಸಿದ್ಧತೆಯ ಕೊರತೆಯೇ ಚೀನದೊಂದಿ ಗೆ ಭಯಾನಕ ಯುದ್ಧಕ್ಕೆ ಹಾಗೂ ಗಡಿ ಸಂಘರ್ಷಕ್ಕೆ ನಾಂದಿ ಹಾಡಿತೇ?
ಭಾರತೀಯ ವಿದೇಶಾಂಗ ಸೇವೆಯ ಇಬ್ಬರು ನಿವೃತ್ತ ಅಧಿಕಾರಿಗಳಾದ ಅವತಾರ್ ಸಿಂಗ್ ಭಾಸಿನ್ ಮತ್ತು ವಿಜಯ್ ಗೋಖಲೆ ಬರೆದಿರುವ ಕೃತಿಯೊಂದು ಈ ಎಲ್ಲ ವಿಚಾರಗಳ ಕುರಿತು ಬೆಳಕು ಚೆಲ್ಲಿದೆ. ಚೀನ ಕುರಿತಾದ ಭಾರತದ ನೀತಿ ಏನಾಗಿತ್ತು ಎಂಬುದನ್ನು ಈ ಪುಸ್ತಕಗಳಲ್ಲಿ ವಿವರಿಸಲಾಗಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಚೀನಕ್ಕೆ ಸದಸ್ಯತ್ವ ಸಿಗಲು ಅಂದು ನೆಹರೂ ಮಾಡಿದ್ದ ಅಭಿಯಾನದ ಕುರಿತು “ನೆಹರೂ, ಟಿಬೆಟ್ ಆ್ಯಂಡ್ ಚೀನ’ ಕೃತಿಯಲ್ಲಿ ಭಾಸಿನ್ ಉಲ್ಲೇಖೀಸಿದ್ದಾರೆ. “ಏಷ್ಯಾದಲ್ಲಿ ಒಗ್ಗಟ್ಟು’ ಸಾಧಿಸುವ ಪ್ರಯತ್ನವೆಂಬಂತೆ, ನೆಹರೂ ಅವರು ನ್ಯಾಯಸಮ್ಮತ ಹಾಗೂ ನಿಸ್ವಾರ್ಥ ಭಾವದಿಂದ ಚೀನಕ್ಕೆ ಬೆಂಬಲ ನೀಡಿದ್ದರು. ಆದರೆ ಗಡಿಯ ವಿಚಾರದಲ್ಲಿ ಚೀನದೊಂದಿಗೆ ಮಾತುಕತೆಗೆ ಭಾರತ ಸಿದ್ಧತೆಯನ್ನೇ ನಡೆಸಿರಲಿಲ್ಲ ಎಂದು ಭಾಸಿನ್ ಹೇಳುತ್ತಾರೆ.
ಇನ್ನು, ಲ್ಹಾಸಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಕಾನ್ಸುಲರ್ ಪೋಸ್ಟ್ ಆಗಿ ಪರಿವರ್ತಿಸಬೇಕು ಎಂದು ಚೀನ ಪ್ರಸ್ತಾವಿಸಿತ್ತು. ಇದರಿಂದಾಗುವ ಕಾನೂನಾತ್ಮಕ ಅಥವಾ ರಾಜಕೀಯ ಪರಿಣಾಮಗಳನ್ನು ಲೆಕ್ಕಿಸದೆ, ನೆಹರೂ ಅವರು ಇದಕ್ಕೆ ಒಪ್ಪಿಗೆ ಸೂಚಿಸಿದ್ದರು. ಇದನ್ನು ದುರ್ಬಳಕೆ ಮಾಡಿಕೊಂಡ ಚೀನ ತನ್ನ ಕುತಂತ್ರ ಬುದ್ಧಿಯನ್ನು ಮುಂದುವರಿಸಿತು ಎಂದು ನಿವೃತ್ತ ವಿದೇಶಾಂಗ ಕಾರ್ಯದರ್ಶಿ ಗೋಖಲೆ ಅವರ “ದಿ ಲಾಂಗ್ ಗೇಮ್: ಹೌ ಚೈನಾ ನೆಗೋಷಿಯೇಟ್ಸ್ ವಿತ್ ಇಂಡಿಯಾ’ ಕೃತಿಯಲ್ಲಿ ತಿಳಿಸಲಾಗಿದೆ.