ಮಂಗಳೂರು: 80ರ ಚುನಾವಣೆಗಳಿಗೂ ಮಂಗಳೂರಿನ ನೆಹರೂ ಮೈದಾನಕ್ಕೂ ವಿಶಿಷ್ಟ ನಂಟು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಚುನಾವಣೆಗಳ ಸಂದರ್ಭದಲ್ಲಿ ಪ್ರಮುಖ ನಾಯಕರು ಇಲ್ಲಿ ಪ್ರಚಾರ ಸಭೆಗಳಲ್ಲಿ ಭಾಗವಹಿಸುವ ಪರಂಪರೆಯೇ ಇದೆ. ರಾಷ್ಟ್ರೀಯ ನಾಯಕರು ಬರುವಾಗಲೆಲ್ಲ ದೊಡ್ಡಮಟ್ಟಿನ ರ‍್ಯಾಲಿಯೂ ನಡೆಯುತ್ತಿರುತ್ತದೆ.
ನಗರದ ಹೃದಯಭಾಗದಲ್ಲಿರುವ ಈ ಬೃಹತ್ ಮೈದಾನ ಮೂಲತಃ ಕ್ರೀಡೆಗಳ ಅಂಗಣ. ಶತಮಾನದ ಹಿಂದೆ ಈ ಪ್ರದೇಶವನ್ನು ಕ್ರೀಡಾ ಉದ್ದೇಶಕ್ಕಾಗಿಯೇ ಆಲ್ಬುಕರ್ಕ್ ಕುಟುಂಬದವರು ದಾನ ಮಾಡಿದ್ದರು. ಈಗ ಒಂದು ಭಾಗ ಶಾಶ್ವತ ಬಸ್ ನಿಲ್ದಾಣ ಆಗುವತ್ತ ಸಾಗಿದೆ!
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿದು ಕೇಂದ್ರ ಮೈದಾನ ಆಗಿತ್ತು. ಉಪ್ಪಿನ ಸತ್ಯಾಗ್ರಹ, ಕ್ವಿಟ್ ಇಂಡಿಯಾ ಮುಂತಾದ ಚಳವಳಿ ಇಲ್ಲೇ ನಡೆದಿತ್ತು. ಮಹಾತ್ಮಾ ಗಾಂಧೀಜಿ ಇಲ್ಲಿ ಮೂರು ಬಾರಿ ಭಾಷಣ ಮಾಡಿದ್ದರು. ಭಾರತದ ಮೊದಲ ಪ್ರಧಾನಿ ನೆಹರೂ ಅವರು ಇಲ್ಲಿಗೆ 1951ರಲ್ಲಿ ಭೇಟಿ ನೀಡಿ, ಪೆವಿಲಿಯನ್ ಉದ್ಘಾಟಿಸಿದ ಬಳಿಕ ಕೇಂದ್ರ ಮೈದಾನ ನೆಹರೂ ಮೈದಾನ ಆಗಿ ಪರಿವರ್ತನೆಗೊಂಡಿತು! ನೆಹರೂ ಅನಂತರದ ಎಲ್ಲ ಪ್ರಧಾನಿಗಳೂ ಈ ಮೈದಾನದಲ್ಲಿ ಭಾಷಣ ಮಾಡಿದ್ದಾರೆ ಅನ್ನುವುದು ಉಲ್ಲೇಖನೀಯ.
ವಿಶಾಲವಾದ ಪ್ರದೇಶ, ಸುರಕ್ಷತೆಗೆ ವ್ಯಾಪಕವಾದ ಅವಕಾಶ, ವಿಶಾಲವಾದ ವಾಹನ ನಿಲುಗಡೆ ಸೌಲಭ್ಯ ಇತ್ಯಾದಿಗಳಿಂದ ಬೃಹತ್ ಸಮಾವೇಶಗಳಿಗೆ ಈ ಮೈದಾನ ಅತ್ಯಂತ ಸೂಕ್ತ. ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಕಚೇರಿಗಳೂ ಪಕ್ಕದಲ್ಲಿವೆ.
ಇಲ್ಲಿ ಬೃಹತ್ ರ‍್ಯಾಲಿಗಳ ಸಂದರ್ಭದಲ್ಲಿ ‘ಲಕ್ಷ ಗಟ್ಟಲೆ’ ಜನ ಸೇರುತ್ತಾರೆಂದು ಆಯಾಯ ಪಕ್ಷಗಳವರು ಹೇಳಿಕೊಳ್ಳುತ್ತಾರೆ.
ಅಧಿಕೃತ ಲೆಕ್ಕಾಚಾರಗಳ ಪ್ರಕಾರ ಸುಮಗ್ರ ಮೈದಾನದಲ್ಲಿ ಗರಿಷ್ಠ 80 ಸಾವಿರ ಮಂದಿ ಆಸೀನರಾಗಬಹುದು. ಸುತ್ತಲೂ ಸುಮಾರು 10 ಸಾವಿರ ಮಂದಿ ನಿಲ್ಲಬಹುದು. ಹತ್ತು ಸಾವಿರ ಮಂದಿ ರ‍್ಯಾಲಿಯಲ್ಲಿ ಬಂದವರು ಮೈದಾನಕ್ಕೆ ಬರದೇ ಹೋಗಬಹುದು. ಹೀಗೆ ಯಾವುದೇ ಲೆಕ್ಕಾಚಾರ ಮಾಡಿದರೂ ಗರಿಷ್ಠ ಒಂದು ಲಕ್ಷ ಎಂಬ ತೀರ್ಮಾನಕ್ಕೆ ಬರಬಹುದು.
ನೆಹರೂ ಮೈದಾನ ಈಗಲೂ ಕರಾವಳಿಯ ರ‍್ಯಾಲಿಗಳ ನೆಚ್ಚಿನ ಪ್ರದೇಶವೇ ಆಗಿ ಉಳಿದುಕೊಂಡಿದೆ. ಪಕ್ಕದಲ್ಲಿರುವ ಪುರಭವನದ ಹಿಂಭಾಗದ ಎತ್ತರದ ವೇದಿಕೆ ಅನೇಕ ಗಣ್ಯಾತಿಗಣ್ಯರ ಭಾಷಣಗಳಿಗೆ ಸಾಕ್ಷಿಯಾಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಇಲ್ಲಿ ಯಾವ ರಾಷ್ಟ್ರೀಯ ನಾಯಕರೆಲ್ಲ ಭಾಗವಹಿಸುತ್ತಾರೆ- ಕಾದು ನೋಡಬೇಕು.
ಮನೋಹರ ಪ್ರಸಾದ್