Advertisement

ಸಂಧಾನ ಯಶಸ್ವಿ, ರಾಮಲಿಂಗಾರೆಡ್ಡಿ  ಕೂಲ್‌

07:14 AM Dec 26, 2018 | |

ಬೆಂಗಳೂರು: ಸಂಪುಟದಲ್ಲಿ ಸ್ಥಾನ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿದ್ದ ಹಿರಿಯ ಶಾಸಕ ರಾಮಲಿಂಗಾರೆಡ್ಡಿ, ಡಾ. ಸುಧಾಕರ್‌, ಭೀಮಾನಾಯ್ಕ ಅವರನ್ನು ಸಮಾಧಾನ ಪಡಿಸುವಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.
ಮಂಗಳವಾರ ಮಧ್ಯಾಹ್ನ ಸಿದ್ದರಾಮಯ್ಯ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿ ಮೂವರೂ ಪ್ರತ್ಯೇಕವಾಗಿ ತಮಗಾಗಿರುವ
ಅನ್ಯಾಯದ ಬಗ್ಗೆ ಅವಲತ್ತುಕೊಂಡರಾದರೂ ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ಸುಮ್ಮನಿರಬೇಕು. ಅವಕಾಶ ಸಿಕ್ಕೇ ಸಿಗುತ್ತದೆ ಎಂದು
ಸಿದ್ದರಾಮಯ್ಯ ಸಮಾಧಾನಪಡಿಸಿದರು ಎಂದು ತಿಳಿದು ಬಂದಿದೆ.

Advertisement

ಈ ಮಧ್ಯೆ, ಸಚಿವ ಸ್ಥಾನದಿಂದ ಕೈ ಬಿಟ್ಟಿರುವ ರಮೇಶ್‌ ಜಾರಕಿಹೊಳಿ ದಿಢೀರ್‌ ಬೆಳಗಾವಿಗೆ ಹೋಗಿದ್ದು ಯಾವ ನಾಯಕರ ಸಂಪರ್ಕಕ್ಕೂ ಸಿಗುತ್ತಿಲ್ಲ. ಸಿದ್ದರಾಮಯ್ಯ ಅವರು ರಮೇಶ್‌ ಜಾರಕಿಹೊಳಿ ಅವರನ್ನು ಕರೆಸಿಕೊಂಡು ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಸಮ್ಮುಖದಲ್ಲೇ ಮಾತನಾಡಲಿದ್ದಾರೆ ಎಂದ ಹೇಳಲಾಗಿತ್ತಾದರೂ ಅದಕ್ಕೆ ಕಾಯದೆ ರಮೇಶ್‌ ಜಾರಕಿಹೊಳಿ ಬೆಂಗಳೂರಿನಿಂದ ಬೆಳಗಾವಿಗೆ ತೆರಳಿದರು. ಸತೀಶ್‌ ಜಾರಕಿಹೊಳಿ, ರಮೇಶ್‌ ಜತೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ರಮೇಶ್‌ ಜಾರಕಿಹೊಳಿ ರಾಜ್ಯ ಹಾಗೂ ಹೈಕಮಾಂಡ್‌ ನಾಯಕರ ವಿರುದ್ಧ ಗರಂ ಆಗಿದ್ದು ನಾನು ಯಾರ ಬಳಿಯೂ ಮಾತನಾಡುವುದಿಲ್ಲ, ನನ್ನ ನಿರ್ಧಾರ ಅಚಲ ಎಂದು ಎಂದು ಪಟ್ಟು ಹಿಡಿದಿದ್ದಾರೆ ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ಅವರ ಭೇಟಿ ಸಂದರ್ಭದಲ್ಲಿ ರಾಮಲಿಂಗಾರೆಡ್ಡಿಯವರು, ಕಿರಿಯರಿಗೆ ಅವಕಾಶ ಕೊಡಬೇಕು ಎಂದು ಹಿರಿಯರನ್ನು ಕೈ ಬಿಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಆರ್‌.ವಿ. ದೇಶಪಾಂಡೆ, ಡಿ.ಕೆ.ಶಿವಕುಮಾರ್‌, ಕೆ.ಜೆ. ಜಾರ್ಜ್‌, ಪರಮೇಶ್ವರ್‌ ಅವರೆಲ್ಲರೂ ಹಿರಿಯರೇ, ಅವರನ್ನು ಸಂಪುಟಕ್ಕೆ ಸೇರಿಸಿ, ನನ್ನ ಹಿರಿತನದ ಹೆಸರಿನಲ್ಲಿ ದೂರ ಇಟ್ಟಿರುವುದರ ಉದ್ದೇಶ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಬೆಂಗಳೂರಿನಲ್ಲಿ ಬಿಜೆಪಿ ಸಂಸದರಿದ್ದರೂ ಬಿಬಿಎಂಪಿ ಚುನಾವಣೆ ಹಾಗೂ ಬಿಬಿಎಂಪಿಯಲ್ಲಿ ಜೆಡಿಎಸ್‌ ಜೊತೆ ಸೇರಿ ಅಧಿಕಾರ ಹಿಡಿಯುವ ಸಂದರ್ಭದಲ್ಲಿ ನನ್ನ ಅಗತ್ಯ ವಿತ್ತು. ಆದರೆ, ಸಂಪುಟದಲ್ಲಿ ನಾನು ಬೇಡ ಎಂದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರಿನಲ್ಲಿ ಕಳೆದ ಚುನಾವಣೆಗಿಂತಲೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್‌ ಶಾಸಕರು
ಆಯ್ಕೆಯಾಗಿದ್ದಾರೆ. ಅಲ್ಲದೇ ನಾನು ಹಿರಿಯ ಶಾಸಕನಾಗಿರುವುದರಿಂದ ಸಹಜವಾಗಿ ನಗರದಲ್ಲಿ ಅಧಿಕಾರ ಸಿಗುತ್ತದೆ ಎಂಬ ಭರವಸೆ ಇರುತ್ತದೆ. ಆದರೆ, ಹೊರಗಿನವರು ಬಂದು ನಗರದ ಉಸ್ತುವಾರಿ ನೋಡಿಕೊಂಡರೆ, ನಮ್ಮನ್ನು ಆಯ್ಕೆ ಮಾಡಿರುವ ಮತದಾರರಿಗೆ ನಾವು ಹೇಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುತ್ತದೆ ಎಂದು ಪರೋಕ್ಷವಾಗಿ ಪರಮೇಶ್ವರ್‌ ವಿರುದ್ಧ ಆರೋಪ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಅವರ ಆರೋಪಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ರುವ ಸಿದ್ದರಾಮಯ್ಯ, ಸಮ್ಮಿಶ್ರ ಸರ್ಕಾರದ ವ್ಯವಸ್ಥೆಯಲ್ಲಿ ಕಡಿಮೆ ಜನರಿಗೆ ಅವಕಾಶಗಳು ದೊರೆಯುವುದರಿಂದ ಕೆಲವು ಸಾರಿ ಅರ್ಹರಿಗೆ ಅವಕಾಶಗಳು ಕೈ ತಪ್ಪುತ್ತವೆ. ಆ ರೀತಿ ನಿಮಗೆ ಆಗಿರುವ ಅನ್ಯಾಯದ ಬಗ್ಗೆ ಪಕ್ಷದ ಹೈ ಕಮಾಂಡ್‌ಗೂ ಗಮನಕ್ಕಿದೆ. ನಿಮಗಾಗಿರುವ ಅನ್ಯಾಯ ಸರಿಪಡಿಸಲು ಸೂಕ್ತ ಸಂದರ್ಭದಲ್ಲಿ ಸೂಕ್ತ ಸ್ಥಾನ ಮಾನ
ದೊರೆಯುತ್ತದೆ ಎಂಬ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ಬೆಂಬಲಿಗರ ಪ್ರತಿಭಟನೆ, ಹುದ್ದೆಗಳಿಗೆ ರಾಜೀನಾಮೆ ನೀಡುವ ಬೆದರಿಕೆಯಿಂದ ಅನಗತ್ಯ ಗೊಂದಲ ಸೃಷ್ಠಿಯಾಗುತ್ತದೆ. ಆ ರೀತಿಯ ಚಟುವಟಿಕೆಗಳು ನಡೆಯದಂತೆ ನೋಡಿಕೊಳ್ಳುವಂತೆ ಹಾಗೂ ಸಂಪುಟದಲ್ಲಿ ಸ್ಥಾನ ಸಿಗದಿರುವುದರಿಂದ ಮುನಿಸಿಕೊಂಡು ಪಕ್ಷ ಸಂಘಟನೆಯಿಂದ ವಿಮುಖರಾಗದೇ ಲೋಕಸಭೆ ಚುನಾವಣೆಗೆ ಸಕ್ರಿಯರಾಗಿ ಕಾರ್ಯ ನಿರ್ವಹಿಸುವಂತೆ ಸಿದ್ದರಾಮಯ್ಯ ರಾಮಲಿಂಗಾರೆಡ್ಡಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ದಿನೇಶ್‌ ಸಮ್ಮುಖದಲ್ಲೂ ಮಾತುಕತೆ: ಸಿದ್ದರಾಮಯ್ಯ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದ ರಾಮಲಿಂಗಾ ರೆಡ್ಡಿ ಅವರನ್ನು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಸಿದ್ದರಾಮಯ್ಯ ಅವರ ಮನೆಯಲ್ಲಿಯೇ ಭೇಟಿ ಮಾಡಿ, ಆಗಿರುವ ಅನ್ಯಾಯ ಸರಿಪಡಿಸುವ
ಪ್ರಯತ್ನ ಮಾಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್‌ ಕೂಡ ಸಮ್ಮಿಶ್ರ
ಸರ್ಕಾರದಲ್ಲಿ ಕಾಂಗ್ರೆಸ್‌ನಲ್ಲಿ ಒಕ್ಕಲಿಗ ಸಮುದಾಯ ದವರಿಗೆ ಆದ್ಯತೆ ದೊರೆಯುತ್ತಿಲ್ಲ. ಒಕ್ಕಲಿಗ ಸಮುದಾಯದ ಯಾರಿಗಾದರೂ ಇನ್ನೊಂದು ಸಚಿವ ಸ್ಥಾನ ನೀಡಬೇಕಿತ್ತು ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ
ಲಂಬಾಣಿ ಸಮುದಾಯದಲ್ಲಿ ತಮಗೆ ಆದ್ಯತೆ ನೀಡಬೇಕಿತ್ತು ಎಂದು ಅಸಮಾಧಾನ ತೋಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ನಿಗಮ ಮಂಡಳಿ ಸ್ಥಾನ ಬೇಡ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. 

ಸಿದ್ದರಾಮಯ್ಯ ಅವರೊಂದಿಗಿನ ಭೇಟಿ ಸಮಾಧಾನ ತಂದಿದೆ. ಎಸ್‌.ಎಂ. ಕೃಷ್ಣ ಸೇರಿದಂತೆ ಬಿಜೆಪಿಯ ಯಾವ ನಾಯಕರೂ ನನ್ನೊಂದಿಗೆ ಮಾತನಾಡಿಲ್ಲ. ಮೈತ್ರಿ ಸರ್ಕಾರ ಇರುವುದರಿಂದ ಇವೆಲ್ಲ ಸಮಸ್ಯೆಗಳಾಗುತ್ತಿವೆ. ಯಾವುದೇ ಕಾರ್ಪೊರೇಟರ್‌ಗಳು ರಾಜೀನಾಮೆ ನೀಡುವುದಿಲ್ಲ. ಬೇರೆಯವರು ನನ್ನ ಪ್ರಭಾವ ಕಡಿಮೆ ಮಾಡಲು ಸಾಧ್ಯವಿಲ್ಲ. 
 ●ರಾಮಲಿಂಗಾರೆಡ್ಡಿ, ಹಿರಿಯ ಶಾಸಕ 

ನನಗಿರುವ ಬೇಸರವನ್ನುಸಿದ್ದರಾಮಯ್ಯ ಅವರ ಮುಂದೆ ಹೇಳಿದ್ದೇನೆ. ವೇಣುಗೋಪಾಲ್‌ ಜೊತೆಯೂ ಮಾತನಾಡುತ್ತೇನೆ. ನನ್ನದು 
ಸಿದ್ದರಾಮಯ್ಯ, ರಾಹುಲ್‌ ಗಾಂಧಿ ಟೀಂ. ಬೇರೆ ಯಾವ ಟೀಂ ಜತೆಗೂ ಇಲ್ಲ. ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷನಾಗಲು ನನಗೆ ಅರ್ಹತೆ ಇದೆ. ಯಾರಿಗಾದರೂ ಅನುಮಾನ ಇದ್ದರೆ, ಅಪೀಲು ಹೋಗಲಿ.

 ●ಡಾ.ಕೆ.ಸುಧಾಕರ್‌, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next