Advertisement

ಕರ್ತವ್ಯದಲ್ಲಿ ನಿರ್ಲಕ್ಷ್ಯ: ಸಿಎಂಗೆ ವರದಿ ಕಳುಹಿಸಲು ಸೂಚನೆ

04:40 PM Jan 04, 2022 | Team Udayavani |

ಮಾನ್ವಿ: ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದ ನೀರಾವರಿ ಇಲಾಖೆ ಅಧಿಕಾರಿಗಳ ಬಗ್ಗೆ ನೀರಾವರಿ ಸಚಿವರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ವರದಿ ಕಳಿಸುವಂತೆ ತಾಪಂ ಇಒ ಸ್ಟೇಲಾ ವರ್ಗೀಸ್‌ ಅವರಿಗೆ ಶಾಸಕ ರಾಜಾ ವೆಂಕಟಪ್ಪ ನಾಯಕ ಸೂಚಿಸಿದರು.

Advertisement

ಪಟ್ಟಣದ ಶಾಸಕರ ಭವನದ ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ತ್ತೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ತಾಲೂಕಿನಲ್ಲಿ ನೀರಾವರಿ ಇಲಾಖೆಯ ಕಾಲುವೆಗಳ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕೆರೆಗಳನ್ನು ನಿರ್ಮಿಸಿಕೊಂಡು ಕಾಲುವೆ ನೀರನ್ನು ಬಳಸುವವರ ಮೇಲೆ ಕ್ರಮ ಕೈಗೊಳ್ಳಬೇಕು. ಇನ್ನು ಕ್ರಮ ಕೈಗೊಂಡಿರುವ ಬಗ್ಗೆ ಅನುಪಾಲನಾ ವರದಿ ನೀಡದೆ ಇರುವುದು ಸರಿಯಲ್ಲ. ನೀರಾವರಿ ಇಲಾಖೆ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ ಇರುವುದರಿಂದ ಕೆಳ ಭಾಗದ ರೈತರಿಗೆ ಸರಿಯಾಗಿ ಕಾಲುವೆ ನೀರು ದೊರೆಯುತ್ತಿಲ್ಲ ಎಂದರು.

ತಾಲೂಕಿನಲ್ಲಿ ಕೋವಿಡ್‌ ಸೋಂಕು ಹರಡದಂತೆ ಶೇ.100 ಲಸಿಕೆಯ ಗುರಿ ಸಾಧಿಸುವಂತೆ ಹಾಗೂ ಪಟ್ಟಣದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ತಾಯಿ ಮಕ್ಕಳ ಆಸ್ಪತ್ರೆಯನ್ನು ಜ.11ರಂದು ಉದ್ಘಾಟಿಸಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಆರೋಗ್ಯ ಸಚಿವರು ಆಗಮಿಸಲ್ಲಿದ್ದು, ಆಸ್ಪತ್ರೆ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳುವಂತೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ| ಚಂದ್ರಶೇಖರಯ್ಯ ಸ್ವಾಮಿಯವರಿಗೆ ಸೂಚಿಸಿದರು.

ನೂತನವಾಗಿ ಆಯ್ಕೆಯಾದ ಮಾನ್ವಿ, ಸಿರವಾರ ತಾಲೂಕುಗಳ 12 ಜನ ಕೆಡಿಪಿ, ಅಧಿಕಾರೆತರ ನಾಮ ನಿರ್ದೇಶನ ಸದಸ್ಯರನ್ನು ಸಭೆಯಲ್ಲಿ ಗೌರವಿಸಲಾಯಿತು. ಸಭೆಯಲ್ಲಿ ತಾಪಂ ಇಒ ಸ್ಟೇಲಾ ವರ್ಗೀಸ್‌, ಸಿರವಾರ ತಾಪಂ ಇಒ ಉಮೇಶ, ತಹಶೀಲ್ದಾರ್‌ ಪರಶುರಾಮ, ಉದ್ಯೋಗ ಖಾತ್ರಿ ಎಡಿ ಆಲಂಬಾಷಾ, ತಾಲೂಕು ವೈದ್ಯಾಧಿಕಾರಿ ಚಂದ್ರಶೇಖರಯ್ಯ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ಗುಡಾಳ, ಸಮಾಜ ಕಲ್ಯಾಣ ಇಲಾಖೆ ರವಿಂದ್ರ ಉಪ್ಪಾರ, ಕೃಷಿ ಅಧಿಕಾರಿ ಹುಸೇನ್‌ ಸಾಬ್‌, ಪಿಡಬ್ಲೂಡಿ ಜೆಇ ಚಂದ್ರಶೇಖರ್‌, ಅರಣ್ಯಾಧಿಕಾರಿ ರಾಜೇಶ ನಾಯಕ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಪಿಡಿಒಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next