Advertisement

ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ

11:31 AM May 09, 2022 | Team Udayavani |

ಗಂಗಾವತಿ: ನಗರಸಭೆಯ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮವಾಗಿ ಕೇಂದ್ರ ಬಸ್ ನಿಲ್ದಾಣದ ಬಳಿಯಿರುವ ಚರಂಡಿಗೆ ನಿತ್ಯವೂ ಸಾವಿರಾರು ಲೀಟರ್ ಶುದ್ಧ ಕುಡಿಯುವ ನೀರು ಸೇರಿ ಇಡೀ ಪ್ರದೇಶವನ್ನು ಮಲಿನಗೊಳಿಸಿದೆ.

Advertisement

ಚರಂಡಿಯ ನೀರು ರಸ್ತೆಗೆ ನುಗ್ಗಿ ಇಡೀ ಪ್ರದೇಶ ಮಲಿನ ನೀರಿನಿಂದ ಕೂಡಿ ಜನರಿಗೆ ಕಿರಿಕಿರಿ ಉಂಟು ಮಾಡಿದೆ. ನಗರಕ್ಕೆ ಪೂರೈಕೆಯಾಗುವ ಶುದ್ಧ ಕುಡಿಯುವ ನೀರಿನ ಮುಖ್ಯ ವಾಲ್ ಕೇಂದ್ರ ಬಸ್ ನಿಲ್ದಾಣದ ಬಳಿಯಿರುವ ಪಾರ್ಕ್ ಇದೆ. ಇಲ್ಲಿಯ ಟ್ಯಾಂಕಿಗೆ ನೀರು ಭರ್ತಿಯಾದ ನಂತರ ಉಳಿದ ನೀರು ಚರಂಡಿಗೆ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ.

ಚರಂಡಿಯನ್ನು ಸರಿಯಾಗಿ ತೆಗೆಯದೇ ಇರುವುದರಿಂದ ಚರಂಡಿಯ ನೀರು ರಸ್ತೆ ಮೇಲೆ ಹರಿದು ಇಲ್ಲಿ ಮಲಿನ ನೀರಿನ ಕೆರೆ ನಿರ್ಮಾಣವಾಗಿದೆ. ನಗರಕ್ಕೆ ಆಗಮಿಸುವ ಪ್ರಮುಖ ರಸ್ತೆಯಾಗಿರುವುದರಿಂದ ಇಲ್ಲಿ ನಿತ್ಯವೂ ಸಾವಿರಾರು ಜನರು ಸಂಚಾರ ಮಾಡುತ್ತಾರೆ. ಜತೆಗೆ ಸುತ್ತಲೂ ಹಣ್ಣು ಹೂ ಸೇರಿ ಇತರೆ ವ್ಯಾಪಾರ ಮಾಡುವ ಅಂಗಡಿಗಳಿದ್ದು ಖರೀದಿ ಮಾಡಲು ಜನರು ಆಗಮಿಸುತ್ತಾರೆ.

ಈ ಸಂದರ್ಭದಲ್ಲಿ ವಾಹನಗಳು ಸಂಚಾರ ಮಾಡುವುದರಿಂದ ರಸ್ತೆಯ ಮೇಲಿರುವ ಮಲಿನ ನೀರು ಇಲ್ಲಿಗೆ ಬರುವವರಿಗೆ ಹಿಡಿದು ಅವರು ಧರಿಸಿದ ಬಟ್ಟೆಗಳು ಹೊಲಸಾಗುತ್ತಿವೆ. ಇದೇ ರಸ್ತೆಯಲ್ಲಿ ನಗರಸಭೆ ಅಧಿಕಾರಿಗಳು ಜನಪ್ರತಿನಿಧಿಗಳು ಸಂಚಾರ ಮಾಡುತ್ತಿದ್ದರು. ಈ ಸಮಸ್ಯೆ ಬಗ್ಗೆ ಯಾರೂ ಪರಿಣಾಮಕಾರಿಯಾಗಿ ಚಿಂತನೆ ನಡೆಸಿಲ್ಲ. ಇಲ್ಲಿಯ ಚರಂಡಿಯನ್ನು ಸರಿಯಾಗಿ ವೈಜ್ಞಾನಿಕವಾಗಿ ನಿರ್ಮಾಣ ಮಾಡಿ ಚರಂಡಿ ಮತ್ತು ಟ್ಯಾಂಕ್ ತುಂಬಿದ ನೀರು ಸರಿಯಾಗಿ ಹೋಗುವಂತೆ ಕಾಮಗಾರಿ ನಿರ್ವಹಿಸದೇ ಇರುವುದು ಈ ಸಮಸ್ಯೆಗೆ ಕಾರಣವಾಗಿದೆ.

ನಗರಸಭೆಯ ಅಧಿಕಾರಿಗಳು ವರ್ಗಾವರ್ಗಿಯಲ್ಲಿ ಮುಳುಗಿರುವುದರಿಂದ ಈ ಸಮಸ್ಯೆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ನಗರಸಭೆಯ ನೈರ್ಮಲ್ಯ ವಿಭಾಗದ ಅಧಿಕಾರಿಗಳು ಸಂಪೂರ್ಣವಾಗಿ ನಿರ್ಲಕ್ಷ್ಯ ವಹಿಸಿದ್ದು, ಇಡೀ ನಗರದಲ್ಲಿ ಎಲ್ಲ ಚರಂಡಿಗಳು ತುಂಬಿಕೊಂಡಿವೆ. ಜೊತೆಗೆ ಇಡೀ ನಗರದ ಎಲ್ಲಾ ವಾರ್ಡ್ ಗಳಲ್ಲಿ ಕಸದ ರಾಶಿ ತುಂಬಿದ್ದು ಅವುಗಳ ಸರಿಯಾದ ಸಾಗಾಟವಾಗುತ್ತಿಲ್ಲ. ಪ್ರಮುಖ ಸಮಸ್ಯೆ ನಗರದ ಕಸವನ್ನು ಪುನಃ ತೆಗೆದುಕೊಂಡು ಹೋಗಿ ದುರ್ಗಮ್ಮನ ಹಳ್ಳಕ್ಕೆ ಸೇರುವದರಿಂದ ಇಡೀ ನಗರ ಗಬ್ಬೆದ್ದು ಹೋಗಿದೆ.

Advertisement

ಆಕ್ರೋಶ: ಗಂಗಾವತಿ ನಗರದಲ್ಲಿ ಅನೈರ್ಮಲ್ಯ ಉಂಟಾಗಿದ್ದು ನಗರದಲ್ಲೆಲ್ಲಾ ಕಸದ ರಾಶಿ ತುಂಬಿದೆ. ಚರಂಡಿಗಳು ಸ್ವಚ್ಚತೆ ಇಲ್ಲ ಚರಂಡಿಗಳ ನೀರು ರಸ್ತೆ ಮೇಲೆ ಹರಿದರಿಂದ ನಿತ್ಯವೂ ಜನರಿಗೆ ತೊಂದರೆಯಾಗಿದೆ. ಪುರಸಭೆ ಅಧಿಕಾರಿಗಳ ವರ್ಗಾವಣೆಯಲ್ಲೇ ಬ್ಯುಸಿಯಾಗಿದ್ದು ಜನರ ಕೆಲಸವನ್ನು ಮಾಡಲು ಅವರಿಗೆ ಸಮಯ ಇಲ್ಲವಾಗಿದೆ .ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿ ಇಲ್ಲಿರುವ  ಬೇರೆ ಕಡೆ ವರ್ಗಾವಣೆ ಮಾಡಿ ನಗರವನ್ನು ಸುಂದರವಾಗಿಸುವ ಜನರ ಕನಸನ್ನು ನನಸು ಮಾಡಬೇಕೆಂದು  ಸಾರ್ವಜನಿಕರು ಒತ್ತಾಯಿಸಿದ್ದಾರೆ.

-ಕೆ. ನಿಂಗಜ್ಜ ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next