ಕುಮಟಾ: ಅತೀ ಎತ್ತರದಲ್ಲಿರುವ ಕುಗ್ರಾಮ ತಾಲೂಕಿನ ಸೊಪ್ಪಿನಹೊಸಳ್ಳಿ ಗ್ರಾಪಂ ವ್ಯಾಪ್ತಿಯ ಮೇದಿನಿ ಗ್ರಾಮದ ಕಿರಿಯ ಪ್ರಾಥಮಿಕ ಶಾಲೆ ಕಟ್ಟಡ ಕಳೆದ ಮಳೆಯಲ್ಲಿ ಕುಸಿದಿದ್ದು, ದುರಸ್ತಿಯಾಗದ ಕಾರಣ ಮಕ್ಕಳಿಗೆ ಬೇರೆಡೆ ಪಾಠ ಮಾಡಬೇಕಾದ ಸ್ಥಿತಿ ಬಂದೊದಗಿದೆ.
ಮೇದಿನಿ ಗ್ರಾಮಕ್ಕೆ ಸರಿಯಾದ ರಸ್ತೆಯೂ ಇಲ್ಲ. ಗುಡ್ಡದ ಮೇಲಿರುವ ಶಾಲೆಗೆ ಸುಸಜ್ಜಿತ ಕಟ್ಟಡವೂ ಇಲ್ಲದಂತಾಗಿದೆ. 60 ವರ್ಷಗಳಷ್ಟು ಹಳೆಯ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕಳೆದ ಮಳೆಗಾಲದಲ್ಲಿ ಕುಸಿದಿದೆ. 2020ರಲ್ಲಿ ಜಿಲ್ಲಾಧಿಕಾರಿ ಇಲ್ಲಿ ಬಂದು ವಾಸ್ತವ್ಯ ಮಾಡಿದ್ದರು. ಆಗ ಹಳೆಯ ಕಟ್ಟಡದ ಗೋಡೆಗೆ ಬಣ್ಣ, ನೆಲಕ್ಕೆ ಟೈಲ್ಸ್ ಹಾಕಲಾಗಿತ್ತು. ಈಗ ಕಟ್ಟಡ ಅಪಾಯಕಾರಿಯಾಗಿದ್ದರೂ ಅದೇ ಕಟ್ಟಡದ ಒಂದು ಕೊಠಡಿಯನ್ನು ಸದ್ಯ ಬಿಸಿಯೂಟದ ಕೋಣೆಯಾಗಿ ಬಳಸಿಕೊಳ್ಳಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಆಯುಷ್ಮಾನ್ ಆರೋಗ್ಯ ಮಂದಿರದ 8 ಅಡಿ ಅಳತೆಯ ಸಮುದಾಯ ಆರೋಗ್ಯಾಧಿಕಾರಿ ಕೊಠಡಿಯಲ್ಲಿ ತರಗತಿ ನಡೆಸಲಾಗುತ್ತಿದೆ.
ಶಾಲೆಗೆ 60 ವರ್ಷವಾದ ಹಿನ್ನೆಲೆಯಲ್ಲಿ ಶಾಲೆ ಎದುರು ಸಾರ್ವಜನಿಕರ ಶ್ರಮದಾನ, ದಾನಿಗಳ ನೆರವಿನಿಂದ ಒಂದು ಪುಟ್ಟ ಕಟ್ಟಡ ನಿರ್ಮಿಸುತ್ತಿದ್ದೇವೆ. ಅದಕ್ಕೆ ಕೆಲ ದಾನಿಗಳು ಸುಮಾರು 1.50 ಲಕ್ಷ ನೀಡಿದರೆ, ಚಿಕ್ಕಬಳ್ಳಾಪುರ ಶಾಸಕ ನಂಜೇಗೌಡ 25 ಸಾವಿರ ನೀಡಿದ್ದಾರೆ. ಈಗ ಶಾಲೆಗೆ 14 ವಿದ್ಯಾರ್ಥಿಗಳು ಬರುತ್ತಿದ್ದಾರೆ. ಹೊಸ ಕಟ್ಟಡ, ಒಬ್ಬ ಅತಿಥಿ ಶಿಕ್ಷಕರ ಅಗತ್ಯವಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಶಿಕ್ಷಕ ರಾಜು ನಾಯ್ಕ ತಿಳಿಸಿದ್ದಾರೆ.
ಸ್ಥಳೀಯರಾದ ಬಾಲಚಂದ್ರ ಗೌಡ ಮಾತನಾಡಿ, ಶಿಕ್ಷಕ ರಾಜು ನಾಯ್ಕ ಅವರು ವಿದ್ಯಾರ್ಥಿಗಳ ಮನೆಗಳಿಗೆ ಹೋಗಿ ಅವರನ್ನು ಶಾಲೆಗೆ ಕರೆ ತಂದಿದ್ದಾರೆ. ಶಾಲೆಗೆ ಬರುವಾಗ ಸ್ವಂತ ಖರ್ಚಿನಿಂದ ವಿದ್ಯಾರ್ಥಿಗಳಿಗೆ ಹಣ್ಣು, ತಿನಿಸು ತಂದು ಕೊಡುತ್ತಾರೆ. ಇದರಿಂದ ಬೇರೆ ಕಡೆ ಇದ್ದ ಮಕ್ಕಳನ್ನು ಇಲ್ಲಿಗೆ ಕರೆತಂದು ಶಾಲೆಗೆ ಸೇರಿಸಿದ್ದೇವೆ ಎಂದರು.
ಶಾಲೆ ಕಟ್ಟಡ ದುರಸ್ತಿ ಕುರಿತು ಮಾಹಿತಿ ನೀಡಲಾಗಿದ್ದು, ಅನುದಾನ ಬಿಡುಗಡೆಯಾಗಿಲ್ಲ. ಅನುದಾನ ಲಭಿಸಿದ ಬಳಿಕ ಆದ್ಯತೆ ಮೇಲೆ ಕಟ್ಟಡ ದುರಸ್ತಿ ಮಾಡಲಾಗುತ್ತದೆ.
-ಆರ್.ಎಲ್. ಭಟ್ಟ, ಬಿಇಒ, ಕುಮಟಾ.