ಹುಬ್ಬಳ್ಳಿ: ಧಾರವಾಡ ಹಾಗೂ ಕಲಬುರಗಿ ಹೈಕೋರ್ಟ್‌ಗಳಿಗೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆಗಳ ನೇಮಕಾತಿ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅವರು ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಡಿಸಿಎಂ ಡಾ| ಪರಮೇಶ್ವರ್ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಅಲ್ಲದೇ ಬೆಳಗಾವಿ ರಾಣಿ ಚನ್ನಮ್ಮ ವಿವಿ ಕುಲಪತಿ ನೇಮಕ ವಿಚಾರದಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಐದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆಗಳು ಮಂಜೂರಾಗಿದ್ದು, ಅವುಗಳಲ್ಲಿ ಧಾರವಾಡ ಹಾಗೂ ಕಲಬುರಗಿಗೆ ಮಾತ್ರ ನೇಮಕ ಮಾಡಿಲ್ಲ. ನಾಡಗೌಡ ಅವರು ಕಲಬುರಗಿಯಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ, ಅವರ ಸೇವಾವಧಿ ಬಾಕಿ ಇದ್ದರೂ ಅವರ ಜಾಗಕ್ಕೆ ಮಂಗಳೂರು ಮೂಲದ ಸಂದೇಶ ಚೌಟಾ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೇ ಅವರಿಗೆ ಬೆಂಗಳೂರಿನಲ್ಲಿಯೇ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.
ಧಾರವಾಡ ಹೈಕೋರ್ಟ್‌ಕ್ಕೆ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಮಂಗಳೂರು ಮೂಲದವರಾದ ದಿನೇಶ ರಾವ್ ಅವರನ್ನು ನೇಮಕ ಮಾಡಲಾಗಿದೆ. ಅವರಿಗೂ ಕೂಡ ಬೆಂಗಳೂರಿನಲ್ಲಿ ಕಾರ್ಯ ನಿರ್ವಹಿಸಲು ಅವಕಾಶ ಮಾಡಲಾಗಿದೆ. ಉತ್ತರ ಕರ್ನಾಟಕದವರನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಸ್ಥಳೀಯ ನ್ಯಾಯವಾದಿಗಳಿಗೆ ಅರ್ಹತೆಯಿದ್ದರೂ ಅನ್ಯಾಯ ಮಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈಗ ಹೆಚ್ಚುವರಿ ಅಡ್ವೊಕೇಟ್ ಜನರಲ್ ಹುದ್ದೆಯಲ್ಲಿದ್ದ ಪೊನ್ನಣ್ಣ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಬೆಂಗಳೂರಿನವರನ್ನು ನೇಮಕ ಮಾಡುವ ಹುನ್ನಾರ ನಡೆದಿದೆ ಎಂದು ತಿಳಿದು ಬಂದಿದೆ.
ಉ.ಕ.ಕ್ಕೆ ಅನ್ಯಾಯವಾಗುತ್ತಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ. ಉನ್ನತಾಧಿಕಾರಿಗಳು ಹಾಗೂ ಕುಲಪತಿಗಳ ನೇಮಕಾತಿಯಲ್ಲಿ ಉತ್ತರ ಕರ್ನಾಟಕದವರಿಗೆ ಅನ್ಯಾಯವಾಗುತ್ತಿದೆ. ಬೆಳಗಾವಿಯ ಕಿತ್ತೂರು ಚನ್ನಮ್ಮ ವಿವಿ ಕುಲಪತಿ ಹುದ್ದೆಗೆ ಮೈಸೂರಿನ ಸೋಮಶೇಖರ, ಮೈಸೂರು ವಿವಿಯ ರಾಜಣ್ಣ ಹಾಗೂ ಬೆಂಗಳೂರಿನ ರಾಮಚಂದ್ರ ಅವರಲ್ಲಿ ಒಬ್ಬರನ್ನು ನೇಮಕ ಮಾಡಲಾಗುತ್ತಿದೆ. ನಮ್ಮ ಭಾಗದ ಸಮರ್ಥ ಪ್ರಾಧ್ಯಾಪಕರಿಗೆ ಅವಕಾಶ ಸಿಗುತ್ತಿಲ್ಲ. ಕೂಡಲೇ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಯವರು ಉ.ಕ.ಬಗ್ಗೆ ಕಾಳಜಿ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.