ಸಿರುಗುಪ್ಪ: ಹಚ್ಚೊಳ್ಳಿ ಗ್ರಾಮದ 1ನೇ ವಾರ್ಡ್‌ನಲ್ಲಿರುವ ವಿಜಯನಗರ ಅರಸರ ಕಾಲದ ಅಗಸೆ ಕಟ್ಟಡ ಮತ್ತು ಆಂಜನೇಯ ದೇವಾಲಯ ರಕ್ಷಣೆ ಇಲ್ಲದೆ ಸಂಪೂರ್ಣ ಹಾಳಾಗಿ ಅವನತಿ ಹಾದಿಯಲ್ಲಿದೆ.
ಆಂಜನೇಯ ದೇವಾಲಯದ ಹಿಂಭಾಗದ ಗೋಡೆ ಸಂಪೂರ್ಣವಾಗಿ ಕುಸಿದಿದ್ದು, ಬಿದ್ದಿರುವ ಗೋಡೆಯ ಕಲ್ಲು ಮಣ್ಣಿನ ರಾಶಿಗಳು ದೇವಾಲಯಕ್ಕೆ ಬರುವವರಿಗೆ ಅಡ್ಡಿಯಾಗುತ್ತಿವೆ. ಅಲ್ಲದೆ ಸುತ್ತಮುತ್ತಲು ಸ್ವತ್ಛತೆ ಇಲ್ಲದಂತಾಗಿದೆ. ಸ್ಮಾರಕದ ಮೇಲ್ಭಾಗ, ಎಡ, ಬಲ ಮತ್ತು ಹಿಂಭಾಗದಲ್ಲಿ ಗಿಡಗಂಟೆಗಳು ಬೆಳೆದಿವೆ. ಇನ್ನು ಅಗಸೆಯ ಮುಂಭಾಗವೂ ಕಸ ಕಡ್ಡಿಗಳಿಂದ ಕಲುಷಿತವಾಗಿದೆ.
ಐತಿಹಾಸಿಕ ಮಹತ್ವ ಹೊಂದಿರುವ ಅಗಸೆಕಟ್ಟೆ ಮತ್ತು ಆಂಜನೇಯ ದೇವಾಲಯದ ಸಂರಕ್ಷಣೆ ಮಾಡಲು ಸ್ಥಳೀಯ ಗ್ರಾಪಂ ಆಡಳಿತ ಮಂಡಳಿ ಮುಂದಾಗಿಲ್ಲ. ಅಲ್ಲದೆ ಸ್ಥಳೀಯರು ಈ ಸ್ಮಾರಕಗಳ ಸುತ್ತ ಸ್ವತ್ಛತೆ ಮಾಡಬೇಕು, ಅವುಗಳನ್ನು ಸಂರಕ್ಷಿಸಲು ಸೂಕ್ತ ವ್ಯವಸ್ಥೆ ಮಾಡಬೇಕೆಂದು ಮನವಿ ಸಲ್ಲಿಸಿದರೂ ಗ್ರಾಪಂ ಆಡಳಿತ ಮಂಡಳಿಯವರು ಮಾತ್ರ ಇದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿರುವುದು ಗ್ರಾಮಸ್ಥರಲ್ಲಿ ಬೇಸರ ಮೂಡಿಸಿದೆ.
ಪುರಾತನ ಕಾಲದ ಸ್ಮಾರಕಗಳನ್ನು ಪುನಃ ಕಟ್ಟಲು ಸಾಧ್ಯವಿಲ್ಲ. ಇರುವ ಸ್ಮಾರಕಗಳನ್ನು ಉಳಿಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ. ಅದರಲ್ಲೂ ಮುಖ್ಯವಾಗಿ ಸ್ಥಳೀಯ ಗ್ರಾಪಂನವರ ಪಾತ್ರ ಪ್ರಮುಖವಾಗಿದೆ.
ಐತಿಹಾಸಿಕ ಮಹತ್ವವಿರುವ ಅಗಸೆ ಕಟ್ಟಡವನ್ನು ವಿಜಯನಗರ ಅರಸರ ಕಾಲದಲ್ಲಿ ನಿರ್ಮಿಸಲಾಗಿದ್ದು, ಸ್ಥಳೀಯ ಗ್ರಾಪಂ ನಿರ್ಲಕ್ಷ್ಯದಿಂದಾಗಿ ಈ ಕಟ್ಟಡವು ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಇದನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುವ ಜವಾಬ್ದಾರಿ ಸ್ಥಳೀಯ ಗ್ರಾಪಂ ಆಡಳಿತ ಮಂಡಳಿ ಮೇಲಿದೆ.
-ರಾಮಸ್ವಾಮಿ ಸಾಹುಕಾರ, ಗ್ರಾಮಸ್ಥ
ಐತಿಹಾಸಿಕ ಸ್ಮಾರಕಗಳು ಚರಿತ್ರೆ ತಿಳಿಸುವ ಕುರುಹುಗಳಾಗಿದ್ದು, ಉಳಿಸಿ, ಸಂರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ. ಇದಕ್ಕೆ ಸಂಬಂಧಿಸಿದ ಅ ಧಿಕಾರಿಗಳೊಂದಿಗೆ ಚರ್ಚಿಸಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುತ್ತೇನೆ.
-ಎನ್.ಆರ್.ಮಂಜುನಾಥಸ್ವಾಮಿ, ತಹಶೀಲ್ದಾರ್