Advertisement

ಸಮ್ಮಿಶ್ರ ಸರ್ಕಾರದಿಂದ ನೀರಾವರಿ ಯೋಜನೆ ನಿರ್ಲಕ್ಷ್ಯ

04:04 PM Dec 09, 2018 | |

ಯಲಬುರ್ಗಾ: ರಾಜ್ಯದಲ್ಲಿ ಈ ಹಿಂದೆ ಆಡಳಿತ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕೊಪ್ಪಳ ಏತ ನೀರಾವರಿ ಯೋಜನೆಗಳಿಗೆ ಹಣ ನೀಡಲಿಲ್ಲ. ಅಷ್ಟೇ ಅಲ್ಲದೇ ಪ್ರಸ್ತುತ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕೂಡ ನೀರಾವರಿ ಯೋಜನೆಗಳಿಗೆ ಅನುದಾನ ನೀಡದೇ ಈ ಭಾಗವನ್ನು ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಶಾಸಕ ಹಾಲಪ್ಪ ಆಚಾರ್‌ ಆಕ್ರೋಶ ವ್ಯಕ್ತಪಡಿಸಿದರು.

Advertisement

ತಾಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಶನಿವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹೆಚ್ಚುವರಿ ಕಟ್ಟಡಗಳ ಶಂಕುಸ್ಥಾಪನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕೊಪ್ಪಳ ಏತ ನೀರಾವರಿ ಯೋಜನೆಗಳಿಗೆ ಅನುದಾನ ನೀಡುವಂತೆ ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ ಅವರಿಗೆ ಜಿಲ್ಲೆಯ ಜನಪ್ರತಿನಿಧಿಗಳ ನಿಯೋಗದಿಂದ ಮನವಿ ಮಾಡುವ ಮೂಲಕ ಒತ್ತಾಯಿಸಲಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಕೇವಲ 38 ಸ್ಥಾನಗಳನ್ನು ಪಡೆದು ಜೆಡಿಎಸ್‌ ವಾಮಮಾರ್ಗದಿಂದ ಅಧಿಕಾರ ಹಿಡಿದಿದೆ. ಇದು ಪ್ರಜಾತಂತ್ರ ವ್ಯವಸ್ಥೆಗೆ ಮಾರಕವಾಗಿದೆ ಎಂದರು.

ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ 1.16 ಕೋಟಿ, ಹಿರೇವಂಕಲಕುಂಟಾದಿಂದ ಮಾಟಲದಿನ್ನಿ 3 ಕಿ.ಮೀ. ವರೆಗೆ ರಸ್ತೆ ಡಾಂಬರೀಕರಣ 52 ಲಕ್ಷ ರೂ., ಹಿರೇವಂಕಲಕುಂಟಾ ಗ್ರಾಮದಲ್ಲಿ 32 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರೀಟ್‌ ರಸ್ತೆ, ಪಿಯುಸಿ ಕಾಲೇಜು ಕಟ್ಟಡಗಳ ನಿರ್ಮಾಣಕ್ಕೆ 72 ಲಕ್ಷ ರೂ. ಮಂಜೂರುಗೊಳಿಸಲಾಗಿದೆ ಎಂದರು.

ಐತಿಹಾಸಿಕ ಚಿಕ್ಕವಂಕಲಕುಂಟಾ ಗ್ರಾಮದ ಕೆರೆಗೆ ಕಾಯಕಲ್ಪ ನೀಡುವ ಮಹಾದಾಸೆಯನ್ನು ಹೊಂದಿದ್ದೇನೆ. ಶೀಘ್ರದಲ್ಲಿ ಕೆರೆ ತುಂಬಿಸಿ ಅದೊಂದು ಪ್ರವಾಸಿ ತಾಣದ ಸ್ಥಳವನ್ನಾಗಿ ಮಾಡಲು ಪ್ರಯತ್ನಿಸಲಾಗುವುದು ಎಂದರು. ಈಗಾಗಲೇ ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಅಭಿವೃದ್ಧಿಯ ಸಲುವಾಗಿ ಹಲವಾರು ಕಾಮಗಾರಿಗಳನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದೇನೆ. ಬೆಳಗಾವಿ ಅಧಿವೇಶನದ ಬಳಿಕ ಕ್ಷೇತ್ರದ ಎಲ್ಲಾ ಗ್ರಾಮಗಳಿಗೂ ಭೇಟಿ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು. ಗ್ರಾಮಗಳಲ್ಲಿ ನಡೆಯವ ಅಭಿವೃದ್ಧಿ ಕಾಮಗಾರಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

ತಾಪಂ ಉಪಾಧ್ಯಕ್ಷ ವಿಶ್ವನಾಥ ಮರಿಬಸಪ್ಪನವರ ಮಾತನಾಡಿ, ಸರ್ಕಾರ ಶೈಕ್ಷಣಿಕ ಅಭಿವೃದ್ದಿಗಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದ್ದು, ಅವುಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಲೋಕಪಯೋಗಿ ಇಲಾಖೆ ಎಇಇ ಉಮಾಪತಿ ಶೆಟ್ಟರ್‌ ಪ್ರಾಸ್ತಾವಿಕ ಮಾತನಾಡಿ, ಹಿರೇವಂಕಲಕುಂಟಾ ಗ್ರಾಮದಲ್ಲಿ ಸರ್ಕಾರದ ಅನುದಾನದಲ್ಲಿ 2.35 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಶಾಸಕ ಹಾಲಪ್ಪ ಆಚಾರ್‌ ಅವರಿಂದ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಶಾಸಕರ ನಿರ್ದೇಶನದಂತೆ ಗುಣಮಟ್ಟದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

Advertisement

ತಾಪಂ ಅಧ್ಯಕ್ಷೆ ಲಕ್ಷ್ಮೀ  ಗೌಡ್ರ, ಜಿಪಂ ಸದಸ್ಯೆ ಹೊಳಿಯಮ್ಮ ಪಾಟೀಲ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ರುದ್ರಪ್ಪ ಮರಕಟ್‌, ಗ್ರಾಪಂ ಅಧ್ಯಕ್ಷ ಮಂಜುನಾಥ ಸಜ್ಜನ, ಶರಣಬಸವರಾಜ, ವಾಸುದೇವ, ಬಿಇಒ ಶರಣಪ್ಪ ವಟಗಲ್‌, ತಾಪಂ ಸದಸ್ಯರಾದ ಶರಣಪ್ಪ ಈಳಿಗೇರ, ರಾಮಣ್ಣ ಹೊಸಮನಿ, ಶಂಕರಗೌಡ, ಜಗನ್ನಾಥಗೌಡ, ಬಸವಲಿಂಗಪ್ಪ ಭೂತೆ, ಸಿ.ಎಚ್‌. ಪೊಲೀಸಪಾಟೀಲ, ಈರಪ್ಪ ಕುಡಗುಂಟಿ, ಈರಣ್ಣ ಹುಬ್ಬಳ್ಳಿ, ಶಿವನಗೌಡ ಬನ್ನಪ್ಪಗೌಡ್ರ, ರತನ ದೇಸಾಯಿ, ಕೊಟ್ರಪ್ಪ ತೋಟದ, ಅಡಿವೆಪ್ಪ ಭಾವಿಮನಿ, ಕೊಟ್ರಪ್ಪ ತೋಟದ, ಗಾಳೆಪ್ಪ ಒಜನಹಳ್ಳಿ, ಮಲ್ಲಣ್ಣ ಹರ್ಲಾಪೂರ, ಆನಂದ ಈಳಿಗೇರ, ರಸೂಲ್‌ಸಾಬ್‌ ದಮ್ಮೂರು ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next