ಬೆಂಗಳೂರು: ಹಲಸೂರಿನ ಬಿಬಿಎಂಪಿ ಹೆರಿಗೆ ಆಸ್ಪತ್ರೆಯಲ್ಲಿ ಸ್ವತ್ಛತೆ ಕಾಪಾಡದೆ ನಿರ್ಲಕ್ಷಿಸಿದ್ದ ಗುತ್ತಿಗೆದಾರರಿಗೆ 50 ಸಾವಿರ ರೂ. ದಂಡ ವಿಧಿಸಿರುವ ಮೇಯರ್ ಜಿ. ಪದ್ಮಾವತಿ ಅವರು, ಈ ಸಂಬಂಧ ಆಸ್ಪತ್ರೆಯ ಆರೋಗ್ಯಾಧಿಕಾರಿಗೂ ನೋಟಿಸ್ ಜಾರಿ ಮಾಡಿದ್ದಾರೆ.
ಬುಧವಾರ ಅಧಿಕಾರಿಗಳೊಂದಿಗೆ ಪೂರ್ವ ವಲಯದ ಬಿಬಿಎಂಪಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಸ್ಥಿತಿ ಗತಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಹಲಸೂರು ಹೆರಿಗೆ ಆಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿನ ಅವ್ಯವಸ್ಥೆ ನೋಡಿ ದಂಗಾದರು. ಆಸ್ಪತ್ರೆಯ ಸುತ್ತಲಿನ ಪರಿಸರದಲ್ಲಿ ಕಸ ತುಂಬಿಕೊಂಡಿತ್ತು. ಹೀಗಾಗಿ ಸಮರ್ಪಕವಾಗಿ ತ್ಯಾಜ್ಯ ವಿಲೇವಾರಿ ಮಾಡಿದೆ ನಿರ್ಲಕ್ಷ್ಯ ವಹಿಸಿದ್ದ ಗುತ್ತಿಗೆದಾರರ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದರು.
50 ಸಾವಿರ ರೂ. ದಂಡ ವಿಧಿಸಿದ್ದಲ್ಲದೆ, ಆಸ್ಪತ್ರೆಯ ವೈದ್ಯಾಧಿಕಾರಿಗೆ ನೋಟಿಸ್ ಜಾರಿ ಮಾಡಿದರು. ಬಳಿಕ ಶಸ್ತ್ರಚಿಕಿತ್ಸಾ ಕೊಠಡಿ ಪರಿಶೀಲಿಸಿ ದಾಗ ಅಲ್ಲಿನ ಟೇಬಲ್ ಸೇರಿದಂತೆ ವಿವಿಧ ಯಂತ್ರೋಪಕರಣಗಳು ಬಳಕೆಯಾಗದೆ ತುಕ್ಕು ಹಿಡಿದಿರುವುದು ಕಂಡುಬಂತು. ಇದರಿಂದ ಬೇಸರಗೊಂಡ ಮೇಯರ್, ಆಸ್ಪತ್ರೆ ವೈದ್ಯರನ್ನು ತರಾಟೆಗೆ ತೆಗೆದುಕೊಂಡರು. ಲಕ್ಷಾಂತರ ರೂ. ಬಂಡವಾಳ ಹಾಕಿ ಸಾರ್ವಜನಿಕರ ಉಪಯೋಗಕ್ಕೆ ಪಾಲಿಕೆ ನೀಡಿರುವ ಯಂತ್ರೋಪಕರಣಗಳನ್ನು ಸಂರಕ್ಷಿಸಿಡುವ ಜವಾಬ್ದಾರಿ ನಿಮ್ಮದ ಲ್ಲವೇ?.
ಇಂತಹ ತುಕ್ಕು ಹಿಡಿದ ವಸ್ತುಗ ಳನ್ನು ಹೆರಿಗೆಗೆ ಬಳಸಿದರೆ ಸೋಂಕು ತಗಲುವುದಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡರು. ಕೂಡಲೇ ತುಕ್ಕು ಹಿಡಿದಿರುವ ವಸ್ತುಗ ಳನ್ನು ಸ್ವತ್ಛಗೊಳಿಸಿ, ಸುರಕ್ಷಿತವಾಗಿಡಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರಲ್ಲದೆ, ವಸ್ತುಗಳನ್ನು ನಿರ್ಲಕ್ಷಿಸಿರುವುದಕ್ಕೆ ಉತ್ತರಿಸುವಂತೆ ವೈದ್ಯರಿಗೆ ನೋಟಿಸ್ ನೀಡಿದರು.
ವೈದ್ಯರು, ನರ್ಸ್ ಇರಲಿಲ್ಲ: ನಂತರ ಮೇಯರ್ ಮರ್ಫಿಟೌನ್ ಆಸ್ಪತ್ರೆಗೆ ಭೇಟಿ ನೀಡಿದಾಗ ಅಲ್ಲಿ ವೈದ್ಯರು ಹಾಗೂ ನರ್ಸ್‌ಗಳು ಕರ್ತವ್ಯಕ್ಕೆ ಹಾಜರಿರಲಿಲ್ಲ. ಸಹಾಯಕ ಫಾರ್ಮಾಸಿಸ್ಟ್ ರೋಗಿಗಳ ತಪಾಸಣೆ ನಡೆಸಿ ಔಷಧ ನೀಡುತ್ತಿದ್ದರು. ಮೇಯರ್ ಆಸ್ಪತ್ರೆಗೆ ಬಂದಿರುವ ಸುದ್ದಿ ತಿಳಿದು ಸ್ಥಳಕ್ಕೆ ಬಂದ ನರ್ಸ್ ಒಬ್ಬರನ್ನು ತರಾಟೆಗೆ ತೆಗೆದುಕೊಂಡ ಮೇಯರ್, ವೈದ್ಯರು ಎಲ್ಲಿ ಹೋಗಿದ್ದಾರೆ?
ಕರ್ತವ್ಯದ ಸಮಯದಲ್ಲಿ ಹೊರಗಡೆ ಹೋಗುವ ಅವಶ್ಯಕತೆ ಏನಿದೆ? ಎಂದು ಪ್ರಶ್ನಿಸಿದರಲ್ಲದೆ, ಕರ್ತವ್ಯಕ್ಕೆ ಗೈರಾಗಿದ್ದ ವೈದ್ಯರು ಮತ್ತು ನರ್ಸ್‌ಗಳಿಗೆ ನೋಟಿಸ್ ನೀಡಿದರು. ಬಳಿಕ ಆಸ್ಟಿನ್‌ಟೌನ್ ಆಸ್ಪತ್ರೆಗೆ ಭೇಟಿ ನೀಡಿದ ಅವರು, ಅಲ್ಲಿ ಗರ್ಭಿಣಿಯರಿಗೆ ಮಡಿಲು ಕಿಟ್‌ಗಳನ್ನು ವಿತರಿಸಿದರು. ಸರ್ಕಾರದ ಮಡಿಲು ಕಿಟ್ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ವೈದ್ಯರಿಗೆ ಸೂಚನೆ ನೀಡಿದರು. ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಡಾ. ನಿರ್ಮಲಾ ಸೇರಿದಂತೆ ಮತ್ತಿತರ ಅಧಿಕಾರಿ ಗಳು ಈ ವೇಳೆಪಸ್ಥಿತರಿದ್ದರು.