Advertisement

ಮುರಿದ ಸೇತುವೆಗಳ ಮರು ನಿರ್ಮಾಣಕ್ಕೆ ನಿರ್ಲಕ್ಷ್ಯ

03:13 PM May 27, 2023 | Team Udayavani |

ರಾಮನಗರ: ಕಳೆದ ವರ್ಷ ಸುರಿದ ಬಾರಿ ಮಳೆಯಿಂದಾಗಿ ಹಾನಿಗೀಡಾಗಿರುವ ಸೇತುವೆಗಳು ಇನ್ನೂ ದುರಸ್ತಿಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಸಂಪರ್ಕ ತುಂಡಾಗಿದ್ದು, ಸಾರ್ವಜನಿಕರ ಸಂಪರ್ಕ ಕಡಿತಗೊಂಡಿರುವುದು ಒಂದೆಡೆಯಾದರೆ, ಮತ್ತೂಂದೆಡೆ ಅರ್ಧಂಬರ್ಧ ಮುರಿದಿರುವ ಸೇತುವೆಯ ಮೇಲೆ ಸಣ್ಣಪುಟ್ಟ ವಾಹನ ಸವಾರರು ಜೀವ ಅಂಗೈಯಲ್ಲಿಡಿದು ತಿರುಗಾಡುವ ಅನಿವಾರ್ಯತೆ ನಿರ್ಮಾಣಗೊಂಡಿದೆ.

Advertisement

2022ರ ಆಗಸ್ಟ್‌ ತಿಂಗಳಲ್ಲಿ ಸುರಿದ ಬಾರಿ ಮಳೆಯಿಂದಾಗಿ ರಾಮನಗರ ತಾಲೂಕಿನಲ್ಲಿ ಅರ್ಕಾವತಿ ನದಿಗೆ ಅಡ್ಡಲಾಗಿಕಟ್ಟಲಾಗಿದ್ದ, ಮಂಚನಬೆಲೆ, ಸುಗ್ಗನಹಳ್ಳಿ, ಹರೀಸಂದ್ರ, ಮೆಳ್ಳಹಳ್ಳಿ ಗ್ರಾಮಗಳ ಸಮೀಪ ಸೇತುವೆ ಮುರಿದು ಹೋಗಿದ್ದು, ಹಲವು ತಿಂಗಳುಗಳೇ ಕಳೆದರೂ ಈ ಸೇತುವೆ ದುರಸ್ತಿಗೊಂಡಿಲ್ಲ. ಇನ್ನು ಹೊಸ ಸೇತುವೆ ನಿರ್ಮಿಸುವ ಯಾವ ಸೂಚನೆಯೂ ದೊರೆಯದ ಹಿನ್ನೆಲೆಯಲ್ಲಿ ಈ ಭಾಗದ ಗ್ರಾಮಗಳಲ್ಲಿ ಸಾಕಷ್ಟು ಸಮಸ್ಯೆ ಎದುರಾಗಿದೆ.

ಸುಗ್ಗನಹಳ್ಳಿ ಭಾಗದ ಜನರ ಪರದಾಟ: ತಾಲೂಕಿನ ಮಂಚನಬೆಲೆ ಜಲಾಶಯದ ಮಾರ್ಗದಲ್ಲಿರುವ ಸುಗ್ಗನಹಳ್ಳಿ ಗೇಟ್‌ನಿಂದ ಸುಗ್ಗನಹಳ್ಳಿ ಮೂಲಕ ಮಾ ಯ ಗಾನಹಳ್ಳಿ ಗ್ರಾಮದ ವರೆಗೆ ಸಂಪರ್ಕ ಕಲ್ಪಿಸುವ ಸುಗ್ಗನಹಳ್ಳಿ ಸೇತುವೆ ಮೂಲಕ ದಾರಾಪುರ, ಲಕ್ಕಸಂದ್ರ ಗ್ರಾಮಗಳನ್ನು ಹಾಯ್ದು ಮಾಯಗಾನಹಳ್ಳಿ ಗ್ರಾಮದ ಬಳಿ ಬೆಂ-ಮೈ ಹೆದ್ದಾರಿಗೆ ಸಂಪರ್ಕ ಪಡೆಯ ಬಹು ದಾಗಿತ್ತು. ಇದೀಗ ಸೇತುವೆ ಮುರಿದು ಬಿದ್ದಿರುವ ಹಿನ್ನೆಲೆ ಯಲ್ಲಿ ಈ ಗ್ರಾಮಗಳ ನಡುವೆ ಸಂಪರ್ಕ ತುಂಡಾಗಿದೆ. ಈ ಸೇತುವೆ ಮೂಲಕ ನೂರಾರು ಮಂದಿ ಪ್ರತಿನಿತ್ಯ ಸಂಚರಿಸುತ್ತಿದ್ದು, ಸೇತುವೆ ಹಾನಿ ಯಾಗಿರುವ ಹಿನ್ನೆಲೆಯಲ್ಲಿ ಈ ಗ್ರಾಮಗಳ ನಡುವೆ ಸಂಚರಿಸುತ್ತಿದ್ದ ಬಸ್‌ ಸಂಚಾರವನ್ನು ನಿಲ್ಲಿಸಲಾಗಿದೆ. ಇದರಿಂದ ಸುಗ್ಗನಹಳ್ಳಿ, ದಾರಾಪುರ ಮತ್ತು ಲಕ್ಕಸಂದ್ರ ಗ್ರಾಮದ ಜನತೆ ಸುಗ್ಗನಹಳ್ಳಿ ಗೇಟ್‌ವರೆಗೆ ನಡೆದುಕೊಂಡು ಬಂದೇ ಬಸ್‌ ಹತ್ತಬೇಕಿದೆ.

ಮಣ್ಣಿನ ಸೇತುವೆಯ ಮೇಲೆ ಸಂಚಾರ: ಇನ್ನು ಸೇತುವೆ ಮುರಿದಿದ್ದು ಮಣ್ಣು ಸುರಿದು ಗ್ರಾಮಸ್ಥರೇ ತಾತ್ಕಾಲಿಕ ಸೇತುವೆಯನ್ನು ನಿರ್ಮಿಸಿಕೊಂಡಿದ್ದಾರೆ. ಈ ಸೇತುವೆಯ ಮೇಲೆ ಬೈಕ್‌, ಸಣ್ಣ ಕಾರುಗಳು ಸೇರಿದಂತೆ ಲಘು ವಾಹನಗಳು ಸಂಚರಿಸುತ್ತಿದ್ದು, ಈ ವಾಹನಗಳ ಸವಾರರು ಕಿರಿದಾದ ತಾತ್ಕಾಲಿಕ ಸೇತುವೆಯ ಮೇಲೆ ಜೀವ ಕೈಯಲ್ಲಿಡಿದು ತಿರುಗಾಡುವಂತಾಗಿದೆ. ಕಡಿದಾದ ಮಣ್ಣಿನ ಸೇತುವೆಯ ಮೇಲೆ ಸಂಚರಿಸುವಾಗ ಪ್ರಯಾಣಿಕರು ಜೀವಕೈಯಲ್ಲಿಡಿದು ಪ್ರಯಾಣಿಸ ಬೇಕಿದ್ದು, ಸ್ವಲ್ಪ ಯಾಮಾರಿದರೆ ನದಿಗೆ ಬೀಳುವ ಅಪಾಯವಿದೆ.

ಭರವಸೆಯಾಗೇ ಉಳಿದ ಕಾಮಗಾರಿ: ಮುರಿದು ಬಿದ್ದಿರುವ ಸುಗ್ಗನಹಳ್ಳಿ ಸೇತುವೆಯನ್ನು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ, ಹಿಂದಿನ ಜಿಲ್ಲಾ ಉಸ್ತು ವಾರಿ ಸಚಿವ ಡಾ.ಅಶ್ವತ್ಥ್ನಾರಾಯಣ್‌, ಸಂಸದ ಡಿ. ಕೆ.ಸುರೇಶ್‌, ಅಂದಿನ ಶಾಸಕರಾಗಿದ್ದ ಅನಿತಾ ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲಿಸಿದ್ದರು. ಇನ್ನು ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡುವುದಾಗಿ ಹೇಳಿ 2 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸುವುದಾಗಿ ಹೇಳಿ ರಾಜ ಕಾರಣಿಗಳು ಹೋದರು. ಆದರೆ, ಕಾಮಗಾರಿ ಮಾತ್ರ ಖಾಲಿ ಭರವಸೆಯಾಗೇ ಉಳಿದಿದೆ. ಮೂರು ತಿಂಗಳ ಹಿಂದೆ ಸ್ಥಳಕ್ಕೆ ಬಂದ ಇಟಾಚಿ ಅಲ್ಲೇ ನಿಂತಿದೆಯೇ ಹೊರತು, ಯಾವುದೇ ಪ್ರಯೋಜನ ಆಗಿಲ್ಲ.

Advertisement

ಹರೀಸಂದ್ರ ಸೇತುವೆ ಅವ್ಯವಸ್ಥೆ: ತಾಲೂಕಿನ ಹರೀಸಂದ್ರ ಸೇತುವೆ ಸಹ ಕಳೆದ ವರ್ಷ ಸುರಿದ ಬಿರುಮಳೆಯಿಂದ ಹಾನಿಯಾಗಿತ್ತು. ಹರೀಸಂದ್ರ ಗ್ರಾಮದ ಬಳಿ ಅರ್ಕಾವತಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಈಸೇತುವೆಯ ಮೂಲಕ ತಿಮ್ಮಸಂದ್ರ, ಮಾದಾಪುರ ಗ್ರಾಮದ ಮೂಲಕ ಬೆಂಗಳೂರು- ಮೈಸೂರು ಹೆದ್ದಾರಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಸೇತುವೆ ಇದೀಗ ಮುರಿದು ಹೋಗಿದ್ದು, ಅರ್ಧಂಬರ್ಧ ಇರುವ ಸೇತುವೆಯ ಮೇಲೆ ಈ ಭಾಗದ ಪ್ರಯಾಣಿಕರು ತಿರುಗಾಡುತ್ತಿದ್ದಾರೆ. ಸುತ್ತಿಬಳಸಿ ತಿರುಗಾಡುವ ಪರಿಸ್ಥಿತಿ:

ಜನರ ಆಕ್ರೋಶ : ರಾಮನಗರ ತಾಲೂಕಿನ ಮೆಳ್ಳಹಳ್ಳಿ ಗ್ರಾಮದ ಬಳಿ ಹರಿಯುವ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗಿರುವ ಸೇತುವೆ ಹಾನಿಯಾಗಿದ್ದು, ಇದರಿಂದ ಮೆಳ್ಳಹಳ್ಳಿ ಗ್ರಾಮದಿಂದ ಲಕ್ಷ್ಮೀಪುರ, ಮಾಗಡಿ ಮುಖ್ಯರಸ್ತೆಗೆ ಬರಲು ಗ್ರಾಮಸ್ಥರು ಗುಂಗರಹಳ್ಳಿ ಬಳಸಿಕೊಂಡು ಬರುವಂತಾಗಿದೆ. ಈ ಸೇತುವೆ ಮುರಿದು ಹೋಗಿ ಹಲವು ತಿಂಗಳುಗಳೇ ಕಳೆದಿದ್ದರೂ, ಕಾಮಗಾರಿ ಆರಂಭಿಸಲು ಲೋಕೋಪಯೋಗಿ ಇಲಾಖೆ ಮುಂದಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪಾಯದ ಪ್ರಯಾಣ: ಈ ಹಾನಿಗೊಳಗಾಗಿರುವ ಸೇತುವೆ ಅಪಾಯಕ್ಕೆ ಆಹ್ವಾನ ನೀಡುತ್ತಿದ್ದು, ಇತ್ತೀಚಿಗೆ ಸುಗ್ಗನಹಳ್ಳಿ ಗೇಟ್‌ನಿಂದ ರಾತ್ರಿ ವೇಳೆ ಬಸ್‌ ಇಳಿದು ಸುಗ್ಗನಹಳ್ಳಿ ಗ್ರಾಮಕ್ಕೆ ನಡೆದುಕೊಂಡು ಬರುತ್ತಿದ್ದ ವ್ಯಕ್ತಿಯೊಬ್ಬರು ಕತ್ತಲಲ್ಲಿ ಕಾಣಿಸದೆ ನದಿಗೆ ಕಾಲುಜಾರಿ ಬಿದಿದ್ದರು. ಹಿಂದಿನಿಂದ ಬರುತ್ತಿದ್ದವರು ನೋಡಿದ ಕಾರಣ ಇವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನದಿಯಲ್ಲಿ ನೀರಿನ ಹರಿವು ಜೋರಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನು ಹರೀಸಂದ್ರ ಸೇತುವೆ ಬಳಿ ವಾಹನಗಳು ಸಲೀಸಾಗಿ ಪ್ರಯಾಣಿಸದೆ ಸಮಸ್ಯೆಯಾಗುತ್ತಿದೆ. ಹೆಚ್ಚು ಬಾರ ಹೊತ್ತ ಟ್ರಾಕ್ಟರ್‌ ಹಾಗೂ ಹೆಚ್ಚು ಜನರಿರುವ ವಾಹನಗಳು ಈ ಸೇತುವೆಯನ್ನುದಾಟಲು ಪರದಾಡುವಂತಾಗಿದೆ.

ನಮ್ಮ ಭಾಗದಲ್ಲಿ ಸೇತುವೆಗಳು ಹಾನಿಯಾಗಿರುವುದರಿಂದ ಸಂಚಾರಕ್ಕೆ ಸಮಸ್ಯೆಯಾಗಿದೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಲಾಗಿದ್ದರೂ, ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಮುರಿದ ಸೇತುವೆಯ ಮೇಲೆ ಜೀವ ಭಯದಿಂದ ತಿರುಗಾಡುವಂತಾಗಿದೆ. ಇನ್ನಾದರೂ ಸಂಬಂಧಿಸಿದ ವ್ಯಕ್ತಿಗಳು ಇತ್ತ ಗಮನಹರಿಸಿ ನಮಗೆ ಸಮಸ್ಯೆ ಪರಿಹರಿಸಲಿ. -ಹರೀಶ್‌ಕುಮಾರ್‌, ವಕೀಲರು, ಸುಗ್ಗನಹಳ್ಳಿ

-ಸು.ನಾ.ನಂದಕುಮಾರ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next