Advertisement

Madhugiri: ವಿದ್ಯುತ್  ತಂತಿ ಸರಿಪಡಿಸಲು ನಿರ್ಲಕ್ಷ್ಯ

03:40 PM Sep 16, 2023 | Team Udayavani |

ಮಧುಗಿರಿ: ಸ್ಥಳೀಯ ಆಡಳಿತ ಸಂಸ್ಥೆಯಾದ ಪುರಸಭೆ ನಿರ್ಲಕ್ಷ್ಯದಿಂದ ಪಟ್ಟಣದ ಕ್ರೀಡಾಂಗಣದಲ್ಲಿರುವ ವಿದ್ಯುತ್‌ ಕಂಬಗಳಲ್ಲಿರುವ ವಿದ್ಯುತ್‌ ತಂತಿಗಳು ಹೊರಗಡೆ ಬಂದಿದೆ.

Advertisement

ಆದ್ದರಿಂದ ಪ್ರತಿಭಾ ಕಾರಂಜಿ ಹಾಗೂ ಕ್ರೀಡಾಕೂಟದಲ್ಲಿ ಮಕ್ಕಳು ತಮ್ಮ ಜೀವವನ್ನು ಕೈಯಲ್ಲಿಡಿದುಕೊಂಡು ಪ್ರತಿಭೆ ಪ್ರದರ್ಶನ ಮಾಡಬೇಕಾದ ಅನಿವಾರ್ಯ ನಿರ್ಮಾಣವಾಗಿದೆ. ಆದರೂ, ಪುರಸಭೆಯಾಗಲಿ, ಸಾರ್ವಜನಿಕ ಶಿಕ್ಷಣ ಇಲಾಖೆಗಾಗಲಿ ಮಕ್ಕಳ ಜೀವದ ಬಗ್ಗೆ ಯಾವುದೇ ಕಾಳಜಿಯಿಲ್ಲದಂತೆ ಕಾಣುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ಪಟ್ಟಣದ ರಾಜೀವ್‌ ಗಾಂಧಿ ಕ್ರೀಡಾಂ ಗಣದಲ್ಲಿ ಸೆ.6ರಂದು ಸಿದ್ದರಾಮಯ್ಯ ಅವರು ಕ್ಷೀರಭಾಗ್ಯ ದಶಮಾನೋತ್ಸವ ಕಾರ್ಯಕ್ರಮ ನಡೆಸಿಕೊಟ್ಟರು. ಇದನ್ನು ಕೆಎಂಎಫ್ ವತಿಯಿಂದಲೇ ಕೋಟ್ಯಂತರ ರೂ. ಅನುದಾನ ಖರ್ಚುಮಾಡಿ ನಡೆಸಲಾಗಿತ್ತು. ಕಾರ್ಯಕ್ರಮದಲ್ಲಿ ಊಟ, ಮಜ್ಜಿಗೆ ಸೇರಿದಂತೆ ತಿನ್ನುವ ಪದಾರ್ಥಗಳು ಬೀದಿಯಲ್ಲಿ ಚೆಲ್ಲಾಡಿದವು. ಕಾರ್ಯಕ್ರಮ ಮುಗಿದು 2 ದಿನವಾದರೂ ಕ್ರೀಡಾಂಗಣದ ಸಮೀಪದ ಪ್ರಥಮ ದರ್ಜೆ ಕಾಲೇಜಿನಲ್ಲಿನ ಸಭಾಂಗಣದಲ್ಲಿ ಮಜ್ಜಿಗೆ ಪ್ಯಾಕೇಟ್‌ಗಳ ಮೂಟೆಗಳು ಹೊರಲಾಡುತ್ತಿದ್ದು, ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಿತ್ತು.

ಬಲಿಗೆ ಕಾದಿವೆ ವಿದ್ಯುತ್‌ ಕಂಬಗಳು: ಕಾರ್ಯಕ್ರಮ ಮುಗಿದು ವಾರ ಕಳೆದರೂ ಕ್ರೀಡಾಂಗಣದ ವಿದ್ಯುತ್‌ ಕಂಬಗಳಲ್ಲಿನ ವೈರ್‌ಗಳು ಹೊರಗಡೆ ಬಂದಿದ್ದು, ಪುರಸಭೆಯಾಗಲಿ, ಕಾರ್ಯ ಕ್ರಮಕ್ಕೆ ವಿದ್ಯುತ್‌ ಪಡೆದ ಕೆಎಂಎಫ್ ಅಧಿಕಾರಿ ಗಳಾಗಲಿ ಇತ್ತ ತಿರುಗಿಯೂ ನೋಡಲಿಲ್ಲ. ಬೆಳಗ್ಗೆ, ಸಂಜೆ ಸಾರ್ವಜನಿಕರು ವಾಯು ವಿಹಾರ ಮಾಡು ತ್ತಿದ್ದು, ಇಲ್ಲಿನ ಕಂಬಗಳಿಂದ ವಿದ್ಯುತ್‌ ವೈರ್‌ಗಳು ಹೊರಗಡೆ ಬಂದಿವೆ. ಶೇ.80ರಷ್ಟು ದೀಪಗಳು ಇಲ್ಲದೆ ಕತ್ತಲಲ್ಲೇ ವಾಕಿಂಗ್‌ ಮಾಡುವ ಪರಿಸ್ಥಿತಿ ಬಂದಿದೆ. ಬೆಳಗ್ಗೆ ವಾಕಿಂಗ್‌ ಮಾಡುವಾಗ ಸಮಸ್ಯೆಗಳ ಬಗ್ಗೆ ಚರ್ಚೆಯಾಗಿದ್ದು, ಮಕ್ಕಳ ಪ್ರಾಣಕ್ಕೆ ತೊಂದರೆಯಾದರೆ ಏನು ಗತಿ ಎಂಬ ಪ್ರಶ್ನೆಗೆ ಪುರಸಭೆ ಸದಸ್ಯರೊಬ್ಬರು, ಸತ್ತರೆ ಪುರಸಭೆಯಿಂದ ಪರಿಹಾರ ಕೊಡಲಾಗುತ್ತದೆ ಎಂಬ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದು, ಮಕ್ಕಳ ಪ್ರಾಣಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಕಾಡುತ್ತಿದೆ.

ಅಧಿಕಾರಿಗಳ ನಿರ್ಲಕ್ಷ್ಯ: ಸಮಸ್ಯೆ ಬಗ್ಗೆ ಬಿಇಒ ಹನುಮಂತರಾಯಪ್ಪ ಅವರ ಗಮನಕ್ಕೆ ತಂದಾಗ, ಈ ಬಗ್ಗೆ ನನಗೆ ಗೊತ್ತಿಲ್ಲ. ಸಂಬಂಧಪಟ್ಟವರಿಂದ ಸಮಸ್ಯೆ ಪರಿಹಾರಕ್ಕೆ ಸೂಚಿಸುತ್ತೇನೆ ಎಂದಿದ್ದಾರೆ. ಮುಖ್ಯಾಧಿಕಾರಿ ಕೂಡ ಎಷ್ಟು ಬಾರಿ ಹೇಳಿದರೂ ಸಿಸಿಎಂಎಸ್‌ ಸಂಸ್ಥೆಯವರು ಕೇಳುತ್ತಿಲ್ಲ. ಡಿಯುಡಿಸಿಗೆ ಹೇಳಿಸಿ ಮಾಡಿಸುತ್ತೇವೆ ಎಂದಿದ್ದಾರೆ. ಎಲ್ಲಾ ಅಧಿಕಾರಿಗಳು ಕೂಡ ಸಮಸ್ಯೆ ಪರಿಹಾರಕ್ಕೆ ಆಸಕ್ತಿ ತೋರುತ್ತಿಲ್ಲ. ಬದಲಿಗೆ ಅವರಿಗೆ ಇವರಿಗೆ ತಿಳಿಸುತ್ತೇನೆ ಎಂಬುದಷ್ಟೇ ಇವರ ಉತ್ತರವಾಗಿದೆ. ಕೆಲಸ ಮಾಡುವ ಸಚಿವರ ಕ್ಷೇತ್ರದಲ್ಲಿ ಇಂತಹ ಅಧಿಕಾರಿಗಳು ಇರುವುದು ನಿಜಕ್ಕೂ ದುರಂತವಾಗಿದೆ.

Advertisement

ಹಾಳಾಗಿದೆ ಕಾಂಪೌಂಡ್‌: ಸೆ.6ರ ಸಿಎಂ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಸೇರಿವ ನಿರೀಕ್ಷೆಯಿಂದ ಕ್ರೀಡಾಂಗಣದ ಮುಖ್ಯದ್ವಾರ ಹೊರತುಪಡಿಸಿ, ಮತ್ತೆರಡು ಕಡೆ ಕಾಂಪೌಂಡ್‌ ಒಡೆದು ದಾರಿ ಮಾಡಲಾಗಿತ್ತು. ಈಗ ಇದೇ ದಾರಿಯಿಂದ ಹಸುಗಳು, ಹಂದಿಗಳು, ನಾಯಿಗಳು ಸೇರಿದಂತೆ ಜಾನುವಾರುಗಳು ಕ್ರೀಡಾಂಗಣಕ್ಕೆ ಬರುತ್ತಿದ್ದು, ವಾಂಕಿಂಗ್‌ ಮಾಡುವ ಹಾಗೂ ಆಟವಾಡುವ ಮಕ್ಕಳಿಗೆ ಸಮಸ್ಯೆಯಾಗಿದೆ. ಶೀಘ್ರದಲ್ಲೇ ತಾತ್ಕಾಲಿಕವಾಗಿ ನಿರ್ಮಿಸಿದ ದ್ವಾರಗಳನ್ನು ಮುಚ್ಚಿಸಿ, ವಿದ್ಯುತ್‌ ದೀಪಗಳು ಬೆಳಗುವಂತೆ ಹಾಗೂ ಕಂಬದಿಂದ ಹೊರಗಡೆ ಬಂದಿರುವ ವಿದ್ಯುತ್‌ ವೈರ್‌ ಗಳನ್ನು ಸಮರ್ಪಕವಾಗಿ ಜೋಡಣೆ ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಾರ್ಮಿಕರಿಗೆ ಗೌರವ ನೀಡಲಿಲ್ಲ: ಸಿಎಂ ಕಾರ್ಯಕ್ರಮಕ್ಕೆ ಇಡೀ ಪಟ್ಟಣವನ್ನು ಸುಂದರವಾಗಿಸಿದ್ದು, ಸಭೆ ನಂತರ ಸ್ವತ್ಛಗೊಳಿಸಿದ್ದು ಪುರಸಭೆ ಕಾರ್ಮಿಕರು. ಸಭೆ ಯಶಸ್ವಿಯಾದ ನಂತರ ಅವರಿಗೆ ಕನಿಷ್ಟ ಗೌರವ ನೀಡಲಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಅವರಿಗೆ 2 ಸಾವಿರ ರೂ. ನಗದು ಪ್ರೋತ್ಸಾಹ ಧನ ನೀಡುವಂತೆ ಸೂಚಿಸಿದ್ದರೂ, ಮಹಾತ್ಮನೊಬ್ಬರು ತಲಾ 500 ರೂ., ನೀಡಿ ಕೈ ತೊಳೆದುಕೊಂಡ ಎನ್ನುವ ಸುದ್ದಿ ಹರಡಿದೆ. ಈ ಬಗ್ಗೆ ಸಚಿವರು ಸಂಬಂಧಿಸಿದವರನ್ನು ಕರೆದು ಮಾತನಾಡಿಸಬೇಕು ಎಂದು ಹೆಸರನ್ನು ಹೇಳದ ಪೌರ ಕಾರ್ಮಿಕರೊಬ್ಬರು ತಿಳಿಸಿದ್ದಾರೆ.

ಸದರಿ ಸಮಸ್ಯೆ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗೆ ತಿಳಿಸಿದ್ದೇನೆ. ಶೀಘ್ರವಾಗಿ ಅಪಾಯವನ್ನು ತರುವಂತ ವಿದ್ಯುತ್‌ ಸಮಸ್ಯೆಗಳನ್ನು ಪರಿಹಾರ ಮಾಡುವಂತೆ ಸೂಚಿಸಲಾಗಿದೆ. -ರಿಷಿ ಆನಂದ್‌, ಎಸಿ ಹಾಗೂ ಆಡಳಿತಾಧಿಕಾರಿ, ಪುರಸಭೆ

ಇದನ್ನು ಸಿಸಿಎಂಎಸ್‌ ಸಂಸ್ಥೆಯಿಂದ ನಿರ್ವಹಣೆ ಮಾಡಲಾಗುತ್ತದೆ. ಸಿಎಂ ಕಾರ್ಯಕ್ರಮದ ನಂತರ ಅವರಿಗೆ ತಿಳಿಸಿದ್ದರೂ ಸರಿಪಡಿಸಿಲ್ಲ. ಈ ಬಗ್ಗೆ ಡಿಯುಡಿಸಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲಾಗುವುದು. -ನಜ್ಮಾ, ಮುಖ್ಯಾಧಿಕಾರಿ, ಪುರಸಭೆ

ಸಿಎಂ ಕಾರ್ಯಕ್ರಮಕ್ಕೆ ವಿದ್ಯುತ್‌ ಬಳಸಿಕೊಂಡ ಕೆಎಂಎಫ್ ಅವರು ವೈರ್‌ಗಳನ್ನು ಹಾಗೆ ಬಿಟ್ಟಿದ್ದಾರೆ. ಎರಡು ತಾತ್ಕಾಲಿಕ ದ್ವಾರ ಮಾಡಿಸಿದ್ದು, ಅದೂ ಹಾಗೆಯಿದೆ. ದೀಪಗಳು ಬೆಳಗದೆ ಕತ್ತಲಲ್ಲಿ ವಾಕಿಂಗ್‌ ಮಾಡಬೇಕಿದೆ. ಶೀಘ್ರದಲ್ಲೇ ಕ್ರೀಡಾಂಗಣವನ್ನು ಮೊದಲಿನಂತೆ ನಿರ್ಮಿಸಿ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. -ಶ್ರೀನಿವಾಸ್‌, ಸ್ಥಳೀಯರು

-ಮಧುಗಿರಿ ಸತೀಶ್‌

Advertisement

Udayavani is now on Telegram. Click here to join our channel and stay updated with the latest news.

Next