ದಾವಣಗೆರೆ: ಇಂದಿನ ಆಧುನಿಕ ಯುಗದಲ್ಲೂ ಬೇಡಿಕೊಂಡು ಮಹಿಳಾ ದಿನಾಚರಣೆ ಆಚರಿಸಬೇಕಾಗುತ್ತಿದೆ ಎಂದು ಮೇಯರ್ ರೇಖಾ ನಾಗರಾಜ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಗುರುವಾರ ಡಾನ್ ಬಾಸ್ಕೋ ಬಾಲಕಾರ್ಮಿಕರ ಮಿಷನ್‌ನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಮನೆ ಒಳಗೆ ಮತ್ತು ಹೊರಗೆ ಪುರುಷರ ಸಮಾನವಾಗಿ ಮಹಿಳೆಯರುದುಡಿದರೂ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳುವ ವಾತಾವರಣ ಇಲ್ಲ. ಒಂದೊಮ್ಮೆ ತೆಗೆದುಕೊಳ್ಳುವಂತಹ ನಿರ್ಧಾರಕ್ಕೆ ಬೆಲೆಯೇ ಇಲ್ಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇಂದಿನ ವೈಜ್ಞಾನಿಕ, ಆಧುನಿಕತೆಯ ಯುಗದಲ್ಲೂ ಮಹಿಳೆಯರು ಕಸ, ಮುಸುರೆ, ಬಟ್ಟೆ ತೊಳೆಯುವುದು, ಅಡುಗೆ ಮನೆಗೆ ಕೆಲಸಕ್ಕೆ ಮಾತ್ರ ಸೀಮಿತ ಎಂದೇ ನೋಡಲಾಗುತ್ತದೆ.
ಇಂದಿಗೂ ಅನೇಕ ಮಹಿಳೆಯರು ಒಂದು ರೀತಿಯ ಬಂಧನದಲ್ಲಿಟ್ಟಿರುವಂತಿದ್ದಾರೆ. ಮನೆಯ ಕೆಲಸ ಮಾಡುವ ಮಹಿಳೆಯರಿಗೂ ಸಮಾನತೆ, ಎಲ್ಲಾ ರೀತಿಯ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಇದೆ ಎಂದು ತಿಳಿಸಿದರು. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಚ್.ಎಂ. ಪ್ರೇಮಾ ಮಾತನಾಡಿ, ಇಂದಿನ ವಾತಾವರಣದಲ್ಲಿ ಜಗತ್ತಿನ ಜನಸಂಖ್ಯೆಯಲ್ಲಿ ಮಹಿಳೆಯರ ಪ್ರಮಾಣವು ಶೇ. 50 ರಷ್ಟಿದೆ.
ಪುರುಷರಿಗೆ ಸಮಾನವಾಗಿದ್ದರೂ ಪುರುಷ ಕೇಂದ್ರಿಕೃತ ವ್ಯವಸ್ಥೆಯ ನಡುವೆ ಮಹಿಳೆಯರಿಗೆ ದೊರೆಯಬೇಕಾದ ಸ್ಥಾನಮಾನ ದೊರೆಯುತ್ತಿಲ್ಲ. ಸಮಾಜ ಸಂಪೂರ್ಣ ಅಭಿವೃದ್ಧಿ ಆಗಬೇಕಾದಲ್ಲಿ ಮಹಿಳೆಯರು ಸಹ ಮುಖ್ಯವಾಹಿನಿಯಲ್ಲಿ ಬಂದು, ಅಭಿವೃದ್ಧಿ ಸಾಧಿಸಬೇಕು ಎಂದು ತಿಳಿಸಿದರು. ಡಾನ್ ಬಾಸ್ಕೊ ಸಂಸ್ಥೆಯ ವೈ.ರಾಮನಾಯ್ಕ ಮಾತನಾಡಿ, ಕಿರು ಹಣಕಾಸು ಸಂಸ್ಥೆಗಳು ಕಡಿಮೆ ಬಡ್ಡಿಯ ಆಸೆ ತೋರಿಸಿ, ಸಾಲ ನೀಡಿ, ಅತಿ ಸುಲಭವಾಗಿ ಮೋಸ ಮಾಡುತ್ತಿವೆ.
ಅಂತಹ ಕಡೆ ಸಾಲ ಪಡೆಯುವ ಬದಲಿಗೆ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರಾಗಿ ಸಾಲ ಪಡೆದು, ಸದುಪಯೋಗಪಡಿಸಿಕೊಂಡು, ಸಕಾಲದಲ್ಲಿ ಮರುಪಾವತಿಸಿ, ಆರ್ಥಿಕ ಸ್ವಾವಲಂಬನೆ ಹೊಂದಬೇಕು ಎಂದು ಸಲಹೆ ನೀಡಿದರು. ಡಾನ್ ಬೋಸ್ಕೊ ಸಂಸ್ಥೆ ನಿರ್ದೇಶಕ ಸಿರಿಲ್ ಸಗಾಯ್‌ರಾಜ್, ಶಿಶು ಅಭಿವೃದ್ಧಿ ಯೋಜನಾಧಿಧಿಕಾರಿ ಚಂದ್ರಪ್ಪ, ರೈಲ್ವೆ ರಕ್ಷಣಾದಳ ನಿರೀಕ್ಷಕ ಗೌರಂಗ್ ಬೋರೋ, ಲಕ್ಷ್ಮಣ್, ಮನೋಜ್ ಇತರರು ಇದ್ದರು.
ದಾವಣಗೆರೆ ವಿಶ್ವವಿದ್ಯಾಲಯ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಬಿ.ಎಸ್. ಪ್ರದೀಪ್ ಮಹಿಳಾ ಹಕ್ಕುಗಳು, ನ್ಯಾಯವಾದಿ ಸಿ.ಪಿ. ಅನಿತಾ, ಮಹಿಳಾ ದೌರ್ಜನ್ಯ ತಡೆಗಟ್ಟುವಿಕೆ ಮತ್ತು ಕಾನೂನು ಅರಿವು, ಎಚ್. ಎನ್. ಶೃತಿ, ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕರಣ ವಿಷಯ ಕುರಿತು ಉಪನ್ಯಾಸ ನೀಡಿದರು.