Advertisement

ನೀರು ಪೂರೈಕೆ ನಿಷ್ಕಾಳಜಿ; ಮೇಯರ್‌ ಗರಂ

01:35 PM Dec 13, 2022 | Team Udayavani |

ಹುಬ್ಬಳ್ಳಿ: ಮಹಾನಗರ ಜನತೆಗೆ ನೀರು ಪೂರೈಕೆಯಲ್ಲಿ ನಿಷ್ಕಾಳಜಿ ತೋರಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ. ನಿಮ್ಮಿಂದ ಕೆಲಸ ಮಾಡಲು ಆಗದಿದ್ದರೆ ಲಿಖೀತವಾಗಿ ಬರೆದುಕೊಟ್ಟು ಹೋಗಿ. ಮುಂದೆ ಪಾಲಿಕೆ ನೋಡಿಕೊಳ್ಳುತ್ತದೆ ಎಂದು ಮಹಾಪೌರ ಈರೇಶ ಅಂಚಟಗೇರಿ ಅಸಮಾಧಾನ ವ್ಯಕ್ತಪಡಿಸಿದರು.

Advertisement

ಸೋಮವಾರ ಪಾಲಿಕೆ ಆಯುಕ್ತರ ಸಭಾಭವನದಲ್ಲಿ ನೀರು ಸರಬರಾಜು ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಪಾಲಿಕೆ ಸದಸ್ಯರು ಕರೆ ಮಾಡಿದರೂ ನಿಮ್ಮ ಅಭಿಯಂತರು ಸ್ಪಂದಿಸುತ್ತಿಲ್ಲ. ಇನ್ನೂ ಜನರ ಸಮಸ್ಯೆಗೆ ಸ್ಪಂದಿಸುತ್ತಾರೆಯೇ. ನಗರದಲ್ಲಿರುವ 59 ಟ್ಯಾಂಕ್‌ಗಳಿಗೆ ಎಷ್ಟು ಸಿಬ್ಬಂದಿ ನೇಮಿಸಲಾಗಿದೆ ಎಂಬ ವಿವರ ನೀಡಬೇಕು. ಸಮರ್ಪಕ ನೀರು ಪೂರೈಕೆಗೆ ಎಷ್ಟು ಸಿಬ್ಬಂದಿ-ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ. ಮಹಾನಗರದ ಜನತೆಗೆ ಸಮರ್ಪಕ ನೀರು ಪೂರೈಕೆಯಾಗಬೇಕು. ಇಲ್ಲದಿದ್ದರೆ ಲಿಖೀತವಾಗಿ ಬರೆದುಕೊಟ್ಟು ಹೋಗಿ ಎಂದರು.

ಎಲ್‌ ಆ್ಯಂಡ್‌ ಟಿ ಅವರು ಮಾಡುತ್ತಿರುವ ನಿರ್ಲಕ್ಷ್ಯದ ಪರಿಣಾಮ ಪಾಲಿಕೆ ಸದಸ್ಯರು ಟ್ಯಾಂಕ್‌ಗೆ ಓಡಾಡುವಂತಾಗಿದೆ. ಆಯಾ ವಾರ್ಡ್ ನಿಂದಲೇ ವಾಲ್‌ಮ್ಯಾನ್‌ಗಳನ್ನಾಗಿ ಕೆಲಸಕ್ಕೆ ತೆಗೆದುಕೊಳ್ಳಿ. ಅವರಿಗೆ ಜವಾಬ್ದಾರಿ ನೀಡಿದರೆ ಮಾತ್ರ ಇದಕ್ಕೆ ಪರಿಹಾರ ದೊರೆಯಲಿದೆ. ಎಲ್ಲಾ ವಾರ್ಡ್‌ಗಳಿಗೆ ಸಮರ್ಪಕ ನೀರು ಪೂರೈಕೆಯಾಗುವ ನಿಟ್ಟಿನಲ್ಲಿ ಪಾಲಿಕೆ ಸದಸ್ಯರ ಸಹಕಾರ ಕೂಡ ಅಗತ್ಯವಾಗಿದೆ. ತಮ್ಮ ವಾರ್ಡ್‌ಗೆ ಮಾತ್ರ ಹೆಚ್ಚಿನ ನೀರು ಬೇಕು ಎನ್ನುವ ಭಾವನೆ ಸರಿಯಲ್ಲ. ಇಂತಹ ಸಂದರ್ಭದಲ್ಲಿ ಆಯುಕ್ತರ ಗಮನಕ್ಕೆ ತರಬೇಕು ಎಂದು ಸಲಹೆ ನೀಡಿದರು.

ಆಯುಕ್ತ ಡಾ| ಬಿ.ಗೋಪಾಲಕೃಷ್ಣ ಮಾತನಾಡಿ, ಇಷ್ಟು ವರ್ಷ ಕಳೆದರೂ ಸಮರ್ಪಕ ಕಾರ್ಯ ಕಾಣುತ್ತಿಲ್ಲ. ಹೊರಗಡೆಯಿಂದ ಬಂದ ಅಧಿಕಾರಿಗಳ ನಿಯೋಗ ತಪ್ಪುಗಳ ಪಟ್ಟಿ ಮಾಡಿದೆ. ಇವರ ಕಾರ್ಯ ಪಾಲಿಕೆ ಸದಸ್ಯರಿಗೆ ಹಾಗೂ ಜನರಿಗೆ ತೃಪ್ತಿಯಿಲ್ಲ. ಕೂಡಲೇ ಸಿಬ್ಬಂದಿಗೆ ವೇತನ ಇತರೆ ಸಮಸ್ಯೆಗಳನ್ನು ಪರಿಹರಿಸಿ ಪಾಲಿಕೆ ಉದ್ದೇಶಿಸಿರುವಂತೆ ಸಕಾಲಕ್ಕೆ ನೀರು ನೀಡಬೇಕು. ಕಳೆದ ಮೂರ್ನಾಲ್ಕು ದಿನಗಳಿಂದ ನೀರಿನ ಸಮಸ್ಯೆ ನಿವಾರಣೆಗೆ ಪಾಲಿಕೆ ಸದಸ್ಯರು, ಅಧಿಕಾರಿಗಳು ಸಾಕಷ್ಟು ಶ್ರಮವಹಿಸುತ್ತಿದ್ದಾರೆ. ಆದರೆ ಎಲ್‌ ಆ್ಯಂಡ್‌ ಟಿ ಕಂಪನಿಯಿಂದ ನಿರೀಕ್ಷಿತ ಸಹಕಾರ ಕೆಲಸ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನೀರು ಪೂರೈಕೆ ವಿಚಾರದಲ್ಲಿ ವಲಯ ಸಹಾಯಕ ಆಯುಕ್ತರ ಜವಾಬ್ದಾರಿ ದೊಡ್ಡದು. ಕಾಲಕ ಕಾಲಕ್ಕೆ ಅದನ್ನು ಮೇಲುಸ್ತುವಾರಿ ಮಾಡಬೇಕು. ಅವರಿಗೆ ಗುತ್ತಿಗೆ ನೀಡಲಾಗಿದೆ ಹೊರತು ಜನರಿಗೆ ನೀರು ಕೊಡುವುದು ನಮ್ಮ ಜವಾಬ್ದಾರಿ. ಸಮಸ್ಯೆಯಿರುವ ಪ್ರದೇಶಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕು. ವಲಯವಾರು ಸಹಾಯಕ ಆಯುಕ್ತರು ನೀರು ಸರಬರಾಜು ಮಾಡುವ ಸಿಬ್ಬಂದಿ, ಪಾಲಿಕೆ ಸದಸ್ಯರ ಹಾಗೂ ಅಲ್ಲಿನ ಪ್ರಮುಖರ ಸಭೆ ಮಾಡಬೇಕು ಎಂದು ಸೂಚಿಸಿದರು. ಉಪ ಮಹಾಪೌರ ಉಮಾ ಮುಕುಂದ, ಸಭಾನಾಯಕ ತಿಪ್ಪಣ್ಣ ಮಜ್ಜಗಿ, ವಿಪಕ್ಷ ನಾಯಕ ದೊರಾಜ್‌ ಮಣಿಕುಂಟ್ಲ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಿವು ಮೆಣಸಿನಕಾಯಿ, ವಿಜಯಾನಂದ ಶೆಟ್ಟಿ, ಅಪರ ಆಯುಕ್ತ ಶಂಕರಾನಂದ ಬನಶಂಕರಿ, ಸದಸ್ಯರಾದ ಸಂದಿಲಕುಮಾರ ಇನ್ನಿತರರಿದ್ದರು.

Advertisement

ನಿಯೋಗ ಗಮನ ಸೆಳೆದ ಅಂಶಗಳು

ವಿವಿಧ ನಗರಗಳಿಂದ ಬಂದಿರುವ ಅಧಿಕಾರಿಗಳ ಅಧ್ಯಯನ ನಿಯೋಗದ ರಾಮಕೃಷ್ಣೇಗೌಡ ಮಾತನಾಡಿ, ಎಲ್ಲ ಪ್ರದೇಶಗಳಿಗೆ ಸುತ್ತಾಡಿ ಕೆಲವೊಂದು ಅಂಶಗಳನ್ನು ಗುರುತಿಸಲಾಗಿದೆ. ಎಲ್‌ ಆ್ಯಂಡ್‌ ಟಿ ಕಂಪನಿಗೆ ಇರುವ ನೆರವಿಗೆ ಉತ್ತಮವಾಗಿ ಕೆಲಸ ಮಾಡಬಹುದಾಗಿದೆ. ವಾಲ್‌ಮ್ಯಾನ್‌ಗಳು ಸಕಾಲಕ್ಕೆ ಬಾರದ ಕಾರಣ ನೀರಿನ ಪೂರೈಕೆ ಸರಿಯಾಗಿ ಆಗುತ್ತಿಲ್ಲ. ಟ್ಯಾಂಕ್‌ಗೆ ಇಂತಿಷ್ಟು ಸಿಬ್ಬಂದಿ ನೇಮಿಸಬೇಕು. ಕಂಪನಿ ನಿಯೋಜಿಸಿರುವ 13 ಅಭಿಯಂತರಲ್ಲಿ ಇಬ್ಬರು ಕರೆ ಸ್ವೀಕರಿಸಿದ್ದಾರೆ. ಇಬ್ಬರು ಕೆಲಸ ಬಿಟ್ಟಿದ್ದಾರೆ. 9 ಜನ ಕರೆ ಸ್ವೀಕರಿಸಲಿಲ್ಲ. ಸಹಾಯವಾಣಿ ಆರಂಭಿಸಿ ಸಮರ್ಪಕ ಸಿಬ್ಬಂದಿ ನಿಯೋಜಿಸಬೇಕು. ಜನರ ದೂರುಗಳು ಸಹಾಯವಾಣಿಗೆ ಹೋಗಬೇಕು. ಅಲ್ಲಿಂದ ಸಂಬಂಧಿಸಿದವರಿಗೆ ಮಾಹಿತಿ ಕೊಡುವಂತಾಗಬೇಕು ಎಂದು ಹಲವು ಅಂಶಗಳನ್ನು ಸಭೆ ಗಮನಕ್ಕೆ ತಂದರು.

ಹಿಂದಿನ ಕೆಲ ವಾಲ್‌ಮ್ಯಾನ್‌ಗಳು ವಾಲ್‌ಗ‌ಳನ್ನು ಮಣ್ಣು ಹಾಗೂ ಕಲ್ಲು ಹಾಕಿ ಮುಚ್ಚಿದ್ದಾರೆ. ಇದನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ. ಸಮರ್ಪಕ ಸಿಬ್ಬಂದಿಯನ್ನು ನೇಮಿಸಿಕೊಂಡು ಆ ಮೂಲಕ ಕೆಲಸ ಮಾಡಿಸಲಾಗುತ್ತಿದೆ. ಕೆಲವೊಂದು ಪ್ರದೇಶಗಳಲ್ಲಿ ನೀರಿನ ಸಮಸ್ಯೆಯಾಗಿದೆ. ಆದಷ್ಟೂ ಬೇಗ ಬಗೆಹರಿಸಲಾಗುವುದು.  -ಗೋವಿಂದರಾಜ, ಎಲ್‌ ಆ್ಯಂಡ್‌ ಟಿ ಕಂಪನಿ ಹಿರಿಯ ವ್ಯವಸ್ಥಾಪಕ

ಎಲ್‌ ಆ್ಯಂಡ್‌ ಟಿ ಅಭಿಯಂತರು ಕೆಲಸ ಮಾಡುತ್ತಿಲ್ಲ. ಕೆಯುಐಡಿಎಫ್‌ಸಿ ಜೊತೆಗೆ ನಿಮ್ಮ ಹೊಂದಾಣಿಕೆ ಸರಿಯಿಲ್ಲ. ಹೊಸದಾಗಿ ಜೋಡಿಸಿದ ಪೈಪ್‌ಲೈನ್‌ ಸೋರಿಕೆ ಬಗ್ಗೆ ದೂರು ನೀಡಿದರೂ ದುರಸ್ತಿಗೆ ಯಾರೂ ಬರುತ್ತಿಲ್ಲ. ಇಂತಹ ಕಂಪನಿ ಜೊತೆ ಕೆಲಸ ಮಾಡುವುದು ಕಷ್ಟ. ಅಲ್ಲಿನ ಸಿಬ್ಬಂದಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ಸಿಬ್ಬಂದಿ ಹಂಚಿಕೆಯಾಗದ ಹೊರತು ಜನರಿಗೆ ಸಕಾಲಕ್ಕೆ ನೀರು ದೊರೆಯುವುದಿಲ್ಲ. ರಾಜಕೀಯ ಹುನ್ನಾರಕ್ಕೆ ವಾಲ್‌ಮ್ಯಾನ್‌ಗಳು ಬಲಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಪರಿಸ್ಥಿತಿ ಏನಾಗುತ್ತದೆಯೋ ಗೊತ್ತಿಲ್ಲ.  -ತಿಪ್ಪಣ್ಣ ಮಜ್ಜಗಿ, ಪಾಲಿಕೆ ಸಭಾನಾಯಕ

Advertisement

Udayavani is now on Telegram. Click here to join our channel and stay updated with the latest news.

Next