ಸುರಪುರ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಹುತೇಕ ಯೋಜನೆಗಳು ಬೋಗಸ್ ನಡೆಯುತ್ತಿದ್ದು, ಈ ಕುರಿತು ಸೂಕ್ತ ತನಿಖೆ ಮಾಡಿಸಿ ತಪ್ಪಿತಸ್ಥ ಗ್ರಾಮ ಪಂಚಾಯಿತಿ ಪಿಡಿಒಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿ ಎಚ್.ಡಿ. ಕುಮಾರಸ್ವಾಮಿ ಸೇನೆ ಕಾರ್ಯಕರ್ತರು ಸೋಮವಾರ ನಗರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.
ಅರ್ಧ ಗಂಟೆಗೂ ಹೆಚ್ಚು ಕಾಲ ನಡೆದ ರಸ್ತೆ ತಡೆಯಿಂದ ಪ್ರಯಾಣಿಕರು ಪರದಾಡಿದರು. ಟೈರ್‌ಗೆ ಬೆಂಕಿ ಹಚ್ಚಿ ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು. ನಂತರ ಪೊಲೀಸರ ಮಧ್ಯಸ್ಥಿಕೆಯಿಂದ ರಸ್ತೆ ತಡೆ ಕೈ ಬಿಟ್ಟು ಪ್ರತಿಭಟನೆ ಮುಂದುವರೆಸಿದರು.
ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲ್ಲಿ ಸರಕಾರದ ಬಹುತೇಕ ಯೋಜನೆಗಳು ಸಮರ್ಪಕ ಅನುಷ್ಠಾನಗೊಳ್ಳುತ್ತಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಕಾಮಗಾರಿಗಳನ್ನು ಸರಿಯಾಗಿ ನಿರ್ವಹಿಸದೆ ರಾಜಕೀಯ ಒತ್ತಡಕ್ಕೆ ಮಣಿದು ಬೋಗಸ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮನೆಗಳ ಹಂಚಿಕೆಯಲ್ಲಿ ಗ್ರಾಮ ಸಭೆ ಕರೆಯದೆ ಎಲ್ಲಿಯೋ ಕುಳಿತು ಫಲಾನುಭವಿಗಳ ಪಟ್ಟಿ ಸಿದ್ಧಪಡಿಸುತ್ತಿದ್ದಾರೆ. ಒಂದೇ ಕಟುಂಬದಲ್ಲಿ ಅಣ್ಣ ತಮ್ಮಂದಿರಿಗೆ ಮತ್ತು ಸಂಬಂಧಿಕರಿಗೆ ಹಂಚಿಕೆ ಮಾಡಿದ್ದಾರೆ. ಕೆಲ ಕಡೆ ಈ ಹಿಂದೆ ಪಡೆದುಕೊಂಡವರಿಗೆ ಪುನಃ ಆಯ್ಕೆ ಮಾಡಿದ್ದಾರೆ. ಹೀಗಾಗಿ ಅರ್ಹ ಬಡವರು ಯೋಜನೆಯಿಂದ ವಂಚಿತರಾಗುತ್ತಿದ್ದಾರೆ ಎಂದು ದೂರಿದರು.
ಚರಂಡಿ, ಸಿಸಿ ರಸ್ತೆ ಕಾಮಗಾರಿಗಳು ನಿಯಮಿತವಾಗಿ ನಡೆಯುತ್ತಿಲ್ಲ. ನರೇಗಾ ಯೋಜನೆಯಲ್ಲಿ ಚೆಕ್ ಡ್ಯಾಂ, ಕೃಷಿ ಹೊಂಡ ಸೇರಿದಂತೆ ಇನ್ನಿತರೆ ಕಾಮಗಾರಿಗಳು ಸಂಪೂರ್ಣ ಬೋಗಸ್ ನಡೆಯುತ್ತಿವೆ. ಮಂಜೂರಿಯಾಗಿರುವ ಎಲ್ಲಾ ಕಾಮಗಾರಿಗಳನ್ನು ನಿಮಯ ಮೀರಿ ಪಂಚಾಯಿತಿ ಸದಸ್ಯರಿಗೆ ಕೊಡಲಾಗಿದೆ. ಸದಸ್ಯರು ಕಾಮಗಾರಿ ನಿರ್ವಹಿಸದೆ ರಾಜಕೀಯ ಪ್ರಭಾವ ಬಳಸಿ ಬೋಗಸ್ ಬಿಲ್ ಬರೆಯಸಿಕೊಳ್ಳುತ್ತಿದ್ದಾರೆ. ಇದರಿಂದ ಸರಕಾರದ ಹಣ ದುರ್ಬಳಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಸಂಘಟನೆ ಅನೇಕ ಬಾರಿ ಮನವಿ ಮಾಡಿದೆ. ತಾಪಂ ಇಒ ಮತ್ತು ತಹಶೀಲ್ದಾರ್ ಗಮನಕ್ಕೂ ತಂದರು ಪ್ರಯೋಜನವಾಗಿಲ್ಲ.
ಈ ಕುರಿತು ಸೂಕ್ತ ತನಿಖೆ ಮಾಡಿಸಿ ತಪ್ಪಿತಸ್ಥ ಪಿಡಿಒಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಜುಲೈ 20ರಂದು ತಾಪಂ ಕಚೇರಿ ಎದುರು ಉವಾಸ ಧರಣಿ ಆರಂಭಿಸುವುದಾಗಿ ಎಚ್ಚರಿಕೆ ನೀಡಿದರು.
ಜಿಪಂ ಸಿಇಒ ಅವರಿಗೆ ಬರೆದ ಮನವಿಯನ್ನು ತಹಶೀಲ್ದಾರ್ ಕಚೇರಿ ಶಿರಸ್ತೇದಾರ್ ರಾಮು ಪೂಜಾರಿಗೆ ಸಲ್ಲಿಸಿದರು. ಸೇನೆಯ ಅನೇಕ ಕಾರ್ಯಕರ್ತರು ಇದ್ದರು.