ಬಾಗಲಕೋಟೆ : ಜಿಲ್ಲೆಯಲ್ಲಿ ಕೋವಿಡ್-19 ಸೋಂಕು 21 ಜನರಿಗೆ ವಿಸ್ತರಣೆಯಾದ ಭೀತಿಯಲ್ಲೇ ಸಮಾಧಾನದ ವಿಷಯವೊಂದು ಹೊರ ಬಿದ್ದಿದೆ. ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದ 76 ವರ್ಷದ ವೃದ್ಧನ ಪತ್ನಿ ಹಾಗೂ ಸಹೋದರನಿಗೂ ಸೋಂಕು ತಗುಲಿತ್ತು. ಆದರೆ, 14 ದಿನಗಳ ಬಳಿಕ ಅವರಿಬ್ಬರಿಗೂ ತಪಾಸಣೆ ಮಾಡಿದ್ದು, ಸದ್ಯ ಕೋವಿಡ್ ನೆಗೆಟಿವ್ ಬಂದಿದೆ.
ನಗರದ ಹಳಪೇಟ ಮಡು ಏರಿಯಾದ 76 ವರ್ಷದ ವೃದ್ಧ ಮಾ.31ರಂದು ಕೋವಿಡ್-19 ಲಕ್ಷಣದಿಂದ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಸೋಂಕು ಇರುವುದು ಏ. 2ರಂದು ದೃಢಪಟ್ಟಿತ್ತು. ಏ. 3ರಂದು ಅವರು ಮೃತಪಟ್ಟಿದ್ದರು. ಅವರಿಗೆ ಡೆಂಘಿ ಪಾಸಿಟಿವ್ ಜೊತೆಗೆ, ಹೃದಯ ಶಸ್ತ್ರ ಚಿಕಿತ್ಸೆ ಕೂಡಾ ಆಗಿತ್ತು. ಹೀಗಾಗಿ ಕೊವಿಡ್ ಸೋಂಕು ಖಚಿತಪಟ್ಟ ಮರುದಿನವೇ ಅವರು ಮೃತಪಟ್ಟಿದ್ದರು. ಬಳಿಕ ಅವರ ಮನೆಯ ಎಲ್ಲ ವ್ಯಕ್ತಿಗಳ ತಪಾಸಣೆ ಮಾಡಿದಾಗ, ವೃದ್ಧನ ಪತ್ನಿ ಪಿ 162(54 ವರ್ಷ) ಹಾಗೂ ಆತನ ಸಹೋದರ ಪಿ 161 (58 ವರ್ಷ) ಅವರಿಗೂ ಸೋಂಕು ತಗುಲಿರುವುದು ಏ. 6ರಂದು ದೃಢಪಟ್ಟಿತ್ತು.
ಏ. 6ರಿಂದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, 14 ದಿನಗಳ ಬಳಿಕ ಮತ್ತೊಮ್ಮೆ ಅವರ ಗಂಟಲು ದ್ರವ ತಪಾಸಣೆಗೆ ಕಳುಹಿಸಲಾಗಿತ್ತು. ಅದರ ವರದಿ ಬಂದಿದ್ದು, ಕೋವಿಡ್-19 ನೆಗೆಟಿವ್ ಎಂದು ಬಂದಿದೆ ಎಂದು ಡಿಎಚ್‌ಒ ಡಾ. ಅನಂತ ದೇಸಾಯಿ ರವಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಇಬ್ಬರಿಗೆ ಸದ್ಯ ಕೋವಿಡ್ ಲಕ್ಷಣಗಳಿಲ್ಲ. ಅಲ್ಲದೇ ಅವರ ವರದಿಯೂ ನೆಗೆಟಿವ್ ಬಂದಿದೆ. 24 ಗಂಟೆಯ ಬಳಿಕ ಮತ್ತೊಂದು ಬಾರಿ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗುವುದು. ಆಗಲೂ ಅವರಿಗೆ ಕೋವಿಡ್ ನೆಗೆಟಿವ್ ಬಂದರೆ, ಅವರನ್ನು ಆಸ್ಪತ್ರಯಿಂದ ಬಿಡುಗಡೆಗೊಳಿಸುವ ಕುರಿತು ಜಿಲ್ಲಾಡಳಿತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.
ಅವರು ಜಿಲ್ಲಾ ಆಸ್ಪತ್ರೆಯಿಂದ ಬಿಡುಗಡೆಗೊಂಡರೂ, ಅವರಿಗೆ ಮತ್ತೆ 14 ದಿನಗಳ ಮನೆಯಿಂದ ಹೊರ ಬಾರದೇ ಹೋಂ ಕ್ವಾರೆಂಟೈನ್ ಕಡ್ಡಾಯ ಎಂದರು.