Advertisement

ಚಾ,ನಗರ: ಉಸಿರಾಟದ ಸಮಸ್ಯೆಯಿಂದ ಮೃತಪಟ್ಟ ಮಹಿಳೆಯ ಕೋವಿಡ್ ವರದಿ ನೆಗೆಟಿವ್

04:21 PM Jun 22, 2020 | keerthan |

ಚಾಮರಾಜನಗರ: ತಾಲೂಕಿನ ಬ್ಯಾಡಮೂಡ್ಲು ಗ್ರಾಮದ ತವರು ಮನೆಗೆ ಮಂಡ್ಯದಿಂದ ಬಂದಿದ್ದ 29 ವರ್ಷದ ಮಹಿಳೆ ಉಸಿರಾಟದ ತೊಂದರೆಯಿಂದ ಮೃತಪಟ್ಟಿದ್ದು, ಕೋವಿಡ್ ಪರೀಕ್ಷೆ ನೆಗೆಟಿವ್ ಬಂದಿದೆ. ಹಾಗಾಗಿ ಮಹಿಳೆ ಕೋವಿಡ್‌ನಿಂದ ಮೃತಪಟ್ಟಿಲ್ಲ. ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ತಿಳಿಸಿದರು.

Advertisement

ಭಾನುವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಗೆ ಉಸಿರಾಟದ ತೊಂದರೆಯ ಕಾರಣ ಈ ಮಹಿಳೆ ಚಿಕಿತ್ಸೆಗೆಂದು ಬಂದಿದ್ದರು. ಉಸಿರಾಟದ ತೀವ್ರ ತೊಂದರೆ (ಎಸ್‌ಎಆರ್‌ಐ) ಲಕ್ಷಣ ಕಂಡು ಬಂದಿದ್ದ ಕಾರಣ ಖಾಸಗಿ ಆಸ್ಪತ್ರೆ ವೈದ್ಯರು ಕೋವಿಡ್ ಆಸ್ಪತ್ರೆಗೆ ಮಹಿಳೆಯನ್ನು ಕಳುಹಿಸಿದ್ದರು. ಮಹಿಳೆಗೆ ಉಸಿರಾಟದ ತೊಂದರೆಯಿದ್ದ ಕಾರಣ ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡಲಾಯಿತು. ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಯವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ನಿಯಮದಂತೆ ಆಕೆಯ ಗಂಟಲು ಮಾದರಿ ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿದಾಗ ವರದಿ ನೆಗೆಟಿವ್ ಬಂದಿದೆ. ಈ ಮಹಿಳೆಗೆ ನಾಲ್ಕು ತಿಂಗಳ ಹಿಂದೆ ಎದೆನೋವು ಮತ್ತು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿದ್ದರು. ವೈದ್ಯರು ತಪಾಸಣೆ ನಡೆಸಿದಾಗ ಪರೀಕ್ಷಾ ವರದಿ ನಾರ್ಮಲ್ ಬಂದಿತ್ತು. ಮೊನ್ನೆ ಇದೇ ರೋಗಲಕ್ಷಣ ಕಾಣಿಸಿಕೊಂಡಿದೆ. ಎದೆ ಎಕ್ಸರೇ ಮಾಡಿದಾಗ ಕೆಲವು ವ್ಯತ್ಯಾಸ ಕಂಡುಬಂದಿದೆ. ಹೃದಯ ನಾಳಗಳಲ್ಲಿ ಅಡಚಣೆ ಉಂಟಾದಾಗಲೂ ಈ ರೀತಿ ಆಗುವ ಸಾಧ್ಯತೆಯಿದೆ ಎಂದು ವೈದ್ಯಾಧಿಕಾರಿ ಡಾ. ರಮೇಶ್ ತಿಳಿಸಿದರು.

ಇದು ಕೊರೊನಾ ಪ್ರಕರಣವಲ್ಲ. ಹೀಗಾಗಿ ಸಾರ್ವಜನಿಕರು ಆತಂಕ ಪಡಬೇಕಾಗಿಲ್ಲ. ಕೋವಿಡ್ ಪಾಸಿಟಿವ್ ಪ್ರಕರಣವಾಗಿದ್ದರೆ, ಮೃತ ದೇಹದ ಅಂತ್ಯಕ್ರಿಯೆಯ ವಿಧಿ ವಿಧಾನಗಳೇ ಬೇರೆಯಾಗಿರುತ್ತಿತ್ತು. ಈ ಪ್ರಕರಣದಲ್ಲಿ ಮೃತದೇಹವನ್ನು ಅವರ ಮನೆಯವರಿಗೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಇನ್ನು, ಗುಂಡ್ಲುಪೇಟೆ ಹೌಸಿಂಗ್ ಬೋರ್ಡ್ ಕಾಲೋನಿಯ ಸೋಂಕಿತನ ವಿಚಾರಕ್ಕೆ ಸಂಬಂಧಿಸಿದಂತೆ, ಆ ಪ್ರದೇಶವನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗಿದೆ. ಪ್ರಾಥಮಿಕ ಸಂಪರ್ಕಿತರು 13 ಮಂದಿ, ದ್ವಿತೀಯ ಸಂಪರ್ಕಿತರು 35 ಜನರಿದ್ದಾರೆ. ಕಂಟೈನ್‌ಮೆಂಟ್ ವಲಯದಲ್ಲಿ 172 ಜನರಿದ್ದು ಎಲ್ಲರ ಗಂಟಲ ದ್ರವವನ್ನು ಸಂಗ್ರಹಿಸಲಾಗುವುದು. ಬಫರ್ ಜೋನ್‌ನಲ್ಲಿ 318 ಜನರಿದ್ದು, ಅವರನ್ನು ಸಹ ಗಂಟಲದ್ರವ ಪರೀಕ್ಷೆಗೊಳಪಡಿಸಲಾಗುವುದು ಎಂದು ಅವರು ತಿಳಿಸಿದರು.

Advertisement

ಇಡೀ ಜಿಲ್ಲೆಯಲ್ಲಿ ಗಂಟಲು ದ್ರವ ಮಾದರಿಯನ್ನು ಸಂಗ್ರಹಿಸಲು ಎಲ್ಲ 60 ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ 23,607 ಜನರು ವಿವಿಧ ಕಾಯಿಲೆಯಿಂದ ಬಳಲುತ್ತಿರುವವರು, ಗರ್ಭಿಣಿ, ಬಾಣಂತಿಯರಿದ್ದಾರೆ. ಈ ಎಲ್ಲರ ಗಂಟಲದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುವುದು. ಪ್ರತಿಯೊಂದು 423 ಗ್ರಾಮದಲ್ಲೂ 10 ಜನರ ಗಂಟಲದ್ರವ ಪರೀಕ್ಷೆ ನಡೆಸಲಾಗುವುದು. ಇದರಿಂದ ಕೋವಿಡ್ ನಿಗ್ರಹಿಸಲು ಸಾಧ್ಯವಾಗುತ್ತದೆ. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದರು.

ರಾಜ್ಯ ಸರ್ಕಾರ ಖಾಸಗಿ ಆಸ್ಪತ್ರೆಯಲ್ಲೂ ಕೋವಿಡ್ ಚಿಕಿತ್ಸೆ ಪಡೆಯಲು ಅವಕಾಶ ನೀಡಿದೆ. ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯಲ್ಲಿ ನಾಲ್ಕು ಆಸ್ಪತ್ರೆಗಳನ್ನು ಗುರುತಿಸಿದ್ದಾರೆ. ಚಾಮರಾಜನಗರದ ಜೆಎಸ್‌ಎಸ್, ಬಸವರಾಜೇಂದ್ರ, ಆರ್.ಕೆ. ಆಸ್ಪತ್ರೆ, ಕೊಳ್ಳೇಗಾಲ ತಾಲೂಕಿನ ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗಳಲ್ಲಿ ಇಚ್ಛಿತರು ಚಿಕಿತ್ಸೆ ಪಡೆಯಬಹುದು. ರೋಗಿಗಳು ಮೊದಲು ಸರ್ಕಾರಿ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದ ನಂತರ ರೋಗಿ ಬಯಸಿದಲ್ಲಿ, ಡಿಎಚ್‌ಓ ಖಾಸಗಿ ಆಸ್ಪತ್ರೆಗೆ ಹೋಗಲು ಸೂಚಿಸಿದರೆ ಮಾತ್ರ ಅವರು ಅಲ್ಲಿ ಚಿಕಿತ್ಸೆ ಪಡೆಯಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ವೈದ್ಯಕೀಯ ಕಾಲೇಜಿನ ಡೀನ್ ಡಾ. ಸಂಜೀವ್, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಕೃಷ್ಣಪ್ರಸಾದ್, ಕಣ್ಗಾವಲು ಅಧಿಕಾರಿ ಡಾ. ನಾಗರಾಜ್ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next