ನವದೆಹಲಿ: ದೇಶದಾದ್ಯಂತ ಹೆಚ್ಚುತ್ತಿರುವ ಕೋವಿಡ್ ಸೋಕಿನ ಹಿನ್ನೆಲೆಯಲ್ಲಿ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿರುವ ಬೆನ್ನಲ್ಲೆ ಮುಂಬರುವ ಕುಂಭ ಮೇಳಕ್ಕೆ ಆಗಮಿಸುವ ಭಕ್ತರು ಕೋವಿಡ್ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಲೇ ಬೇಕು ಎಂದು ಉತ್ತರಾಖಂಡ ಹೈಕೋರ್ಟ್ ಆದೇಶ ನೀಡಿದೆ.
ಈ ಬಳಿಕ ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಕೂಡಾ ಈ ಕುರಿತಾಗಿ ಆದೇಶವನ್ನು ಹೊರಡಿದ್ದು ಏಪ್ರಿಲ್ 1 ರಂದು ನಡೆಯಲಿರುವ ಕುಂಭ ಮೇಳ ಸಮಯದಲ್ಲಿ ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಲು ಆಗಮಿಸುವ ಭಕ್ತರು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಯನ್ನು ಮಾಡಿಸಿ ನೆಗೆಟೀವ್ ವರದಿಯೊಂದಿಗೆ ಆಗಮಿಸಬೇಕು ಎಂದು ತಿಳಿಸಿದ್ದಾರೆ.
ಕಳೆದ ಮಾರ್ಚ್ 16 ಹಾಗೂ 17 ರಂದು ಕೋವಿಡ್ ನಿಯಂತ್ರಕ್ಕೆ ಸಂಬಂಧಿಸಿದಂತೆ ವಿಶೇಷ ತಂಡವೊಂದು ಉತ್ತರಾಖಂಡಕ್ಕೆ ಭೇಟಿ ನೀಡಿದ್ದು, ಮುಂಬರುವ ಕುಂಭಮೇಳದಲ್ಲಿ ಕೋವಿಡ್ ಸೋಂಕು ಹರಡದಂತೆ ರಾಜ್ಯ ಸರ್ಕಾರ ಯಾವ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂಬ ಕುರಿತಾಗಿ ಅಧ್ಯಯನ ನಡೆಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ರಾಕೇಶ್ ಟಿಕಾಯತ್ ವಿರುದ್ಧದ ಎಫ್ಐಆರ್ ವಜಾ ಮಾಡಲು ಹೈಕೋರ್ಟ್ ನಲ್ಲಿ ಅರ್ಜಿ: ಬಿ.ಆರ್.ಪಾಟೀಲ್
ಈ ನಡುವೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ , ಉತ್ತರಾಖಂಡ ಕಾರ್ಯದರ್ಶಿಗೆ ಪತ್ರವೊಂದನ್ನು ಬರೆದಿದ್ದು ಕಳೆದ ಕೆಲವು ವಾರಗಳಲ್ಲಿ ಭಾರತದ 12 ಕ್ಕೂ ಅಧಿಕ ರಾಜ್ಯಗಳಲ್ಲಿ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ಬಹುದೊಟ್ಟ ಮಟ್ಟದ ಹೆಚ್ಚಳ ಕಂಡುಬಂದಿದ್ದು, ಈ ರಾಜ್ಯಗಳ ಭಕ್ತಾದಿಗಳೂ ಕೂಡಾ ಕುಂಭಮೇಳದಲ್ಲಿ ಭಾಗವಹಿಸುವ ಸಾಧ್ಯತೆಗಳಿದೆ. ಹೀಗಾಗಿ ಈ ಕುರಿತಾಗಿ ಹೆಚ್ಚಿನ ಜಾಗೃತಿ ವಹಿಸಬೇಕು ಎಂದು ತಿಳಿದ್ದಾರೆ.