ನಟಿ ನೀತು ಶೆಟ್ಟಿ ಅವರು ಈ ಹಿಂದೆ “1888′ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಬಗ್ಗೆ ಹೇಳಲಾಗಿತ್ತು. ಈಗ ಹೊಸ ಸುದ್ದಿಯೆಂದರೆ, ಆ ಚಿತ್ರದ ಮೂಲಕ ನೀತು ಶೆಟ್ಟಿ ಗೀತ ಸಾಹಿತಿಯಾಗಿಯೂ ಹೊರಹೊಮ್ಮಿದ್ದಾರೆ ಎಂಬುದು ಈ ಹೊತ್ತಿನ ವಿಶೇಷ. ಹೌದು, ಸಾಫ್ಟ್ವೇರ್ ಮಂದಿ ಸೇರಿ ಮಾಡುತ್ತಿರುವ “1888′ ಚಿತ್ರದಲ್ಲಿ ನೀತು ನಟನೆಯಷ್ಟೇ ಅಲ್ಲ, ಆ ಚಿತ್ರದಲ್ಲೊಂದು ಪ್ರೀತಿಯ ಹಾಡು ಬರೆದಿದ್ದಾರೆ. ಆ ಕುರಿತು ಸ್ವತಃ ನೀತು ಶೆಟ್ಟಿ ಹೇಳುವುದಿಷ್ಟು.
“ಸಾಫ್ಟ್ವೇರ್ ಕ್ಷೇತ್ರದಲ್ಲಿದ್ದ ಗೆಳೆಯರು ಸೇರಿ ಮಾಡುತ್ತಿರುವ ಚಿತ್ರವಿದು. ಚಿತ್ರದಲ್ಲಿ ನಾನು ಮತ್ತು ಅದ್ವಿತಿಶೆಟ್ಟಿ ಹೊರತುಪಡಿಸಿದರೆ, ಎಲ್ಲರಿಗೂ ಇದು ಮೊದಲ ಅನುಭವ. ಇದೊಂದು ಮೈಕ್ರೋ ಬಜೆಟ್ ಚಿತ್ರ. ಹಾಗಾಗಿ, ಗೆಳೆತನಕ್ಕಾಗಿ ಮಾಡುತ್ತಿರುವ ಸಿನಿಮಾ ಇದು. ಇದೇ ಮೊದಲ ಸಲ ನಾನು ಚಿತ್ರದಲ್ಲಿ ಗೀತೆ ರಚಿಸಿದ್ದೇನೆ. ಹಾಡು ಬರೆಯೋಕೆ ಕಾರಣ, ಬೇರೆ ಗೀತೆರಚನೆಕಾರರ ಬಳಿ ಬರೆಸಿದರೆ, ಅವರಿಗೂ ಸಂಭಾವನೆ ಕೊಡಬೇಕು.
ಅದರಲ್ಲೂ ಹೊಸಬರೇ ತಮ್ಮ ತಿಂಗಳ ಸಂಬಳದಲ್ಲಿ ಈ ಚಿತ್ರ ಮಾಡುತ್ತಿರುವುದರಿಂದ ಬಜೆಟ್ ಕಡಿಮೆ. ಇಡೀ ಚಿತ್ರತಂಡ, ನನ್ನ ಬಳಿ ನೀವೇ ಒಂದು ಹಾಡು ಬರೆದುಕೊಡಿ ಅಂತ ಒತ್ತಡ ಹಾಕಿತು. ನನಗೂ ಅದು ಮೊದಲ ಅನುಭವ ಆಗಿತ್ತು. ಪ್ರಯತ್ನ ಮಾಡೋಣ ಅಂತ ಪೆನ್ನು ಹಿಡಿದೆ, ಹಾಡು ಚೆನ್ನಾಗಿ ಮೂಡಿಬಂತು. ಗಿರೀಶ್ ಹೋತೂರ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. “ಒಡನಾಡಿಗಳು’ ಅಂದರೆ, ಜೊತೆಯಲ್ಲಿರುವ ಗೆಳೆಯರು ಎಂದರ್ಥ.
ಒಟ್ಟಿಗೆ ಕಾಲೇಜ್ ಓದಿರುವವರಿಗೆ “ಒಡನೋದಿಗಳು..’ (ಕ್ಲಾಸ್ಮೇಟ್ಸ್) ಎಂಬ ಅರ್ಥವಿದೆ. ಅದೇ ಪದ ಇಟ್ಟುಕೊಂಡು ಹಾಡು ಬರೆದಿದ್ದೇನೆ. ಆ ಹಾಡಲ್ಲಿ ಪ್ರತಾಪ್ ಹಾಗು ಅದ್ವಿತಿಶೆಟ್ಟಿ ಕಾಣಿಸಿಕೊಂಡಿದ್ದಾರೆ. ಅದೊಂದು ಲವ್ ಸಾಂಗ್ ಆಗಿದ್ದು, ಚೆನ್ನಾಗಿ ಮೂಡಿಬಂದಿದೆ. ನನಗೂ ಹಾಡು ಕೇಳಿ ಖುಷಿಯಾಗಿದೆ. ಹಾಡಿಗೆ ವಿಕಾಸ್ ವಸಿಷ್ಠ ಮತ್ತು ಈಶಾ ಸುಚಿ ಧ್ವನಿಯಾಗಿದ್ದಾರೆ’ ಎಂದು ವಿವರ ಕೊಡುತ್ತಾರೆ ನೀತುಶೆಟ್ಟಿ.
ಹಾಗಾದರೆ, “1888′ ಕಥೆ ಏನು? ಇದಕ್ಕೆ ಉತ್ತರಿಸುವ ಅವರು, “ಸೌರಭ್ ಶುಕ್ಲ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇಲ್ಲಿ “1888′ ಅನ್ನುವುದು ಒಂದು ಕಾರ್ ನಂಬರ್. ಇದೊಂದು ಥ್ರಿಲ್ಲರ್ ಕಥೆ. ಅಪನಗದೀಕರಣ ಆದಾಗ, ಮೂವರ ಬದುಕಲ್ಲಿ ಏನೆಲ್ಲಾ ಆಗೋಯ್ತು ಎನ್ನುವುದನ್ನೇ ಥ್ರಿಲ್ಲರ್ ಎಲಿಮೆಂಟ್ಸ್ ಇಟ್ಟುಕೊಂಡು ತೋರಿಸಲಾಗಿದೆ. ನಾನಿಲ್ಲಿ ಸಂಧ್ಯಾ ಶೆಟ್ಟಿ ಎಂಬ ಜನಪ್ರಿಯ ನಟಿಯ ಪಾತ್ರ ಮಾಡಿದ್ದೇನೆ.
ಆಕೆ ಸಿನಿಮಾದಿಂದ ರಾಜಕೀಯರಕ್ಕೆ ಬರುವ ಪ್ರಯತ್ನ ಮಾಡುವಾಗ, ಏನೆಲ್ಲಾ ಆಗಿಹೋಗುತ್ತೆ ಎಂಬುದು ಕಥೆ. ಇನ್ನು ಚಿತ್ರದಲ್ಲಿ ಪ್ರತಾಪ್ ಹಾಗು ಮಂಜುರಾಜ್ ಹೊಸ ಪ್ರತಿಭೆಗಳಿವೆ. ಇದೊಂದು ನೈಜವಾಗಿಯೇ ಮೂಡಿಬರುತ್ತಿರುವ ಚಿತ್ರ. ಈಗಾಗಲೇ ಒಂದಷ್ಟು ಚಿತ್ರೀಕರಣಗೊಂಡಿದೆ. ಇತ್ತೀಚೆಗೆ ನನ್ನ ಪಾತ್ರದ ಫಸ್ಟ್‌ಲುಕ್ ರಿಲೀಸ್ ಆಗಿದ್ದು, ಆ ಪೋಸ್ಟರ್‌ನಲ್ಲಿ ಸಂಧ್ಯಾಶೆಟ್ಟಿ ನಟಿಯ ಬೇರೆ ಮುಖದ ಛಾಯೆ ಕಾಣುತ್ತಿದೆ. ಅದಕ್ಕೆ ಎಲ್ಲೆಡೆಯಿಂದ ಮೆಚ್ಚುಗೆಯೂ ಸಿಕ್ಕಿದೆ’ ಎನ್ನುತ್ತಾರೆ ನೀತು.