ಹೊಸದಿಲ್ಲಿ: ಪಾರದರ್ಶಕತೆ ಕಾರಣಕ್ಕಾಗಿ ವಿದ್ಯಾರ್ಥಿಗಳ ಗುರುತು ಮರೆಮಾಚಿ ಕೇಂದ್ರವಾರು ಮತ್ತು ನಗರವಾರು ನೀಟ್-ಯುಜಿ ಪರೀಕ್ಷೆಯ ಫಲಿತಾಂಶ ಶನಿವಾರ (ಜು.20) ಮಧ್ಯಾಹ್ನ 12 ಗಂಟೆಯೊಳಗೆ ಪ್ರಕಟಿಸುವಂತೆ ಎನ್‌ಟಿ ಎಗೆ ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿತು.
ಇಡೀ ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆಯಾಗಿದ್ದರೆ ಮಾತ್ರವೇ ಮರು ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ ಕೋರ್ಟ್, ವಿಚಾರಣೆಯನ್ನು ಜು.22ಕ್ಕೆ ಮುಂದೂಡಿತು.
ಮರು ಪರೀಕ್ಷೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಆರಂಭಿಸಿದ ಸಿಜೆಐ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠವು, ಲಕ್ಷಾಂತರ ಯುವಕರು ನಮಗಾಗಿ ಕಾಯುತ್ತಿದ್ದಾರೆ. ಅರ್ಜಿಗಳ ವಿಚಾರಣೆ ನಡೆಸಿ, ನಿರ್ಧಾರ ಮಾಡೋಣ. ಇಡೀ ಪರೀಕ್ಷೆಯ ಪಾವಿತ್ರ್ಯತೆಗೆ ಧಕ್ಕೆಯಾಗಿದೆ ಎಂಬುದು ಸಾಬೀತಾದರೆ ಮಾತ್ರವೇ ಮರು ಪರೀಕ್ಷೆ ನಡೆಸಬಹುದು ಎಂದು ತಿಳಿಸಿತು.
ಇದೇ ವೇಳೆ, ಸಿಬಿಐ ನಮಗೆ ಏನು ಹೇಳಿದೆ ಎಂಬುದನ್ನು ನಾವು ಬಹಿರಂಗ ಮಾಡಿದರೆ ತನಿಖೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಸಿಜೆಐ ಹೇಳಿದರು. ಟೆಲಿಗ್ರಾಂನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಪೀಠವು, ಈ ರೀತಿ ಕೆಲಸವನ್ನು ಯಾರೋ ಹಣಕ್ಕಾಗಿ ಮಾಡಿರುತ್ತಾರೆ. ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಾಕಷ್ಟು ಸಂಪರ್ಕ ಬೇಕಾಗುತ್ತವೆ. ಎಲ್ಲ ನಗರಗಳಲ್ಲೂ ಸಂಪರ್ಕ ಸಾಧಿಸಬೇಕಾಗುತ್ತದೆ ಎಂದು ಹೇಳಿತು. ಎನ್‌ಟಿಎ ಕೂಡ ಇದು ಸುಳ್ಳು ಸುದ್ದಿ ಎಂದು ವಾದಿಸಿತು.
7 ಸ್ತರದ ಭದ್ರತೆ: ಅರ್ಜಿದಾರರ ಪರ ವಕೀಲರು, ಹಝಾರಿಬಾಗ್‌ನಲ್ಲಿ ಇ-ರಿûಾದಲ್ಲಿ ಪ್ರಶ್ನೆಪತ್ರಿಕೆಗಳಿರುವ ಟ್ರಂಕ್ ಒಯ್ದಿರುವ ಬಗ್ಗೆ ನ್ಯಾಯಪೀಠದ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಮುದ್ರಣದಿಂದ ಕೇಂದ್ರದವರೆಗಿನ ವ್ಯವಸ್ಥೆಯನ್ನು ಸಿಬಿಐ ತನಿಖೆ ನಡೆಸುತ್ತಿದೆ. ಪ್ರಶ್ನೆಪತ್ರಿಕೆ ಸಾಗಣೆಗೆ 7 ಸ್ತರದ ಭದ್ರತೆ ಒದಗಿಸಲಾಗಿರುತ್ತದೆ. ಜಿಪಿಎಸ್ ಟ್ರ್ಯಾಕಿಂಗ್ ಕೂಡ ಇರುತ್ತದೆ ಎಂದರು.