ನವದೆಹಲಿ: ವೈದ್ಯಕೀಯ ಉನ್ನತ ವ್ಯಾಸಂಗದ ಪ್ರವೇಶಾತಿಗಾಗಿ ನಡೆಸಲಾಗುವ ನೀಟ್- ಸೂಪರ್ ಸ್ಪೆಷಾಲಿಟಿ (ನೀಟ್-ಎಸ್‌ಎಸ್) ಪರೀಕ್ಷೆಯ ನಿಯಮಗಳನ್ನು ಈ ವರ್ಷ ಪರಿಷ್ಕರಣೆ ಮಾಡುವುದಿಲ್ಲ. 2022-23ರ ಶೈಕ್ಷಣಿಕ ವರ್ಷದಿಂದ ಪರಿಷ್ಕೃತ ನಿಯಮಗಳೊಂದಿಗೆ ಈ ಪರೀಕ್ಷೆ ನಡೆಸಲಾಗುತ್ತದೆ ಎಂದು ಕೇಂದ್ರ ಸರ್ಕಾರ, ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ.
ಅಲ್ಲದೆ, ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ನಿಯಮ ಬದಲಾವಣೆ ಮಾಡಲಾಗುತ್ತದೆ ಎಂದು ಕೇಂದ್ರ ತಿಳಿಸಿದೆ. ಹಾಗಾಗಿ, ಈ ವರ್ಷ ನೀಟ್-ಎಸ್‌ಎಸ್ ಪರೀಕ್ಷೆ ತೆಗೆದುಕೊಳ್ಳಲಿರುವ ಕಿರಿಯ ವೈದ್ಯರ ಮೇಲಿದ್ದ ಆತಂಕ ನಿವಾರಣೆಯಾಗಿದೆ.
ನೀಟ್-ಎಸ್‌ಎಸ್ ಪರೀಕ್ಷೆಯ ನಿಯಮಗಳನ್ನು ಇದೇ ವರ್ಷದಿಂದಲೇ ಬದಲಿಸುವುದಾಗಿ ಸರ್ಕಾರ ಪ್ರಕಟಿಸಿತ್ತು. ಇದರ ವಿರುದ್ಧ 41 ವೈದ್ಯಕೀಯ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿರುವ ಕಿರಿಯ ವೈದ್ಯರು, ವಿದ್ಯಾರ್ಥಿಗಳು ಸುಪ್ರೀಂ ಮೊರೆ ಹೋಗಿದ್ದರು. ಜುಲೈನಲ್ಲಿ ಪರೀಕ್ಷೆಗೆ ನೋಂದಣಿ ನಡೆಸಲಾಗಿದೆ. ಪರೀಕ್ಷೆಗೆ ಇನ್ನೊಂದು ತಿಂಗಳು ಬಾಕಿಯಿರುವಾಗ (ನ. 13-14ರಂದು ಪರೀಕ್ಷೆ) ವಿದ್ಯಾರ್ಥಿಗಳ ಆಯ್ಕೆ ನಿಯಮ ಬದಲಿಸಲು ಸರ್ಕಾರ ಮುಂದಾಗಿರುವುದು ಸರಿಯಲ್ಲ ಎಂದು ಅವರು ತಮ್ಮ ಅರ್ಜಿಯಲ್ಲಿ ಆಕ್ಷೇಪಿಸಿದ್ದರು.
ಇದನ್ನೂ ಓದಿ:ರಾಷ್ಟ್ರಪತಿಗಳಿಗೆ “ರಾಮಾಯಣ ದರ್ಶನಂ”- “ಪರ್ವ” ಕಾದಂಬರಿ ನೀಡಿದ ಸಚಿವ ಸುನಿಲ್ ಕುಮಾರ್
ಮತ್ತೊಂದೆಡೆ, ನೀಟ್ ಬಹಿಷ್ಕಾರಕ್ಕೆ ಅವಕಾಶ ಕಲ್ಪಿಸುವಂತೆ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷದ ಪ್ರತಿನಿಧಿಗಳು, ತಿರುವನಂತಪುರದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಮನವಿ ಸಲ್ಲಿಸಿದೆ. ಇತ್ತೀಚೆಗೆ, ನೀಟ್ ಬಹಿಷ್ಕರಿಸುವ ತಮ್ಮ ನಿರ್ಧಾರ ಬೆಂಬಲಿಸುವಂತೆ ತಮಿಳುನಾಡಿನ ಸಿಎಂ ಎಂ.ಕೆ. ಸ್ಟಾಲಿನ್, 12 ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಬೆಂಬಲ ಕೋರಿದ್ದರು.