ಮಂಗಳೂರು/ಉಡುಪಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕೆ ನ್ಯಾಶನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ರವಿವಾರ ಕರಾವಳಿಯಾದ್ಯಂತ ಸಾಂಗವಾಗಿ ನಡೆದಿದೆ.
ವಿದ್ಯಾರ್ಥಿಗಳ ಹಾಲ್‌ಟಿಕೆಟ್ ಹಾಗೂ ಐಡಿ ದಾಖಲೆಯನ್ನು ಪರೀಕ್ಷಾ ಕೇಂದ್ರದ ಗೇಟ್‌ನಲ್ಲಿಯೇ ಪರಿಶೀಲಿಸಿ ಒಳಗೆ ಬಿಡಲಾಯಿತು. ಮೊಬೈಲ್ ಫೋನ್, ಬ್ಲೂಟೂತ್, ಕ್ಯಾಲ್ಕುಲೇಟರ್, ಗಡಿಯಾರ, ಇಯರ್ ಫೋನ್, ಮೈ ಮೇಲೆ ಆಭರಣ ಧರಿಸಿ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಅವಕಾಶವಿರಲಿಲ್ಲ. ಪರೀಕ್ಷೆ ಬರೆಯಲು ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಮಂಗಳೂರಿಗೆ ಆಗಮಿಸಿದ್ದರು. ಮಧ್ಯಾಹ್ನ ಅನಂತರ ಪರೀಕ್ಷೆ ಇದ್ದರೂ ಬಹುತೇಕ ವಿದ್ಯಾರ್ಥಿಗಳು ಬೆಳಗ್ಗೆಯೇ ಆಗಮಿಸಿದ್ದರು.
ದ.ಕ. ಜಿಲ್ಲೆಯ 18 ಕೇಂದ್ರಗಳಲ್ಲಿ 9,670 ವಿದ್ಯಾರ್ಥಿಗಳು ಪರೀಕ್ಷೆಗಾಗಿ ನೋಂದಣಿ ಮಾಡಿದ್ದರು. ಈ ಪೈಕಿ 9,235 ಮಂದಿ ಪರೀಕ್ಷೆ ಬರೆದಿದ್ದಾರೆ.
ಉಡುಪಿ ಜಿಲ್ಲೆಯ 9 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ನೋಂದಣಿ ಮಾಡಿಕೊಂಡಿದ್ದ 3,241 ವಿದ್ಯಾರ್ಥಿಗಳಲ್ಲಿ 3,084 ಮಂದಿ ಹಾಜರಾಗಿದ್ದಾರೆ.
ದ.ಕ., ಉಡುಪಿ ಜಿಲ್ಲೆಗಳ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವ ಗುಲ್ಬರ್ಗ, ಹಾಸನ ಸಹಿತ ವಿವಿಧ ಜಿಲ್ಲೆಗಳ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಮಕ್ಕಳು ಪರೀಕ್ಷೆ ಬರೆಯುತ್ತಿದ್ದರೆ ಕೇಂದ್ರದ ಹೊರಭಾಗದಲ್ಲಿ ಹೆತ್ತವರು ಸಂಜೆಯವರೆಗೂ ಕಾಯುತ್ತಿದ್ದರು.