Advertisement

NEET ಬೃಹತ್‌ ಹಗರಣ: ವಿಪಕ್ಷ ಆಕ್ರೋಶ ತೀವ್ರ

12:46 AM Jun 17, 2024 | Team Udayavani |

ಹೊಸದಿಲ್ಲಿ: ನೀಟ್‌ ಪರೀಕ್ಷೆಗೆ ಸಂಬಂಧಿಸಿ ದೇಶಾದ್ಯಂತ ಪ್ರತಿಭಟನೆಯ ಕಾವು ಹೆಚ್ಚಾಗಿದ್ದು, ಕೇಂದ್ರ ಸರಕಾರದ ವಿರುದ್ಧ ವಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

Advertisement

ಇದೇ ವೇಳೆ ನೀಟ್‌ ಪರೀಕ್ಷೆಯಲ್ಲಿ ಕೆಲವು ಕಡೆ ಅಕ್ರಮಗಳಾಗಿವೆ, ಅವುಗಳ ಬಗ್ಗೆ ತನಿಖೆ ನಡೆಸಲಾಗುತ್ತದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.

ನೀಟ್‌ ಎನ್ನುವುದು ಬೃಹತ್‌ ಹಗರಣ. ಅದು ಸಾಮಾಜಿಕ ನ್ಯಾಯವನ್ನು ನಿರಾಕರಿಸುತ್ತದೆ ಎಂದು ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್‌ ಆರೋಪಿಸಿದ್ದಾರೆ. ಅದರ ಸುತ್ತ ನಡೆಯುತ್ತಿರುವ ವಿವಾದಗಳು ಮೂಲಭೂತವಾಗಿ ಅದರ ಅಸಮಾನತೆಯ ಸ್ವರೂಪವನ್ನು ಎತ್ತಿ ತೋರಿಸುತ್ತದೆ. ಸಾವಿರಾರು ವರ್ಷಗಳಿಂದ ಶಿಕ್ಷಣ ವಂಚಿತರಾದವರನ್ನು ಮೇಲೆತ್ತುವ ಕೆಲಸವನ್ನು ಮಾಡಬೇಕು.

ಆದರೆ ನೀಟ್‌ ಇಂತಹವರನ್ನು ದೂರ ಇಡುತ್ತಿದೆ ಎಂದು ಸ್ಟಾಲಿನ್‌ ಹೇಳಿದ್ದಾರೆ. ನೀಟ್‌ ಪರೀಕ್ಷೆ ಆರಂಭವಾದಾಗಿನಿಂದಲೂ ಅದನ್ನು ವಿರೋಧಿಸುತ್ತಿರುವ ಡಿಎಂಕೆಯು ಪರೀಕ್ಷೆಗಳ ಪಾವಿತ್ರ್ಯವನ್ನು ನೀಟ್‌ ಹಾಳು ಮಾಡುತ್ತಿದೆ ಎಂದಿದೆ.

ಪ್ರಾಮಾಣಿಕತೆಯ ಪ್ರಶ್ನೆ
ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ)ದ ಪ್ರಾಮಾಣಿಕತೆಯನ್ನು ಪ್ರಶ್ನಿಸುವಂತಿದೆ ಎಂದು ಕಾಂಗ್ರೆಸ್‌ ಹೇಳಿದೆ. ನೀಟ್‌ ಸಿಬಿಎಸ್‌ಇ ಪಠ್ಯ ಕ್ರಮದ ವಿದ್ಯಾರ್ಥಿಗಳ ಪರವಾಗಿದೆ ಎಂದು ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ಆರೋಪಿಸಿದ್ದಾರೆ.

Advertisement

“ಎನ್‌ಟಿಎಯಲ್ಲಿ ಸುಧಾರಣೆ’
ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿ ಮೊದಲ ಬಾರಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌, ಕೆಲವು ಕಡೆಗಳಲ್ಲಿ ನೀಟ್‌ ಪರೀಕ್ಷಾ ಅಕ್ರಮ ನಡೆದಿದೆ ಎಂದಿದ್ದಾರೆ. ಆದರೆ ಈ ಸಂಬಂಧ ವಿದ್ಯಾರ್ಥಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಕೇಂದ್ರ ಸರಕಾರದ ಜವಾಬ್ದಾರಿ, ಎನ್‌ಟಿಎಯಲ್ಲಿ ಕೆಲವು ಸುಧಾರಣೆಗಳಾಗಬೇಕು ಎಂದು ಹೇಳಿದ್ದಾರೆ.

6 ದಿನಾಂಕ ಬಾಹಿರ ಚೆಕ್‌ ವಶ
ಪಟ್ನಾ: ನೀಟ್‌ ಪ್ರಶ್ನೆಪತ್ರಿಕೆ ಸೋರಿಕೆಗೆ ಸಂಬಂಧಿಸಿ ಬಿಹಾರ ಪೊಲೀಸರು 6 ದಿನಾಂಕ ಬಾಹಿರ ಚೆಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ತಿಂಗಳು ನಡೆದ ಪರೀಕ್ಷೆಗೆ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲು ಅಪರಾಧಿಗಳು ಪ್ರತೀ ಅಭ್ಯರ್ಥಿಯಿಂದ 30 ಲಕ್ಷ ರೂ. ಬೇಡಿಕೆ ಇಟ್ಟಿದ್ದರು. ತನಿಖೆ ವೇಳೆ ಪೊಲೀಸ್‌ ಇಲಾಖೆಯ ಆರ್ಥಿಕ ಅಪರಾಧ ತಂಡ 6 ಚೆಕ್‌ಗಳನ್ನು ವಶಪಡಿಸಿಕೊಂಡಿದೆ. ಜತೆಗೆ ಸಂಬಂಧಪಟ್ಟವರ ಬ್ಯಾಂಕ್‌ ಖಾತೆಗಳನ್ನು ಪರಿಶೀಲಿಸುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಬಿಹಾರದ 13 ಜನರನ್ನು ಬಂಧಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ 9 ನೀಟ್‌ ಅಭ್ಯರ್ಥಿಗಳಿಗೆ ಪೊಲೀಸರು ಸೂಚನೆ ನೀಡಿದ್ದಾರೆ. ಜೂ. 4ರಂದು ನೀಟ್‌ ಫ‌ಲಿತಾಂಶ ಪ್ರಕಟವಾದ ಅನಂತರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ಕೆಲ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next