Advertisement
ಸೆಪ್ಟಂಬರ್ 1ರಿಂದ 6ರವರೆಗೆ ಜೆಇಇ ಪರೀಕ್ಷೆ ನಡೆಸಲು ಹಾಗೂ ಸೆಪ್ಟಂಬರ್ 13ಕ್ಕೆ ಎನ್‌ಇಇಟಿ ಪರೀಕ್ಷೆ ನಡೆಸಲು ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಇಲಾಖೆ ನಿರ್ಧರಿಸಿದೆ.
Related Articles
Advertisement
ಎನ್‌ಇಇಟಿಯೊಂದರ ವಿಚಾರವನ್ನೇ ನೋಡಿದರೆ ಈ ಪರೀಕ್ಷೆಯನ್ನು ಬರೆಯಲು ಈಗಾಗಲೇ ದೇಶಾದ್ಯಂತ 15.94 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈಗಾಗಲೇ 90 ಪ್ರತಿಶತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಡ್ಮಿಷನ್ ಕಾರ್ಡ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಇದೊಂದು ರೀತಿಯಲ್ಲಿ ಇಕ್ಕಟ್ಟಿನ ವಿಚಾರವೇ ಸರಿಯಾದರೂ ಒಂದು ಸ್ಪಷ್ಟ ನಿರ್ಧಾರಕ್ಕೆ ಬರುವ ಅಗತ್ಯವಂತೂ ಇತ್ತು. ಪರೀಕ್ಷೆಗಳನ್ನು ಸುರಕ್ಷಿತವಾಗಿ ನಡೆಸಲು ಸಾಧ್ಯವಿದೆ ಎನ್ನುವುದನ್ನು ಕರ್ನಾಟಕ ರುಜುವಾತು ಮಾಡಿದೆ. ಅದನ್ನೇ ಮಾದರಿಯಾಗಿಟ್ಟುಕೊಂಡು ಮುಂದುವರಿಯಬೇಕು ಎಂದು ದೇಶಾದ್ಯಂತ ಶಿಕ್ಷಣ ತಜ್ಞರು ಅಭಿಪ್ರಾಯ ಪಡುತ್ತಾರೆ.
ಆದರೆ ಇದು ವಿದ್ಯಾರ್ಥಿಗಳ ಜೀವನದ ಜತೆಗಿನ ಚೆಲ್ಲಾಟ ಎನ್ನುವುದು ಪರೀಕ್ಷೆಗಳನ್ನು ಮುಂದೂಡಲು ಆಗ್ರಹಿಸುವವರ ವಾದ. ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ಗೂ ಕೂಡ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆದರೆ ಕೋರ್ಟ್ ಈ ಅರ್ಜಿಗಳನ್ನೆಲ್ಲ ತಿರಸ್ಕರಿಸಿ, ವೈರಸ್‌ನ ಜತೆಗೇ ಜೀವನ ಸಾಗಬೇಕಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆಯಾಗಲು ಬಿಡುವುದಿಲ್ಲ ಎಂದಿದೆ.
ರಾಜ್ಯದ ವಿಷಯಕ್ಕೆ ಬರುವುದಾದರೆ, ಉನ್ನತ ಶಿಕ್ಷಣ ಸಚಿವ, ಉಪಮುಖ್ಯಮಂತ್ರಿ ಡಾ| ಸಿ.ಎನ್. ಅಶ್ವತ್ಥನಾರಾಯಣ ಅವರು ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಸುರಕ್ಷಿತವಾಗಿ ನಡೆಸಬಹುದು, ಸಿಇಟಿ ಸಮಯದಲ್ಲಿ ಬರದ ಕೋವಿಡ್ 19 ಜೆಇಇ ಪರೀಕ್ಷೆಯಲ್ಲಿ ಬರುತ್ತದೆಯೇ ಎಂದು ಪ್ರಶ್ನಿಸುತ್ತಾರೆ. ಅಲ್ಲದೇ ಈ ಎರಡೂ ಪರೀಕ್ಷೆಗಳನ್ನು ಮುಂದೂಡಿಸಲು ಪ್ರಯತ್ನಿಸುತ್ತಿರುವುದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿವೆ ಎಂದೂ ಅವರು ಹೇಳುತ್ತಿದ್ದಾರೆ.
ಗಮನಿಸಬೇಕಾದ ಸಂಗತಿಯೆಂದರೆ, ಪರೀಕ್ಷೆಗಳನ್ನು ಮುಂದೂಡಿದರೂ, ಎಲ್ಲಿಯವರೆಗೆ ಮುಂದೂಡಬೇಕು ಎನ್ನುವ ಪ್ರಶ್ನೆ ಎದುರಾಗುತ್ತದೆ. ಏಕೆಂದರೆ, ಇಂದು ಜಗತ್ತಿನಾದ್ಯಂತ ಕೋವಿಡ್ 19 ಸೋಂಕಿನ ಎರಡನೇ ಅಲೆಯ ಅಪಾಯವಿದೆ.
ಹೀಗಾಗಿ ಮುಂದೂಡುತ್ತಾ ಹೋದಷ್ಟೂ ಸವಾಲು ಹೆಚ್ಚುತ್ತಲೇ ಹೋಗುತ್ತದೆ. ಕೆಲವರು ಎರಡು ತಿಂಗಳು ಮುಂದೂಡಬೇಕು ಎನ್ನುತ್ತಾರೆ.ಆದರೆ ಎರಡು ತಿಂಗಳುಗಳಲ್ಲಿ ಕೋವಿಡ್ ಸವಾಲು ಕಡಿಮೆಯಾಗುತ್ತದೆ ಎನ್ನಲಾಗುವುದಿಲ್ಲ.
ಒಟ್ಟಿನಲ್ಲಿ ಪರೀಕ್ಷೆಗಳು ನಡೆಯುವುದೇ ಆದರೆ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಚ್ಚರಿಕೆಯ ಕ್ರಮಗಳನ್ನು ಪಾಲಿಸುವಂತಾಗಬೇಕು. ನಿಗದಿಯಾದ ದಿನಕ್ಕೆ ಇನ್ನೂ ಕೆಲವೇ ಸಮಯ ಬಾಕಿ ಉಳಿದಿದೆ.
ಈ ಸಮಯದಲ್ಲಿ ಒಂದು ಸ್ಪಷ್ಟತೆ ವಿದ್ಯಾರ್ಥಿಗಳಲ್ಲಿ ಮನೆಮಾಡಬೇಕಿದೆ. ಪರೀಕ್ಷೆ ನಡೆಯುತ್ತದೋ ಇಲ್ಲವೋ ಎನ್ನುವ ಗೊಂದಲ ಅವರಲ್ಲಿ ಒತ್ತಡ ಉಂಟುಮಾಡಬಾರದು. ವಿದ್ಯಾರ್ಥಿಗಳೂ ಸಹ ಪರ-ವಿರೋಧದ ರಾಜಕೀಯ ಚರ್ಚೆಗಳತ್ತ ಗಮನಹರಿಸದೇ ಪರೀಕ್ಷಾ ತಯಾರಿಯತ್ತ ಗಮನಹರಿಸುವುದು ಒಳಿತು.