Advertisement

ಕರೆಯಿತು, ನೀರುದೋಸೆ

01:33 PM Sep 07, 2019 | Suhan S |

ಇಂಟ್ರೋ: ಅಲ್ಲಿದ್ದಿದ್ದು ಒಂದೇ ಒಂದು ಅಂಗಡಿ. ನೀರುದೋಸೆ ಅಂಗಡಿ! ಹೊಟ್ಟೆ ಬಿರಿಯುವಂತೆ ನೀರುದೋಸೆ- ಮೀನು ಸಾರು ತಿಂದುಕೊಂಡು ಬರಿ¤ದ್ವಿ. ಈವತ್ತಿಗೆ ನಾನು, ನನ್ನ ದೀಪಕ್‌, ನೀರುದೋಸೆ ತಿನ್ನಲಿಕ್ಕೆಂದೇ ಕೊಟ್ಟಿಗೆಹಾರಕ್ಕೆ ಹೋಗಿ, ಅಣ್ಣ ನನ್ನು ನೆನೆಯುತ್ತಾ ತಿಂದು ಬರುವೆವು…

Advertisement

 

ಬೆಂಗಳೂರಿನಲ್ಲಿ ಕೆಲಸದಲ್ಲಿದ್ದರೂ ಯಾವಾಗ್ಲೂ ಮೂಡಿಗೆರೆ ನನ್ನನ್ನು ಕರೆಯುತ್ತಲೇ ಇರುತ್ತಿತ್ತು. ಯಾಕೆಂದರೆ, ಅಣ್ಣನ ಜೊತೆ ಮಾಗುಂಡಿಗೆ ಮೀನು ಹಿಡಿಯಕ್ಕೆ ಹೋಗಬಹುದು, ಅಲ್ಲಿ ಕಾಡಿನಲ್ಲಿ ಸುತ್ತಾಡಬಹುದು, ವಾಪಸು ಬರ್ತಾ ಕೊಟ್ಟಿಗೆಹಾರದಲ್ಲಿನ ದೋಸೆ! ತುಪ್ಪದಲ್ಲಿ ಹುರಿದ ಘಮಘಮ ಮಸಾಲೆದೋಸೆ! “ದೋಸೆ ತಿನ್ನೋಣವಾ ಅಕ್ಕಾ?’ ಅಂತ ಕೇಳ್ಳೋವ್ರು. ಅವರಿಗೂ ಅದು ಇಷ್ಟನೇ. ಆವತ್ತಿಗೆ ಕೊಟ್ಟಿಗೆಹಾರದಲ್ಲಿ ಮಸಾಲೆದೋಸೆ ಮಾತ್ರ ಸಿಕ್ತಿತ್ತು. ಈವತ್ತಿಗೆ ಸಾಲು ಸಾಲು ನೀರುದೋಸೆ ಅಂಗಡಿಗಳಿದಾವೆ.

ಕೆಲವೊಂದು ಸಲ ಹಾಗೇ ಚಾರ್ಮಾಡಿ ಕಡೆಗೆ ಹೋಗುತ್ತಿದ್ದೆವು. ಹೇರ್‌ಪಿನ್‌ ಕರ್ವ್‌ ದಾಟಿ ಚೂರು ಕೆಳಗೆ ಇಳಿದ್ರೆ, ದಟ್ಟ ಕಾಡು. ಆ ದಾರಿಯ ಮಧ್ಯದಲ್ಲಿ ಗುಂಪು ಗುಂಪಾಗಿ ಹಸಿರು ಹುರುಸಲಕ್ಕಿಗಳು ಅದೇನು ಮೇಯ್ತಾ ಇರಿ¤ದ್ದವೋ ಕಾಣೆ, ಯಾವಾಗ ಹೋದರೂ ಕಾಣಲಿಕ್ಕೆ ಸಿಗೋವು. ಅದಕ್ಕೆಂದೇ ಅಣ್ಣ ಕರೆದುಕೊಂಡು ಹೋಗ್ತಿದ್ದಿದ್ದು. ಇನ್ನೂ ಚೂರು ಘಾಟಿ ಇಳಿದರೆ, ಹಳ್ಳಿ ಸಿಕ್ಕುತ್ತೆ. ಅಲ್ಲಿದ್ದಿದ್ದು ಒಂದೇ ಒಂದು ಅಂಗಡಿ. ನೀರುದೋಸೆ ಅಂಗಡಿ! ಹೊಟ್ಟೆ ಬಿರಿಯುವಂತೆ ನೀರುದೋಸೆ- ಮೀನು ಸಾರು ತಿಂದುಕೊಂಡು ಬರಿ¤ದ್ವಿ. ಈವತ್ತಿಗೆ ನಾನು, ನನ್ನ ದೀಪಕ್‌, ನೀರುದೋಸೆ ತಿನ್ನಲಿಕ್ಕೆಂದೇ ಕೊಟ್ಟಿಗೆಹಾರಕ್ಕೆ ಹೋಗಿ, ಅಣ್ಣನನ್ನು ನೆನೆಯುತ್ತಾ ತಿಂದು ಬರುವೆವು.

ಆ ಚಾರ್ಮಾಡಿ ನೋಡಿದಾಗ ಈಗಲೂ, ನೆನಪುಗಳು ಚಾರಣ ಹೊರಟಂತೆ ಅನ್ನಿಸುತ್ತದೆ. ನಾನು, ತಂಗಿ ಈಶಾನ್ಯ, ಅಮ್ಮ, ಅಣ್ಣ ಮತ್ತು ಅವರ ವಿಜ್ಞಾನಿ ಗೆಳೆಯರ ಗುಂಪು, ಮಲ್ಲಿಕ್‌, ಚಕ್ರವರ್ತಿ, ಚಂದ್ರಶೇಖರ ಅವರ ಕುಟುಂಬದವರು ಹಾಗೂ ಗೆಳೆಯ ರಘು, ಎಲ್ಲರೂ ಸೇರಿ ಚಾರ್ಮಾಡಿ ಘಾಟಿಯ ತಳತಳದಲ್ಲಿ ಝುಳುಝುಳು ಹರಿವ ನದಿಯಲ್ಲಿಗೇ ಹೋಗಿದ್ದೆವು. ರುಚಿ ರುಚಿ ಅಡುಗೆ (ಬಿರಿಯಾನಿ) ಜೊತೆಯಲ್ಲಿತ್ತು.

Advertisement

ಅಲ್ಲಿ ಅರಣ್ಯ ಇಲಾಖೆಯವರು ಮಾತ್ರ ಓಡಾಡುವ ಕಾಲುದಾರಿ ಇತ್ತು. ಅವರ ಅಪ್ಪಣೆ ಪಡೆದೇ ಹೋಗಿದ್ದೆವು. ದಟ್ಟ ಕಾಡಿನ ಮಧ್ಯೆ ಇಳಿದಿಳಿದು ಹೋಗುತ್ತಾ ನೋಡ್ತೀವಿ, ಆ ಬೃಹದಾಕಾರದ ಮರಗಳು! ನೆತ್ತಿ ಮೇಲಿದ್ದ ಆಕಾಶದಲ್ಲಿದ್ದಂಥ ಮರಗಳ ತುದಿ. ರೆಂಬೆ- ಟೊಂಗೆ ಏನೂ ಕಾಣುತ್ತಲೇ ಇಲ್ಲ. ಕಣ್ಣು ನಿರುಕಿಸಿ ನೋಡಿದರೂ ಕಾಣುತ್ತಿರಲಿಲ್ಲ. ದಾರಿಯಲ್ಲಿ ಬಿದ್ದಿದ್ದ ಒಣಗಿದ ಎಲೆಗಳ ದರಗಿನ ಮೇಲೆ ನನ್ನ ಹೆಜ್ಜೆಯ ಸಪ್ಪಳ ಸದ್ದಿನಿಂದ ಅಲ್ಲಿ ಹಾವೆಂದು ತಿಳಿದು ಬೆಚ್ಚಿಬಿದ್ದಿದ್ದೆ. ಬಿದ್ದಿದ್ದ ಹಣ್ಣು, ಬೀಜ ನೋಡಿ, ಇದು ಆ ಮರದ್ದು ಎಂದು ಗುರುತಿಸಿಕೊಳ್ಳುತ್ತಾ, ಹೆರಕಿಕೊಳ್ಳುತ್ತಿದ್ದೆವು. ಅವೆಲ್ಲ ನಮಗೆ ವಿಜ್ಞಾನದ ಪಾಠ.

ಆ ಕಣಿವೆಯನ್ನು ಇಳಿದಿಳಿದು ಹೋಗುತ್ತಾ, ಕೆಲವೊಮ್ಮೆ ಜಾರಿ ಜಾರಿ ಬೀಳುತ್ತಾ, ಕಣಿವೆಯ ತಳ ತಲುಪಿದೆವು. ಸಮಯ ಹೋಗಿದ್ದೇ ಗೊತ್ತಾಗಲಿಲ್ಲ. ಊಟ ಹೊಡೆದು, ಹಿಂದಿರುಗುವಾಗ ಸುಸ್ತೋ ಸುಸ್ತು. ಇಳಿಯುವಾಗ ಸುಲಭವಾಗಿತ್ತು. ಏರಿ ಏರುವಾಗ ಏದುಸಿರು ಬಂತು. ಹತ್ತುವುದು ಕಷ್ಟಸಾಧ್ಯವಾಯ್ತು. ಟಾರ್‌ ರಸ್ತೆ ಕಂಡರೆ ಸಾಕಪ್ಪ ಅನ್ನುವಂತಾಗಿತ್ತು.

ಹೀಗೆ ಥ್ರಿಲ್ಲಿಂಗ್‌ ತಿರುಗಾಟಕ್ಕೆ ಅಣ್ಣ ಕರೆದೊಯ್ಯುತ್ತಲೇ, ತಾವು ಮಾತ್ರ ಕಾಡಿನ ಬಗ್ಗೆ ಚಿಂತಿಸುತ್ತಲೇ ಇರುತ್ತಿದ್ದರು. ನಮಗೆ ಪರಿಸರ ಪಾಠ ಹೇಳುತ್ತಿದ್ದರು. ಅವರೇ ಹೇಳುವಂತೆ, “ಪ್ರಕೃತಿಯ ಒಂದು ಭಾಗ ಮಾತ್ರ ನಾವು, ನಮ್ಮ ಒಂದು ಭಾಗ ಪ್ರಕೃತಿ ಅಲ್ಲ’.

 

– ಕೆ.ಪಿ. ಸುಸ್ಮಿತಾ

Advertisement

Udayavani is now on Telegram. Click here to join our channel and stay updated with the latest news.

Next