Advertisement

ನೀರಸಾಗರ ಜಲಾಶಯಕ್ಕೆ ಬಾಗಿನ ಅರ್ಪಣೆ

03:30 PM Aug 25, 2020 | Suhan S |

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಪ್ರತಿ ಹಳ್ಳಿಗೂ ಮಲಪ್ರಭಾದಿಂದ ಕುಡಿಯುವ ನೀರು ಸರಬರಾಜು ಮಾಡಲು ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಿಸಲಾಗಿದೆ. ಮುಖ್ಯಮಂತ್ರಿಗಳಿಂದ ಒಪ್ಪಿಗೆ ಪಡೆದು ಶೀಘ್ರವೇ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.

Advertisement

ಕಲಘಟಗಿ ತಾಲೂಕು ಧುಮ್ಮವಾಡ ಗ್ರಾಮದ ನೀರಸಾಗರ ಜಲಾಶಯಕ್ಕೆ ಸೋಮವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಈ ಯೋಜನೆ ಅನುಷ್ಠಾನಗೊಂಡರೆ ಧುಮ್ಮವಾಡ ಕೆರೆಯ ಸುತ್ತಮುತ್ತಲಿನ 12 ಗ್ರಾಮಗಳು ಸೇರಿದಂತೆ ಜಿಲ್ಲೆಯ ಪ್ರತಿ ಗ್ರಾಮಗಳಲ್ಲೂ ಕುಡಿಯುವ ನೀರಿನಸಮಸ್ಯೆ ಬಗೆಹರಿಯಲಿದೆ. ಮನೆ ಮನೆಗೆ ಪ್ರತಿದಿನ  ಕುಡಿಯುವ ನೀರು ಪೂರೈಕೆಯಾಗಲಿದೆ ಎಂದರು.

ನೀರಸಾಗರ ಜಲಾಶಯ ಕಳೆದ 4-5 ವರ್ಷಗಳ ಹಿಂದೆ ಬತ್ತಿ ಹೋಗಿತ್ತು. ಕಳೆದ ವರ್ಷ ಹೆಚ್ಚಿನ ಮಳೆಯಿಂದಾಗಿ ಜಲಾಶಯ ಭರ್ತಿಯಾಗಿತ್ತು. ಈ ವರ್ಷವೂ ತುಂಬಿದೆ. ಹೀಗಾಗಿ ಹು-ಧಾಕ್ಕೆ ನೀರು ಪೂರೈಕೆಗೆ ಹೆಚ್ಚಿನ ಶಕ್ತಿ ನೀಡಿದೆ. ಹು-ಧಾಗೆ ಪ್ರತಿದಿನ 200 ಎಂಎಲ್‌ಡಿ ನೀರು ಬೇಕು. 160 ಎಂಎಲ್‌ಡಿ ಮಲಪ್ರಭಾದಿಂದ ಹಾಗೂ 40 ಎಂಎಲ್‌ಡಿ ನೀರಸಾಗರದಿಂದ ಸರಬರಾಜು ಮಾಡಲಾಗುತ್ತಿದೆ. ಇದರಿಂದ ಕುಡಿಯುವ ನೀರಿನ ಸಮಸ್ಯೆ ಕಡಿಮೆಯಾಗಿದೆ. ಜಿಲ್ಲೆಯಲ್ಲಿ ಈ ವರ್ಷ 500ಕೋಟಿ ರೂ.ದಷ್ಟು ಬೆಳೆ ನಷ್ಟವಾಗಿದೆ. ಸಮೀಕ್ಷೆ ಮಾಡಲಾಗುತ್ತಿದೆ. ಮಂಗಳವಾರ ಮುಖ್ಯಮಂತ್ರಿಯವರು ಬೆಳಗಾವಿಗೆ ಆಗಮಿಸಲಿದ್ದಾರೆ. ಆಗ ವರದಿ ಕೊಟ್ಟು ನಷ್ಟ ಪರಿಹಾರ ಒದಗಿಸಲು ಪ್ರಯತ್ನಿಸಲಾಗುವುದು ಎಂದರು.

ಕೆಆರ್‌ಎಸ್‌ ಬೃಂದಾವನ ಮಾದರಿ ಅಭಿವೃದ್ಧಿ: ಧುಮ್ಮವಾಡ ಗ್ರಾಮದ ನೀರಸಾಗರ ಜಲಾಶಯ ಆಸುಪಾಸಿನಲ್ಲಿ ಸುಮಾರು 300 ಎಕರೆ ಸರಕಾರಿ ಜಾಗವಿದ್ದು, ಇದನ್ನು ಮೈಸೂರಿನ ಕೆಆರ್‌ ಎಸ್‌ ಬೃಂದಾವನ ಗಾರ್ಡನ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಿ ಆಕರ್ಷಣೀಯ ಪ್ರವಾಸಿ ತಾಣ ಮಾಡಲಾಗುವುದು. ಅದಕ್ಕಾಗಿ ಯೋಜನೆ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಯೋಜನೆ ಸಿದ್ಧಪಡಿಸಿದರೆ ಅದನ್ನು ಇತರೆ ಅನುದಾನದಡಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಆಧ್ಯಕ್ಷ ರಾಜೂಗೌಡ, ವಿಧಾನಸಭೆ ಸದಸ್ಯರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಶಂಕರ ಪಾಟೀಲ ಮುನೇನಕೊಪ್ಪ, ವಿಧಾನ ಪರಿಷತ್‌ ಸದಸ್ಯ ಪ್ರೊ|ಎಸ್‌.ವಿ.ಸಂಕನೂರ, ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡ್ರ, ನಿರ್ದೇಶಕಿ ದೀಪಾ ಕುಡಚಿ,ಕಲಘಟಗಿ ತಾಪಂ ಅಧ್ಯಕ್ಷೆ ಸುನಿತಾ ಮ್ಯಾಗಿನಮನಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ, ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ|ಸುರೇಶಇಟ್ನಾಳ, ಜಲಮಂಡಳಿ ಕಾರ್ಯಪಾಲಕ ಅಭಿಯಂತ ಪಿ.ಸುರೇಶ, ಚಾಮರಾಜಗೌಡ, ಸಹಾಯಕ ಅಭಿಯಂತ ಎಂ.ಎಫ್‌. ನೇಗಿನಹಾಳ, ವಸಂತ ಗುಡಿ ಇನ್ನಿತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next