ಚತ್ತೀಸ್ ಘಡ : ಒಲಿಂಪಿಕ್ಸ್ ಜಾವೆಲಿನ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ ಮತ್ತು ಒಲಿಂಪಿಕ್ ಕ್ರೀಡಾಪಟುಗಳಿಗೆ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಭರ್ಜರಿ ಪಾರ್ಟಿಯನ್ನು ಆಯೋಜನೆ ಮಾಡಿದ್ದರು. ವಿಶೇಷ ಅಂದ್ರೆ ಸ್ವತಃ ತಾವೇ ಬಗೆ ಬಗೆಯ ಅಡುಗೆಯನ್ನು ಮಾಡಿ ನೀರಜ್ ಚೋಪ್ರಾಗೆ ಊಟ ಬಡಿಸಿದ್ದಾರೆ.
ಈ ಬಗ್ಗೆ ತಮ್ಮ ಖುಷಿಯನ್ನು ಹಂಚಿಕೊಂಡಿರುವ ಸಿಎಂ ಅಮರಿಂದರ್ ಸಿಂಗ್, ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅಡುಗೆಯನ್ನು ಮಾಡಿದ್ದೇವೆ. ಪ್ರತಿ ಕ್ಷಣವನ್ನು ಖುಷಿಪಟ್ಟಿದ್ದೇವೆ. ಕ್ರೀಡಾಪಟುಗಳು ದೇಶಕ್ಕಾಗಿ ಗೆಲುವು ತಂದುಕೊಡಲು ತುಂಬಾ ಶ್ರಮ ಪಟ್ಟಿದ್ದಾರೆ. ನಾವು ಅವರಿಗಾಗಿ ಏನೇ ಮಾಡಿದರು ಅದನ್ನು ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಅಮರಿಂದರ್ ಸಿಂಗ್ ಆಯೋಜನೆ ಮಾಡಿದ್ದ ಪಾರ್ಟಿಯಲ್ಲಿ, ಮಟನ್ ಖಾರಾ ಪಿಶೋರಿ, ಲಾಂಗ್ ಎಲೈಚಿ ಚಿಕನ್ ಮತ್ತು ದಾಲ್ ಮಸ್ರಿ ಸೇರಿದಂತೆ ಹಲವಾರು ಬಗೆಯ ಭಕ್ಷಗಳಿದ್ದವು.
ಪಾರ್ಟಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ನೀರಜ್ ಚೋಪ್ರಾ, ನನಗೆ ತುಂಬಾ ಖುಷಿಯಾಗಿದೆ. ಒಬ್ಬ ಮುಖ್ಯಮಂತ್ರಿಗಳು ತಮ್ಮ ಸಮಯವನ್ನು ನಮಗಾಗಿ ಕೊಟ್ಟಿದ್ದಾರೆ. ಇದರಿಂದ ತಿಳಿಯುತ್ತದೆ ಅವರು ಕ್ರೀಡೆ ಮತ್ತು ಕ್ರೀಡಾಪಟುಗಳ ಮೇಲೆ ಎಷ್ಟು ಗೌರವ ಮತ್ತು ಪ್ರೀತಿ ಹೊಂದಿದ್ದಾರೆ ಎಂದು. ಅವರು ನೀಡಿದ ಪ್ರೀತಿ ಮತ್ತು ಗೌರವಕ್ಕೆ ಧನ್ಯವಾದಗಳು ಎಂದು ಹೇಳಿದ್ದಾರೆ.