Advertisement

ಒಲಿಂಪಿಕ್ಸ್‌  ವಿಜೇತನನ್ನು ಮಣಿಸಿ ಚಿನ್ನ ಗೆದ್ದ ನೀರಜ್‌

06:00 AM Jul 19, 2018 | Team Udayavani |

ಜಾವೆಲಿನ್‌ ತ್ರೋನಲ್ಲಿ 85.17 ಮೀ. ಸಾಧನೆಗೈದ ನೀರಜ್‌ 
ಗೋಲ್ಡ್‌ಕೋಸ್ಟ್‌ ಗೇಮ್ಸ್‌ ಬಳಿಕ ಭಾರತೀಯನ ಮಿಂಚು

Advertisement

ಹೊಸದಿಲ್ಲಿ: ಭಾರತದ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ ವಿಶ್ವ ಆ್ಯತ್ಲೆಟಿಕ್ಸ್‌ ಅಂಗಳದಲ್ಲಿ ಮತ್ತೂಮ್ಮೆ ಮಿಂಚು ಹರಿಸಿದ್ದಾರೆ. ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬಂಗಾರ ಗೆದ್ದು ಸಂಚಲನ ಮೂಡಿಸಿದ್ದ ನೀರಜ್‌, ಈಗ ಫ್ರಾನ್ಸ್‌ನ ಸೊಟ್ವಿಲ್ಲೆ ಆ್ಯತ್ಲೆಟಿಕ್ಸ್‌ ಮೀಟ್‌ನಲ್ಲೂ ಚಿನ್ನದ ಪದಕ ಗೆದ್ದಿದ್ದಾರೆ. ಈ ಹಾದಿಯಲ್ಲಿ ನೀರಜ್‌ 2012ರ ಲಂಡನ್‌ ಒಲಿಂಪಿಕ್ಸ್‌ ಪದಕ ವಿಜೇತ, ಟ್ರಿನಿಡಾಡ್‌ ಆ್ಯಂಡ್‌ ಟೊಬಾಗೊದ ಕೆಶೋರ್ನ್ ವಾಲ್ಕಾಟ್‌ ಅವರನ್ನು ಹಿಂದಿಕ್ಕಿ ತಮ್ಮ ಸಾಧನೆಗೆ ಇನ್ನಷ್ಟು ರಂಗು ತುಂಬಿಸಿದ್ದಾರೆ.

ಬುಧವಾರ ನಡೆದ ಜಾವೆಲಿನ್‌ ಸ್ಪರ್ಧೆಯಲ್ಲಿ 20ರ ಹರೆಯದ ನೀರಜ್‌ ಚೋಪ್ರಾ 85.17 ಮೀಟರ್‌ ಸಾಧನೆಯೊಂದಿಗೆ ಮೊದಲಿಗರಾಗಿ ಬಂದರು. ಮಾಲ್ಡೋವಾದ ಆ್ಯಂಡ್ರಿಯನ್‌ ಮರ್ದಾರೆ ಬೆಳ್ಳಿ (81.48 ಮೀ.) ಹಾಗೂ ಲಿಥುವೇನಿಯಾದ ಎಡಿಸ್‌ ಮ್ಯಾಟುಸೆವಿಸಿಯಸ್‌ ಕಂಚಿನ ಪದಕ ಗೆದ್ದರು (79.31 ಮೀ.). ಒಲಿಂಪಿಕ್ಸ್‌ ಬಂಗಾರ ವಿಜೇತ ವಾಲ್ಕಾಟ್‌ ಕೇವಲ 78.26 ಮೀ. ದೂರ ಜಾವೆಲಿನ್‌ ಎಸೆದು 5ನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಜೂನಿಯರ್‌ ಮಟ್ಟದಿಂದಲೇ ಯಶಸ್ಸು
ಪಾಣಿಪತ್‌ನ ಈ ಪ್ರತಿಭಾನ್ವಿತ ಆ್ಯತ್ಲೀಟ್‌ನ ಸಾಧನೆಯನ್ನು ಗಮನಿಸಿದರೆ ಅವರ ಫ್ರಾನ್ಸ್‌ ಪರಾಕ್ರಮ ಅಚ್ಚರಿ ಎನಿಸದು. 2016ರ ವಿಶ್ವ ಜೂನಿಯರ್‌ ಚಾಂಪಿಯನ್‌ಶಿಪ್‌ನಲ್ಲಿ ದಾಖಲೆ 86.48 ಮೀ. ದೂರದ ಸಾಧನೆಯೊಂದಿಗೆ ಚಿನ್ನ ಗೆಲ್ಲುವ ಮೂಲಕ ನೀರಜ್‌ ಮೊದಲ ಸಲ ಕ್ರೀಡಾಪ್ರಿಯರ ಗಮನ ಸೆಳೆದಿದ್ದರು. ಅದೇ ವರ್ಷ ಪೋಲೆಂಡ್‌ನ‌ಲ್ಲಿ ನಡೆದ ಐಎಎಎಫ್ ವಿಶ್ವ ಅಂಡರ್‌-20 ಚಾಂಪಿಯನ್‌ಶಿಪ್‌ನಲ್ಲೂ ಚಿನ್ನಕ್ಕೆ ಕೊರಳೊಡ್ಡಿದರು. ಇಲ್ಲಿಯೂ ನೂತನ ದಾಖಲೆ ಸ್ಥಾಪಿಸಿದರು. ಆದರೆ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಲಾಗಲಿಲ್ಲ.

2017ರ ಏಶ್ಯನ್‌ ಆ್ಯತ್ಲೆಟಿಕ್ಸ್‌ ಮೂಲಕ ಮತ್ತೆ ಚಿನ್ನದ ಬೇಟೆ ಮುಂದುವರಿಸಿದ ನೀರಜ್‌ ಚೋಪ್ರಾ (85.23 ಮೀ.), ಗೋಲ್ಡ್‌ಕೋಸ್ಟ್‌ನಲ್ಲಿ ಗೋಲ್ಡ್‌ ಗೆದ್ದು ಇತಿಹಾಸ ನಿರ್ಮಿಸಿದರು. ಇದು ಕಾಮನ್ವೆಲ್ತ್‌ ಗೇಮ್ಸ್‌ ಜಾವೆಲಿನ್‌ ಎಸೆತದಲ್ಲಿ ಭಾರತಕ್ಕೆ ಒಲಿದ ಮೊದಲ ಚಿನ್ನದ ಪದಕವಾದರೆ, ಗೇಮ್ಸ್‌ ಪಾದಾರ್ಪಣೆಯಲ್ಲೇ ಈ ಸಾಹಸ ಪ್ರದರ್ಶಿಸಿದ್ದು ನೀರಜ್‌ ಹೆಚ್ಚುಗಾರಿಕೆಯಾಗಿತ್ತು. ಅನಂತರ ದೋಹಾ ಡೈಮಂಡ್‌ ಲೀಗ್‌ನಲ್ಲಿ ರಾಷ್ಟ್ರೀಯ ದಾಖಲೆ ಮುರಿಯುವಲ್ಲಿ ಯಶಸ್ವಿಯಾದರೂ (87.43 ಮೀ.) 4ನೇ ಸ್ಥಾನಕ್ಕೆ ಸಮಾಧಾನಪಡಬೇಕಾಯಿತು. ದೋಹಾ ಬೇಸರವನ್ನು ನೀರಜ್‌ ಫ್ರಾನ್ಸ್‌ನಲ್ಲಿ ನೀಗಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ವಿಶ್ವ ಮಟ್ಟದಲ್ಲಿ ನೀರಜ್‌ ಗೆದ್ದ 4ನೇ ಬಂಗಾರ ಇದಾಗಿದೆ. ಮುಂದಿನ ಗುರಿ ಏಶ್ಯನ್‌ ಗೇಮ್ಸ್‌ ಹಾಗೂ ಟೋಕಿಯೊ ಒಲಿಂಪಿಕ್ಸ್‌.

Advertisement

ಸಾಧಕನಿಗೆ ಅಭಿನಂದನೆ
ನೀರಜ್‌ ಚೋಪ್ರಾ ಹಾಗೂ ಅವರ ಕೋಚ್‌ ಯುವೆ ಹಾನ್‌ (ಜಾವೆಲಿನ್‌ ತ್ರೋನ ಮಾಜಿ ವಿಶ್ವದಾಖಲೆಯ ವೀರ) ಅವರಿಗೆ ಎಎಫ್ಐ ಅಧ್ಯಕ್ಷ ಎ. ಸುಮರಿವಾಲ, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹವಾಗ್‌ ಸಹಿತ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ.

ನೀರಜ್‌ಛೋಪ್ರಾಗೆ ಕನ್ನಡಿಗ ಕೋಚ್‌
ನೀರಜ್‌ ಚೋಪ್ರಾ ಸಾಧನೆಯ ಹಿಂದೆ ಕನ್ನಡಿಗ ಕೋಚ್‌ ಕಾಶೀನಾಥ್‌ ಕೊಡುಗೆ ಇದೆ. ಕಾಮನ್ವೆಲ್ತ್‌ ಗೇಮ್ಸ್‌ ಕಂಚಿನ ಪದಕ ವಿಜೇತ ಕಾಶೀನಾಥ್‌ ಬಳಿಯಲ್ಲಿ ನೀರಜ್‌ ಚೋಪ್ರಾ ತನ್ನ ಆರಂಭದ ದಿನಗಳಲ್ಲಿ ಪಟಿಯಾಲದಲ್ಲಿ ತರಬೇತಿ ಪಡೆದಿದ್ದರು. ನೀರಜ್‌ ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಿ ಬೆಳೆಸಿದ ಕೀರ್ತಿ ಕಾಶೀನಾಥ್‌ಗೆ ಸಲ್ಲುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next