ಹೊಸದಿಲ್ಲಿ: ಭಾರತದ ಹೆಮ್ಮೆಯ ಕ್ರೀಡಾಪಟು, ಒಲಿಂಪಿಕ್ ಚಿನ್ನದ ಪದಕ ವಿಜೇತ ಜಾವೆಲಿನ್ ಥ್ರೋವರ್ ನೀರಜ್ ಚೋಪ್ರಾ ಅವರು 2023 ರ ವರ್ಷದ ವಿಶ್ವ ಅಥ್ಲೀಟ್ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ. ಕೆಲವು ಆಧುನಿಕ ಟ್ರ್ಯಾಕ್ ಮತ್ತು ಫೀಲ್ಡ್ ಲೆಜೆಂಡ್ ಗಳೊಂದಿಗೆ ಸ್ಪರ್ಧಿಸುತ್ತಿರುವ ನೀರಜ್ ಚೋಪ್ರಾ ಅವರು ನಾಮನಿರ್ದೇಶಿತರ ಪಟ್ಟಿಯಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದಿದ್ದಾರೆ.
2023 ರ ವರ್ಷದ ವಿಶ್ವ ಅಥ್ಲೀಟ್ ಪ್ರಶಸ್ತಿಗೆ ಒಟ್ಟು 11 ಮಂದಿ ನಾಮಿನೇಟ್ ಆಗಿದ್ದಾರೆ. ಇದರಲ್ಲಿ ಪ್ರಮುಖರೆಂದರೆ ಶಾಟ್ ಪುಟ್ ವಿಶ್ವ ಚಾಂಪಿಯನ್ ರಯಾನ್ ಕ್ರೌಸರ್, ಪೋಲ್ ವಾಲ್ಟ್ ಆಟಗಾರ ಮೊಂಡೋ ಡುಪ್ಲಾಂಟಿಸ್ ಮತ್ತು 100 ಮೀ ಮತ್ತು 200 ಮೀ ವಿಶ್ವ ಚಾಂಪಿಯನ್ ನೋಹ್ ಲೈಲ್ಸ್.
ನೀರಜ್ ಚೋಪ್ರಾ ಅವರು ಇತ್ತೀಚೆಗೆ ನಡೆದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದರು. ಹ್ಯಾಂಗ್ ಝೂ ಕೂಟದಲ್ಲಿ 88.88 ಮೀಟರ್ ಜಾವೆಲಿನ್ ಎಸೆದು ಚೋಪ್ರಾ ಚಿನ್ನದ ಪದಕ ಗೆದ್ದುಕೊಂಡಿದ್ದರು. ನೀರಾಜ್ ಚೋಪ್ರಾ ಈ ಬಾರಿಯ ಡೈಮಂಡ್ ಟ್ರೋಫಿಯಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದರು. ಆ ಫೈನಲ್ ನಲ್ಲಿ ಅವರು 83.80 ಮೀಟರ್ ಎಸೆದಿದ್ದರು.
ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ 88.17 ಮೀಟರ್ ಎಸೆಯುವ ಮೂಲಕ ಚಿನ್ನ ಗೆದ್ದ ಮೊದಲ ಭಾರತೀಯ ಎಂಬ ಇತಿಹಾಸವನ್ನು ನೀರಜ್ ಚೋಪ್ರಾ ಬರೆದಿದ್ದಾರೆ.
ಪ್ರಶಸ್ತಿ ಪಟ್ಟಿಯಲ್ಲಿರುವ ಇತರರು
ರಯಾನ್ ಕ್ರೌಸರ್, ಶಾಟ್ ಪುಟ್
ಮೊಂಡೋ ಡುಪ್ಲಾಂಟಿಸ್, ಪೋಲ್ ವಾಲ್ಟ್
ಸೌಫಿಯಾನ್ ಎಲ್ ಬಕ್ಕಲಿ, 3000ಮೀ ಸ್ಟೀಪಲ್‌ಚೇಸ್
ಜಾಕೋಬ್ ಇಂಗೆಬ್ರಿಗ್ಟ್ಸೆನ್, 1500ಮೀ/ಮೈಲ್/5000ಮೀ
ಕೆಲ್ವಿನ್ ಕಿಪ್ಟಮ್, ಮ್ಯಾರಥಾನ್
ಪಿಯರ್ಸ್ ಲೆಪೇಜ್, ಡೆಕಾಥ್ಲಾನ್
ನೋಹ್ ಲೈಲ್ಸ್, 100ಮೀ/200ಮೀ
ಅಲ್ವಾರೊ ಮಾರ್ಟಿನ್, ರೇಸ್ ವಾಕ್
ಮಿಲ್ಟಿಯಾಡಿಸ್ ಟೆಂಟೊಗ್ಲೋ, ಲಾಂಗ್ ಜಂಪ್
ಕಾರ್ಸ್ಟೆನ್ ವಾರ್ಹೋಮ್, 400ಮೀ ಹರ್ಡಲ್ಸ್/400ಮೀ