Advertisement

ಕೆಂಪುಕೋಟೆಯ ಸ್ಮರಣೀಯ ಗಳಿಗೆ: ನೀರಜ್‌

12:23 AM Aug 16, 2021 | Team Udayavani |

ಹೊಸದಿಲ್ಲಿ: ಐತಿಹಾಸಿಕ ಕೆಂಪುಕೋಟೆಯಲ್ಲಿದ್ದು, ದೇಶದ ಸ್ವಾತಂತ್ರ್ಯ ಸಡಗರದ ಈ ಅಮೃತ ಮಹೋತ್ಸದ ಗಳಿಗೆಯನ್ನು ಸವಿದದ್ದು ತನಗೊಲಿದ ಮಹಾನ್‌ ಗೌರವ, ಇದು ಇನ್ನೊಂದು ಸ್ಮರಣೀಯ ಗಳಿಗೆ ಎಂಬುದಾಗಿ ಚಿನ್ನದ ಆ್ಯತ್ಲೀಟ್‌ ನೀರಜ್‌ ಚೋಪ್ರಾ ಹೇಳಿದ್ದಾರೆ.

Advertisement

“ಕ್ರೀಡಾಪಟುವಾಗಿ ಹಾಗೂ ಓರ್ವ ಸೈನಿಕನಾಗಿ ಐತಿಹಾಸಿಕ ಕೆಂಪುಕೋಟೆಯ ಸ್ವಾತಂತ್ರ್ಯ ಸಡಗರದಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿದ್ದು ನನ್ನ ಪಾಲಿನ ಸ್ಮರಣೀಯ ಗಳಿಗೆ. ನನಗೆ ಲಭಿಸಿದ ಮಹಾನ್‌ ಗೌರವ. ನಮ್ಮ ರಾಷ್ಟ್ರಧ್ವಜ ಮೇಲೇರಿ ಅರಳಿದಾಗ ನನ್ನ ಹೃದಯ ತುಂಬಿ ಬಂತು. ಜೈ ಹಿಂದ್‌’ ಎಂದು ನೀರಜ್‌ ಚೋಪ್ರಾ ಟ್ವೀಟ್‌ ಮಾಡಿದ್ದಾರೆ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ 8 ದಿನಗಳ ಹಿಂದಷ್ಟೇ ಜಾವೆಲಿನ್‌ ಬಂಗಾರ ಜಯಿಸಿದ್ದ ನೀರಜ್‌ ಚೋಪ್ರಾ ಭಾರತದ ಕ್ರೀಡಾಕ್ಷೇತ್ರದಲ್ಲಿ ಭಾರೀ ಸಂಚಲನ ಮೂಡಿಸಿದ್ದರು. ಆದರೆ ತೀವ್ರ ಜ್ವರದಿಂದಾಗಿ ಆ. 15ರ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವ ಕಾಶ ತಪ್ಪಬಹುದೆಂಬ ಭೀತಿ ಅವರನ್ನು ಆವರಿಸಿತ್ತು. ಹಾಗೇನೂ ಆಗಲಿಲ್ಲ.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ ಬಹುತೇಕ ಕ್ರೀಡಾಪಟುಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಪ್ರಧಾನಿ ಗುಣಗಾನ
ಟೋಕಿಯೋದಲ್ಲಿ ಅಮೋಘ ಸಾಧನೆಗೈದ ದೇಶದ ಕ್ರೀಡಾ ಸಾಧಕರು ಈ ಬಾರಿಯ ಸ್ವಾತಂತ್ರ್ಯ ಸಮಾರಂಭದ ವಿಶೇಷ ಆಕರ್ಷಣೆಯಾಗಿದ್ದರು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಇವರಿಗೆ ಆಹ್ವಾನನಿತ್ತಿದ್ದರು. ಪಿ.ವಿ. ಸಿಂಧು, ಮೀರಾಬಾಯಿ ಚಾನು, ಭಜರಂಗ್‌ ಪುನಿಯ, ರವಿಕುಮಾರ್‌ ದಹಿಯಾ, ಹಾಕಿಪಟುಗಳೆಲ್ಲ ಸಮಾರಂಭವನ್ನು ಕಣ್ತುಂಬಿಸಿಕೊಂಡರು.

Advertisement

“ನಮ್ಮ ಯುವ ಪೀಳಿಗೆಯ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ದೇಶವನ್ನೇ ಹೆಮ್ಮೆಪಡುವಂತೆ ಮಾಡಿದ್ದಾರೆ. ನೀವೆಲ್ಲ ನಮ್ಮ ಹೃದಯವನ್ನು ಗೆಲ್ಲುವ ಜತೆಗೆ ಈ ದೇಶದ ಯುವ ಜನತೆಗೆ ದೊಡ್ಡ ಸ್ಫೂರ್ತಿ ಆಗಿದ್ದೀರಿ’ ಎಂಬುದಾಗಿ ಪ್ರಧಾನಿ ಮೋದಿ ಒಲಿಂಪಿಕ್ಸ್‌ ಸಾಧಕರ ಗುಣಗಾನ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next