Advertisement

ನೀರ್‌ದೋಸೆ ಹುಡುಗಿಯ ಹ್ಯಾಪಿ ಡೇಸ್‌

12:28 PM Mar 02, 2017 | Sharanya Alva |

ನೀರ್‌ದೋಸೆ ಬಳಿಕ ಹರಿಪ್ರಿಯಾ ಯಾವ ಚಿತ್ರ ಮಾಡುತ್ತಾರೆ ಎಂಬ ಪ್ರಶ್ನೆಗಳು ಹರಿದಾಡುತ್ತಿದ್ದವು. ಆ ಪ್ರಶ್ನೆಗಳಿಗೀಗ ಉತ್ತರ ಸಿಕ್ಕಿದೆ. ಹರಿಪ್ರಿಯಾ “ನೀರ್‌ದೋಸೆ’ ಬಳಿಕ “ಹ್ಯಾಪಿಡೇಸ್‌’ ಎಂಬ ಸಿನಿಮಾ ಒಪ್ಪಿಕೊಂಡಿದ್ದಾರೆ. 

Advertisement

“ನೀರ್‌ದೋಸೆ’ ಚಿತ್ರದಲ್ಲಿ ಹರಿಪ್ರಿಯಾ ತುಂಬಾ ಬೋಲ್ಡ್‌ ಆಗಿ ಮಾಡಿದಂತಹ ಪಾತ್ರವದು. ಅಂಥದ್ದೇ ಕಥೆಗಳು ಅವರನ್ನು ಸುತ್ತುವರೆಯುತ್ತವೆಯಾ, ಅದೇ ಪಾತ್ರ ಹಿಡಿದು ಒಂದಷ್ಟು ಮಂದಿ ಅವರ ಹಿಂದಿಂದೆ ಸುತ್ತುತ್ತಾರಾ ಅನ್ನೋ ಪ್ರಶ್ನೆಗಳೂ ಎದ್ದಿದ್ದವು. ಆದರೆ, ಹರಿಪ್ರಿಯಾ ಮಾತ್ರ ಹೊಸಬರ ಚಿತ್ರ ಒಪ್ಪಿಕೊಳ್ಳುವ ಮೂಲಕ ಇದ್ದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. 

ಅಂದಹಾಗೆ, ಹರಿಪ್ರಿಯಾ ನಟಿಸುತ್ತಿರುವ ಚಿತ್ರದ ಹೆಸರು”ಹ್ಯಾಪಿ ಡೇಸ್‌’. ತೆಲುಗಿನ ವಿ.ಸಮುದ್ರ ಈ ಚಿತ್ರದ ನಿರ್ದೇಶಕರು. ಆರ್‌.ಎಸ್‌. ಪ್ರೊಡಕ್ಷನ್‌ ಬ್ಯಾನರ್‌ನಲ್ಲಿ ಕನಕಪುರ ಶ್ರೀನಿವಾಸ್‌ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಿರ್ದೇಶಕ ವಿ.ಸಮುದ್ರ ಅವರಿಗೆ ಇದು ಕನ್ನಡದ ಮೊದಲ ಸಿನಿಮಾ. 

ಈಗಾಗಲೇ ತೆಲುಗಿನಲ್ಲಿ ಹಿಟ್‌ ಚಿತ್ರಗಳನ್ನು ಕೊಟ್ಟಿದ್ದಾರೆ. “ಹ್ಯಾಪಿಡೇಸ್‌’ ಅವರ ಮೊದಲ ಕನ್ನಡ ಸಿನಿಮಾ ಹಾಗೂ ಅವರ ನಿರ್ದೇಶನದ ಹದಿನಾರನೇ ಚಿತ್ರ ಎಂಬುದು ವಿಶೇಷ. ಈ ಹಿಂದೆ ಕನಕಪುರ ಶ್ರೀನಿವಾಸ್‌ ನಿರ್ಮಾಣದಲ್ಲಿ ಮೂಡಿಬಂದಿದ್ದ “ಮಹಾನಂದಿ’ ಚಿತ್ರವನ್ನು ಇದೇ ನಿರ್ದೇಶಕರು ನಿರ್ದೇಶನ ಮಾಡಿದ್ದರು.

“ಹ್ಯಾಪಿಡೇಸ್‌’ ಒಂದು ಸಾಮಾಜಿಕ ಕಥಾ ವಸ್ತು ಹೊಂದಿರುವ ಸಿನಿಮಾ. ಇಲ್ಲಿ ಮನರಂಜನೆಗೆ ಹೆಚ್ಚು ಆದ್ಯತೆ ಇದೆಯಂತೆ. ಇನ್ನು, ಹರಿಪ್ರಿಯಾ ಅವರ ಜತೆ ಇಲ್ಲಿ ಪ್ರವೀಣ್‌, ಗೌತಮ್‌, ಕಾರ್ತಿಕೇಯ ಮತ್ತು ಅಭಿನವ್‌ ಎಂಬ ನಾಲ್ವರು ಹೊಸ ಹುಡುಗರಿದ್ದಾರೆ.

Advertisement

ಈ ಚಿತ್ರದ ಕಥೆ ಉತ್ತರ ಕರ್ನಾಟಕದ ರೈತರ ಸಮಸ್ಯೆಗಳ ಸುತ್ತ ನಡೆಯಲಿದೆ. ಆ ಭಾಗದ ರೈತರ ಸಮಸ್ಯೆಗೆ ರಾಜಕಾರಣಿಗಳು ಸ್ಪಂದಿಸದಿದ್ದಾಗ, ಆ ಭಾಗಕ್ಕೆ ಭೇಟಿ ಕೊಡುವ ಈ ನಾಲ್ವರ ಹುಡುಗರು ರೈತರ ಸಮಸ್ಯೆಗಳನ್ನು ಹೇಗೆ ಪರಿಹಾರ ಮಾಡುತ್ತಾರೆ ಎಂಬುದೇ ಕಥಾವಸ್ತು.

ಚಿತ್ರದಲ್ಲಿ ಚಿಕ್ಕಣ್ಣ, ಬುಲೆಟ್‌ ಪ್ರಕಾಶ್‌, ಸಾಧುಕೋಕಿಲಾ ಸೇರಿದಂತೆ ಇತರರು ನಟಿಸುತ್ತಿದ್ದಾರೆ. ಹೆಚ್‌.ಆರ್‌ ರವಿಶಂಕರ್‌ ಸಂಗೀತವಿದೆ. ನಿರಂಜನ್‌ ಬಾಬು ಕ್ಯಾಮೆರಾ ಹಿಡಿದಿದ್ದಾರೆ. ಎಂ.ಎಸ್‌ ರಮೇಶ್‌ ಸಂಭಾಷಣೆ ಬರೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next