Advertisement
ಜಾನಪದ ಅಕಾಡೆಮಿಗೆ ಮಂಗಳ ಮುಖಿ ಮಂಜಮ್ಮ ಜೋಗತಿ ಅಧ್ಯಕ್ಷರಾಗಿ ನೇಮಕ, ಸಚಿವ ಸಿ.ಟಿ.ರವಿ ಅವರ “ಮನೆ ಹಾಳರು’ ಕುರಿತ ವಿವಾದದ ಹೇಳಿಕೆ, ಪ್ರಾಧಿಕಾರ ಮತ್ತು ಅಕಾಡೆಮಿ ಅಧ್ಯಕ್ಷರು, ಸದಸ್ಯರು ಅಧಿಕಾರ ಪೂರೈಸದೇ ನಿರ್ಗಮಿಸಿ ರುವುದು 2019ನೇ ಸಾಲಿನ ಹಿನ್ನೋಟದ ಪ್ರಮುಖ ಹೈಲೆಟ್ಸ್.
Related Articles
Advertisement
ಇತಿಹಾಸ ಸೃಷ್ಟಿಸಿದ ಮಂಗಳ ಮುಖಿ: ಜಾನಪದ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯ ಹಿರಿಯ ರಂಗ ಕಲಾವಿದೆ ಮಂಗಳಮುಖಿ ಮಂಜಮ್ಮ ಜೋಗತಿ ಅವರು ನೇಮಕವಾಗುವ ಮೂಲಕ ಇತಿಹಾಸದ ಪುಟ ಸೇರಿದರು. ಅಲ್ಲದೆ, ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸಮಿತಿಯ ಅಧಿಕಾರ ವಿಸ್ತರಣೆ ವಿಚಾರದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಯಿತು. ಹಾಲಿ ಅಧ್ಯಕ್ಷ ಮನು ಬಳಿಗಾರ್ ನೇತೃತ್ವದ ಕಾರ್ಯಕಾರಿ ಸಮಿತಿಯ ಸದಸ್ಯರ ಮುಂದುವರಿಕೆ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು ಸಾಹಿತ್ಯ ಲೋಕದಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿತ್ತು.
ಕಣವಿಗೆ ನೃಪತುಂಗ ಸಾಹಿತ್ಯ ಪ್ರಶಸ್ತಿ: ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2019ನೇ ಸಾಲಿನ “ನೃಪತುಂಗ ಸಾಹಿತ್ಯ ಪ್ರಶಸ್ತಿ’ಗೆ ಹಿರಿಯ ಕವಿ ಚನ್ನವೀರ ಕಣವಿ ಭಾಜನರಾದರು. ಪ್ರಶಸ್ತಿ 7 ಲಕ್ಷದ 1 ರೂ. ನಗದು ಮತ್ತು ಸ್ಮರಣಿಕೆ ಒಳ ಗೊಂಡಿತ್ತು. ಯುವ ಕಾದಂಬರಿ ಕಾರ ಶ್ರೀಧರ ಬನವಾಸಿ ಅವರ ‘ಬೇರು’ ಕಾದಂಬರಿ 2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ “ಯುವ ಪುರಸ್ಕಾರ’ಕ್ಕೆ ಭಾಜನವಾಯಿತು. ಹಾಗೆಯೇ ಚಂದ್ರಕಾಂತ ಕರದಳ್ಳಿ ಅವರ “ಕಾಡು ಕನಸಿನ ಬೀದಿಗೆ’ ಕೃತಿಗೆ “ಬಾಲಸಾಹಿತ್ಯ ಪುರಸ್ಕಾರ’ ಆಯ್ಕೆಯಾಗಿತ್ತು.
“ಕುದಿ ಎಸರು’ ಕೃತಿಗೆ ಪ್ರಶಸ್ತಿ: ವರ್ಷದ ಕೊನೆಯಲ್ಲಿ ಹಿರಿಯ ಪತ್ರಕರ್ತೆ ಡಾ.ವಿಜಯಾ ಅವರ ಆತ್ಮಕತೆ “ಕುದಿ ಎಸರು’ ಕೃತಿ 2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಯಿತು. ಪ್ರಶಸ್ತಿ 1 ಲಕ್ಷ ರೂ.ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.
ಕವಿ, ನಾಟಕಕಾರರ ನಿಧನ: ನಾಟಕಕಾರ ಗಿರೀಶ್ ಕಾರ್ನಾಡ್, ಹಿರಿಯ ವಿಮರ್ಶಕ ಪ್ರೊ.ಎಲ್.ಎಸ್. ಶೇಷಗಿರಿ ರಾವ್, ಕವಿ ಕೆ.ಬಿ.ಸಿದ್ದಯ್ಯ, ಡಾ. ಚನ್ನಣ್ಣ ವಾಲೀಕಾರ, ಬಿ.ಎ.ಸನದಿ ಅವರ ನಿಧನ 2019ರ ಕಹಿ ನೆನಪುಗಳ ಪುಟ ಸೇರಿತು.