ಬೆಂಗಳೂರು: ರೈತರ ಆದಾಯ ದುಪ್ಪಟ್ಟುಗೊಳಿಸುವಲ್ಲಿ ಬೇವು ಮಹತ್ವದ ಪಾತ್ರ ವಹಿಸಲಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್. ರಾಜೇಂದ್ರ ಪ್ರಸಾದ್ ತಿಳಿಸಿದರು.
ನಗರದ ಆರ್‌ಜಿ ರಾಯಲ್ ಹೋಟೆಲ್‌ನಲ್ಲಿ ಸೋಮವಾರ ವಿಶ್ವ ನೀಮ್ ಸಂಸ್ಥೆ ಹಮ್ಮಿಕೊಂಡಿದ್ದ “ಸುಸ್ಥಿರ ಅಭಿವೃದ್ಧಿಗಾಗಿ ಪರಿಸರ ಸ್ನೇಹಿಯಾದ ಬೇವು ಪರಿಹಾರ’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ರೈತರ ಆದಾಯ ದ್ವಿಗುಣಗೊಳಿಸಲು ಕೇವಲ ಇಳುವರಿ ಹೆಚ್ಚಿಸುವುದು, ವೈಜ್ಞಾನಿಕ ಬೆಲೆ ಒದಗಿಸಿದರೆ ಸಾಲದು, ರಾಸಾಯನಿಕ ಗೊಬ್ಬರಗಳ ಬಳಕೆ ಕೂಡ ತಗ್ಗಬೇಕಿದೆ.
ಕೀಟಬಾಧೆ ನಿಯಂತ್ರಣಕ್ಕೆ ರೈತರು ಸಾಕಷ್ಟು ಖರ್ಚು ಮಾಡುತ್ತಿದ್ದಾರೆ. ಈ ವೆಚ್ಚ ತಗ್ಗಿಸಲು ಬೇವಿನ ರಸ ಅಥವಾ ಬೇವು ಲೇಪಿತ ಗೊಬ್ಬರ ಬಳಕೆ ಹೆಚ್ಚಾಗಬೇಕು. ಪ್ರಸ್ತುತ ಈ ಜೈವಿಕ ಗೊಬ್ಬರಗಳ ಬಳಕೆ ಕೇವಲ ಶೇ. 5ರಿಂದ 6ರಷ್ಟಿದೆ. ಇದರ ಪ್ರಮಾಣ ಹೆಚ್ಚಿಸಲು ಏನು ಮಾಡಬಹುದು ಎಂಬುದರ ಬಗ್ಗೆ ಗಂಭೀರ ಚಿಂತನೆಗಳು ನಡೆಯಬೇಕಿದೆ ಎಂದು ಹೇಳಿದರು.
ಬೇವಿನ ವಿವಿಧ ಉತ್ಪನ್ನಗಳು ಮಾರುಕಟ್ಟೆಗೆ ಬಂದಿವೆ. ಬೇವಿನ ಎಲೆ, ಅದರ ಕಡ್ಡಿ, ಟಿಂಬರ್ ಹೀಗೆ ಬಹುಪಯೋಗಿಯಾಗಿದ್ದು, ಸರ್ವರೋಗಕ್ಕೂ ಇಂದು ಬೇವು ಮದ್ದು ಎಂದ ಅವರು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು 2006ರಲ್ಲಿ ಜೈವಿಕ ಉದ್ಯಾನ ನಿರ್ಮಿಸಿದ್ದು, ಬೇವಿನ ಬಗ್ಗೆಯೂ ಸಂಶೋಧನೆ ನಡೆಸಲಾಗುತ್ತಿದೆ. ಈಗಾಗಲೇ ವಿಶ್ವವಿದ್ಯಾಲಯದ ವಾಹನಗಳಿಗೆ ಶೇ. 5ರಿಂದ 10ರಷ್ಟು ಜೈವಿಕ ಇಂಧನದ ಬಳಕೆಯನ್ನೂ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಬಾರ್ಡ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಡಾ.ಪಿ.ವಿ. ಸೂರ್ಯಕುಮಾರ್ ಮಾತನಾಡಿ, ಬೇವು ಅನ್ನು ಪರಂಪರಾಗತವಾಗಿ ನಾವು ಗಿಡಮೂಲಿಕೆಯಾಗಿ ಬಳಕೆ ಮಾಡಿಕೊಂಡು ಬಂದಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಇದರ ಬಳಕೆ ಕಡಿಮೆಯಾಗಿತ್ತು. ಈಗ ಮತ್ತೆ ಅದಕ್ಕೆ ಸೂಕ್ತ ಮಾರುಕಟ್ಟೆ ಸೃಷ್ಟಿಸಿ ಮುನ್ನೆಲೆಗೆ ತರುವ ತುರ್ತು ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಯೂನೈಟೆಡ್ ನೇಷನ್ಸ್ ಗ್ಲೋಬಲ್ ಕಾಂಪ್ಯಾಕ್ಟ್ ಇಂಡಿಯಾ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಕಮಲ್ ಕೆ. ಸಿಂಗ್ ಮಾತನಾಡಿದರು.