ಶಿರಾ: ಜಗತ್ತಿನ ರಕ್ಷಣೆಗಾಗಿ ವಿಷವನ್ನೇ ನುಂಗಿದ ನೀಲಕಂಠ, ಭಕ್ತರ ಮಂಗಳಕಾರ ಶಿವ. ಜೀವನದಲ್ಲಿ ಕೀಳರಿಮೆ ಬಿಟ್ಟು ಸರ್ವರಲ್ಲೂ ಒಳ್ಳೆಯವನಾಗಿ ಬಾಳುವ ವ್ಯಕ್ತಿಗೆ ಶಿವಕೃಪಾರ್ಶೀವಾದ ಲಭಿಸಲಿದೆ ಎಂದು ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಹೇಳಿದರು.
ತಾಲೂಕಿನ ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ಮಹಾ ಶಿವರಾತ್ರಿ ಅಂಗವಾಗಿ ಸೋಮವಾರ ರಾತ್ರಿ ಆಯೋಜಿದ್ದ ಶಿವಾಭೀಷೇಕ ಹಾಗೂ ಶಿವೋತ್ಸವದಲ್ಲಿ ಓಂಕಾರೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.
ಗುಣಮಟ್ಟದ ಮೇವು ನೀಡಿ: ತನ್ನ ಜೀವದ ಹಂಗು ತೊರೆದು ದೇಶದ ಗಡಿಯಲ್ಲಿ ನಮ್ಮನ್ನು ರಕ್ಷಣೆ ಮಾಡುವಂತ ಸೈನಿಕರೇ ನಿಜವಾದ ನಾಯಕರು. ಇಡೀ ದೇಶದ ನಾಗರೀಕ ಒಂದಾಗಿ ಸೈನಿಕರ ಬೆಂಬಲಕ್ಕೆ ನಿಲ್ಲುವ ಮೂಲಕ ಯೋಧರಲ್ಲಿ ಆತ್ಮಸ್ಥೆçರ್ಯ ತುಂಬುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕಿದ್ದು, ಒಗ್ಗಟ್ಟು ಪ್ರದರ್ಶಿಸುವ ಅವಶ್ಯಕತೆ ಇದೆ.
ರಾಜ್ಯದಲ್ಲಿ ಮಳೆ ಬಾರದ ಕಾರಣ ಬರವಿದ್ದು, ರೈತರ ಜೀವನಾಡಿಯಾಗಿರುವಂತ ಜಾನುವಾರುಗಳು ಕುಡಿಯುವ ನೀರು ಮತ್ತು ಮೇವಿಗಾಗಿ ಪರದಾಡುವಂತ ಸ್ಥಿತಿ ನಿರ್ಮಾಣವಾಗುವುದಕ್ಕಿಂತ ಮುನ್ನ ಸರ್ಕಾರ ಈ ಜಾನುವಾರುಗಳಿಗೆ ಗುಣಮಟ್ಟದ ಮೇವು ನೀಡುವಂತೆ ಆಗ್ರಹಿಸಿದರು.
ಮೇವು ಕಾರ್ಡ್ ನೀಡಿ: ಗೋಶಾಲೆಗಳನ್ನು ಆರಂಭ ಮಾಡುವ ಬದಲಾಗಿ ತೀವ್ರ ಮೇವಿನ ಕೊರತೆ ಎದುರಿಸುತ್ತಿರುವ ಹಾಗೂ ಜಾನುವಾರುಗಳಿಗೆ ಮೇವು ಇಲ್ಲದೇ ಪರದಾಡುವಂತ ರೈತ ಕುಟುಂಬ ಗುರ್ತಿಸಿ ಸರ್ಕಾರ ಮೇವು ಕಾರ್ಡ್ ವಿತರಣೆ ಮಾಡಿ ರೈತನ ಮನೆ ಬಾಗಿಲಿಗೆ ಮೇವು ನೀಡುವಂತ ಕೆಲಸ ಮಾಡಿದರೆ ಜಾನುವಾರುಗಳ ರಕ್ಷಣೆ ಸಾಧ್ಯವಾಗಲಿದೆ.
ಬರದ ತೀವ್ರತೆ ಹೆಚ್ಚಾಗುತ್ತಿರುವ ಕಾರಣ ಜನ ಸಾಮಾನ್ಯರಿಗೆ ಕೆಲಸ ಇಲ್ಲದಂತಾಗಿದೆ. ಸರ್ಕಾರ ಬರಪೂರ ಯೋಜನೆ ಘೋಷಣೆ ಮಾಡಿ ದುಡಿಯುವಂತ ಕೈಗಳಿಗೆ ಕೆಲಸ ಕೊಡುವ ನಿಟ್ಟಿನಲ್ಲಿ ಕೂಲಿಗಾಗಿ ಕಾಳು ಯೋಜನೆ ಜಾರಿ ಮಾಡಿದರೆ ಶ್ರಮದ ಫಲದಿಂದ ಹೊಟ್ಟೆ ತುಂಬಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಕಾರ್ಯೋನ್ಮುಖರಾಗಬೇಕಿದೆ ಎಂದರು.
ಇದೇ ಸಂದರ್ಭದಲ್ಲಿ ಮಠದ ಶಿವಕ್ಯ ಪೀಠಾಧ್ಯಕ್ಷ ಪರಮಹಂಸವಧೂತ ಸ್ವಾಮೀಜಿ ಮತ್ತು ಗುರುಕುಮಾರವಧೂತ ಸ್ವಾಮೀಜಿಗಳ ಶಿವಗಣಾರಾಧಾನ ಪೂಜೆಯಲ್ಲಿ ನಂಜಾವಧೂತಗಳು ಪಾಲ್ಗೊಂಡು ಗುರು ನಮನ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ನೂರಾರು ಭಕ್ತರು ಪಾಲ್ಗೊಂಡಿದ್ದರು.