Advertisement

ಕ್ರಿಕೆಟ್‌ ತಂಡದ ನಾಯಕತ್ವ ವಿಚಾರದಲ್ಲಿ ಅನಾವಶ್ಯಕ ವಿವಾದ ಸಲ್ಲದು

12:17 AM Jan 19, 2022 | Team Udayavani |

ಭಾರತೀಯ ಕ್ರಿಕೆಟ್‌ ಮೂರು ವಿಭಾಗದ ನಾಯಕತ್ವ ವಿಚಾರದಲ್ಲಿ ಅನಾವಶ್ಯಕವಾಗಿ ವಿವಾದಗಳು, ಚರ್ಚೆಗಳು ನಡೆಯುತ್ತಿವೆ. ಮಹೇಂದ್ರ ಸಿಂಗ್‌ ಧೋನಿ ಅವರ ಕಡೆಯಿಂದ ವಿರಾಟ್‌ ಕೊಹ್ಲಿ ಅವರಿಗೆ ಕ್ರಿಕೆಟ್‌ ತಂಡದ ನಾಯಕತ್ವ ಯಾವುದೇ ವಿವಾದಗಳು ಇಲ್ಲದೇ ಬಂದಿತ್ತು. ಆದರೆ ಈಗ ವಿರಾಟ್‌ ಕೊಹ್ಲಿ ಅವರಿಂದ ಉಳಿದವರಿಗೆ ನಾಯಕತ್ವ ವಹಿಸುವ ವಿಚಾರದಲ್ಲಿ ಮಾತ್ರ ಕ್ರಿಕೆಟ್‌ ಅಭಿಮಾನಿಗಳಿಗೆ ಬೇಸರವಾಗುವ ರೀತಿಯಲ್ಲಿ ವರ್ತಿಸಲಾಗುತ್ತಿದೆ.

Advertisement

ಏಕದಿನ ಮತ್ತು ಟೆಸ್ಟ್‌ ಪಂದ್ಯಗಳಲ್ಲಿ ವಿರಾಟ್‌ ಕೊಹ್ಲಿ ಅವರ ಸಾಧನೆ ಅದ್ಭುತವಾಗಿದೆ. ಆದರೆ ಟಿ20ಯಲ್ಲಿ ಮಾತ್ರ ಅವರು ವಿಫ‌ಲರಾಗುತ್ತಿದ್ದಾರೆ ಎಂಬ ಆರೋಪಗಳು ಮೊದಲಿನಿಂದಲೂ ಕೇಳಿಬರುತ್ತಿದ್ದವು. ಅಲ್ಲದೆ ಕೊಹ್ಲಿ ನಾಯಕತ್ವದ ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ತಂಡ ಒಂದು ಬಾರಿಯೂ ಪ್ರಶಸ್ತಿ ಗೆಲ್ಲದೆ ನಿರಾಸೆ ಮೂಡಿಸಿದೆ. ಜತೆಗೆ ರೋಹಿತ್‌ ಶರ್ಮ ನಾಯಕತ್ವದಲ್ಲೇ ಮುಂಬೈ ಇಂಡಿಯನ್ಸ್‌ ತಂಡ 5 ಬಾರಿ ಐಪಿಎಲ್‌ ಪ್ರಶಸ್ತಿ ಎತ್ತಿಹಿಡಿದಿದೆ. ಹೀಗಾಗಿ ಟಿ20 ತಂಡದ ನಾಯಕತ್ವವನ್ನು ಕೊಹ್ಲಿಯವರಿಂದ ಪಡೆದು, ರೋಹಿತ್‌ ಶರ್ಮ ಅವರಿಗೆ ನೀಡಬೇಕು ಎಂಬ ಒತ್ತಾಯಗಳು ಕೇಳಿಬಂದಿದ್ದವು. ಈ ಎಲ್ಲ ಬೆಳವಣಿಗೆಗಳ ಅನಂತರ ವಿರಾಟ್‌ ಕೊಹ್ಲಿ ಅವರು ಟಿ20 ವಿಶ್ವಕಪ್‌ಗ್ೂ ಮುನ್ನವೇ ಟಿ20 ತಂಡದ ನಾಯಕತ್ವದಿಂದ ದೂರ ಸರಿಯುವುದಾಗಿ ಪ್ರಕಟಿಸಿದರು.

ಆದರೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಂಡವನ್ನು ಪ್ರಕಟಿಸುವ ವೇಳೆ ಭಾರತೀಯ ಕ್ರಿಕೆಟ್‌ ತಂಡದ ಆಯ್ಕೆದಾರರು ವಿರಾಟ್‌ ಕೊಹ್ಲಿ ಅವರನ್ನು ಏಕದಿನ ನಾಯಕತ್ವದಿಂದ ದಿಢೀರನೆ ತೆಗೆದುಹಾಕಿ, ರೋಹಿತ್‌ ಶರ್ಮ ಅವರಿಗೆ ವಹಿಸಿದರು. ಇದು ವಿರಾಟ್‌ ಕೊಹ್ಲಿ ಅವರ ಬೇಸರಕ್ಕೂ ಕಾರಣವಾಗಿತ್ತು. ಆಗ ವೈಟ್‌ಬಾಲ್‌ ಕ್ರಿಕೆಟ್‌(ಟಿ20-ಏಕದಿನ ಕ್ರಿಕೆಟ್‌)ನಲ್ಲಿ ಒಬ್ಬರೇ ನಾಯಕರಿರಬೇಕು. ಟೆಸ್ಟ್‌ಗೆ ಬೇರೆಯವರಿದ್ದರೂ ಆಗುತ್ತದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರು ಹೇಳಿದ್ದರು. ಅಲ್ಲದೆ, ಈ ಬಗ್ಗೆ ಕೊಹ್ಲಿ ಅವರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದಿದ್ದರು. ಇದನ್ನು ಸ್ವತಃ ಕೊಹ್ಲಿ ಅವರೇ ತಳ್ಳಿಹಾಕಿ, ಇಂಥ ಚರ್ಚೆಯೇ ನಡೆದಿರಲಿಲ್ಲ ಎಂದಿದ್ದರು.

ಇದಾದ ಬಳಿಕ ಈಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿ ಮುಗಿದಿದ್ದು, ಇದರಲ್ಲಿ ಭಾರತ 2-1 ಅಂತರದಲ್ಲಿ ಸೋತಿದೆ. ಈ ಸೋಲನ್ನು ನೇರವಾಗಿ ವಿರಾಟ್‌ ಕೊಹ್ಲಿ ಅವರ ತಲೆಗೇ ಕಟ್ಟಲಾಗಿದೆ. ಇದರಿಂದ ಬೇಸತ್ತ ಕೊಹ್ಲಿ ಟೆಸ್ಟ್‌ ನಾಯಕತ್ವವನ್ನೂ ಬಿಟ್ಟಿದ್ದಾರೆ. ಎಲ್ಲೋ ಒಂದು ಕಡೆ ತಮ್ಮ ಪ್ರತಿಯೊಂದು ನಡೆಯನ್ನೂ ಟೀಕಿಸಿದ್ದರಿಂದ ಅವರು ಈ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳಿವೆ.

ಹಿಂದೊಮ್ಮೆ ಮಹೇಂದ್ರ ಸಿಂಗ್‌ ಧೋನಿ ಅವರು ಮೂರು ತಂಡಗಳಿಗೂ ಒಬ್ಬನೇ ನಾಯಕನಿರಬೇಕು. ಒಂದೊಂದಕ್ಕೂ ಒಬ್ಬೊಬ್ಬ ನಾಯಕನಿರುವುದು ಒಳ್ಳೆಯದಲ್ಲ ಎಂದು ಹೇಳಿದ್ದರು. ಈ ಕಾರಣಕ್ಕಾಗಿಯೇ ಅವರು ಏಕಕಾಲದಲ್ಲೇ ಮೂರು ನಾಯಕತ್ವ ಬಿಟ್ಟು, ಕೊಹ್ಲಿ ಅವರಿಗೆ ವಹಿಸಿದ್ದರು. ಈಗ ಹೊಸದಾಗಿ ಏಕದಿನ-ಟಿ20ಗೆ ಒಬ್ಬರು,

Advertisement

ಟೆಸ್ಟ್‌ಗೆ ಒಬ್ಬರನ್ನು ನಾಯಕರನ್ನಾಗಿ ಮಾಡಲು ಚಿಂತನೆ ನಡೆಸಲಾಗುತ್ತಿದೆ. ಆದರೆ ಆಯ್ಕೆಯ ವಿಚಾರದಲ್ಲಿ ಮಾತ್ರ ಕೆಲವು ವಿವಾದಗಳನ್ನೂ ಎಳೆದು ತರಲಾಗುತ್ತಿದೆ. ಸಾರ್ವಜನಿಕವಾಗಿ ಈ ಎಲ್ಲ ಚರ್ಚೆಗಳನ್ನು ಬದಿಗಿಟ್ಟು, ಸಮರ್ಥ ನಾಯಕನನ್ನು ಹುಡುಕುವ ಹೊಣೆಗಾರಿಕೆ ಬಿಸಿಸಿಐ ಮುಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next