ಹೊಸದಿಲ್ಲಿ: ತೆರಿಗೆ ವಂಚಕರು ಮತ್ತು ಅಕ್ರಮ ಹಣಕಾಸು ವರ್ಗಾವಣೆಯಂತಹ ಕೃತ್ಯಗಳಲ್ಲಿ ತೊಡಗಿದವರ ವಿರುದ್ಧ ಜಾರಿ ನಿರ್ದೇಶನಾಲಯ ತನ್ನ ಕಾನೂನಾತ್ಮಕ ಎಲ್ಲಾ ಅಧಿಕಾರಗಳನ್ನು ಬಳಸಿಕೊಂಡು ಕಠಿನ ಕ್ರಮಕೈಗೊಳ್ಳಬೇಕು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಈ ಮೂಲಕ ಅಪನಗದೀಕರಣದ ಬಳಿಕ ತೆರಿಗೆ ವಂಚಕರು ಮತ್ತು ಹಣಕಾಸು ಅಕ್ರಮಗಳಲ್ಲಿ ಭಾಗಿಯಾದವರನ್ನು ಸುಮ್ಮನೆ ಬಿಡಕೂಡದು ಎಂಬ ಎಚ್ಚರಿಕೆ ರವಾನಿಸಿದ್ದಾರೆ.
ಜಾರಿ ನಿರ್ದೇಶನಾಲಯ ದಿನ ಪ್ರಯುಕ್ತ ಮಾತನಾಡಿದ ಅವರು ಕಠಿನವಾಗಿ ಕಾನೂನುಗಳನ್ನು ಜಾರಿಗೊಳಿಸುವುದರ ಮೂಲಕ ಕಾನೂನು ಬದ್ಧವಾಗಿ ಖಜಾನೆ ತುಂಬಿಸಲು ನೆರವಾಗಬೇಕು ಎಂದು ಹೇಳಿದರು. ಅಲ್ಲದೇ ತೆರಿಗೆ ಕಾನೂನುಗಳ ಪಾಲನೇ ಮಾಡದಿರುವುದರಿಂದ ದೊಡ್ಡ ಪ್ರಮಾಣದಲ್ಲಿ ಜನತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ಮಾರಕವಾಗುತ್ತದೆ. ಆದ್ದರಿಂದ ಈ ದಿಶೆಯಲ್ಲಿ ದೇಶಕ್ಕಾಗಿ ಜಾರಿ ನಿರ್ದೇಶನಾಲಯದ ಪಾಲು ದೊಡ್ಡದಿದೆ. ಕಾನೂನು ಅನುಸರಣೆ ಮತ್ತು ತೆರಿಗೆ ಪದ್ಧತಿ, ಕರೆನ್ಸಿ ಕಾನೂನು ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಲಕ್ಷಣಗಳು. ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಕಾನೂನು ಉಲ್ಲಂಘನೆ ಕಡಿಮೆ. ಅಲ್ಲದೇ ನಗದು ಆರ್ಥಿಕತೆ ಹೆಚ್ಚಿನ ಕಾನೂನಿನ ಅನುಸರಣೆ ಇಲ್ಲದ್ದಕ್ಕೆ ಕಾರಣವಾಗುತ್ತದೆ. ಇದನ್ನು ಕಡಿಮೆಗೊಳಿಸಬೇಕು ಎಂಬ ಮಾತುಗಳನ್ನು ಜೇಟ್ಲಿ ಹೇಳಿದ್ದಾರೆ.
9 ಲಕ್ಷ ಕಂಪೆನಿಗಳು ರಿಟರ್ನ್ ಸಲ್ಲಿಸಿಲ್ಲ
ದೇಶದಲ್ಲಿ ಸುಮಾರು 8ರಿಂದ 9 ಲಕ್ಷ ನೋಂದಾಯಿತ ಕಂಪೆನಿಗಳು ಅಕ್ರಮ ಹಣ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಕಂದಾಯ ಕಾರ್ಯದರ್ಶಿ ಹಸು¾ಖ್ ಅಧಿಯಾ ಹೇಳಿದ್ದಾರೆ.ದೇಶದಲ್ಲಿ ಒಟ್ಟು 15 ಲಕ್ಷ ನೋಂದಾಯಿತ ಕಂಪೆನಿಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಪೈಕಿ 8ರಿಂದ 9 ಲಕ್ಷ ಕಂಪೆನಿಗಳು ತೆರಿಗೆ ಮಾಹಿತಿಯನ್ನು ಕಾಲಕಾಲಕ್ಕೆ ಸಲ್ಲಿಕೆ ಮಾಡುತ್ತಿಲ್ಲ.
ಈ ಕಂಪೆನಿಗಳು ಅಕ್ರಮ ಹಣ ವರ್ಗಾವಣೆಯಲ್ಲಿ ತೊಡಗಿರುವ ಸಾಧ್ಯತೆ ಹೆಚ್ಚಿದೆ. ಪ್ರತಿ 15 ದಿನಗಳಿಗೆ ಒಮ್ಮೆ ಪ್ರಧಾನಿ ಕಾರ್ಯಾಲಯ ಈ ಕಂಪೆನಿಗಳ ಕಾರ್ಯ ನಿರ್ವಹಣೆಯ ಮೇಲೆ ನಿಗಾ ವಹಿಸುತ್ತಿದೆ. ಇವುಗಳ ಕಾರ್ಯ ಚಟುವಟಿಕೆ ಪರಿಶೀಲಿಸಲು ಪಿಎಂಒ ಕಚೇರಿಯಲ್ಲಿ ವಿಶೇಷ ಕಾರ್ಯಪಡೆ ರಚನೆ ಮಾಡಲಾಗಿದೆ. ಅಲ್ಲದೆ, ಈಗಾಗಲೇ ಇಂತಹ ಕೆಲವು ಕಂಪೆನಿಗಳಿಗೆ ನೋಟಿಸ್ ಅನ್ನೂ ಜಾರಿ ಮಾಡಲಾಗಿದೆ ಎಂದಿದ್ದಾರೆ ಅಧಿಯಾ.