Advertisement

Politics: ಶಾಮನೂರು ಹೇಳಿಕೆ ಬಗ್ಗೆ ಚಿಂತನೆ ಅಗತ್ಯ: ಸಚಿವ ಪ್ರಹ್ಲಾದ ಜೋಷಿ

12:28 AM Oct 08, 2023 | Team Udayavani |

ಧಾರವಾಡ: ರಾಜ್ಯದ ಕಾಂಗ್ರೆಸ್‌ ನೇತೃತ್ವದ ಸರಕಾರದಲ್ಲಿ ಲಿಂಗಾಯತರಿಗೆ ಅನ್ಯಾಯ ಆಗಿದೆ ಎಂಬ ಅಖೀಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ, ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಬಗ್ಗೆ ಸರಕಾರ ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ-ಲಿಂಗಾಯತ ಸಮಾಜದ ಹಿರಿಯರಾದ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆಯನ್ನು ನಿರ್ಲಕ್ಷಿಸಲಾಗದು ಎಂದರು.

ಪ್ರಕರಣ ಹಿಂಪಡೆದರೆ ಹೋರಾಟ
ರಾಜ್ಯ ಸರಕಾರ ರೈತಪರ ಹೋರಾಟಗಾರರ ಅಥವಾ ಕನ್ನಡಪರ ಹೋರಾಟಗಾರರ ಪ್ರಕರಣಗಳನ್ನು ಹಿಂಪಡೆದಿದ್ದರೆ ಅಭ್ಯಂತರವಿಲ್ಲ. ನಮ್ಮ ಸರಕಾರವಿದ್ದಾಗಲೂ ಇದನ್ನು ಮಾಡಿದ್ದೇವೆ. ಆದರೆ ರಾಜಕೀಯಕ್ಕೋಸ್ಕರ ಪೊಲೀಸರನ್ನು ಕೊಲೆ ಮಾಡಲು ಬಂದ, ಪೊಲೀಸ್‌ ಠಾಣೆ ಲೂಟಿ ಮಾಡಿದ, ಸಮಾಜದಲ್ಲಿ ಅಶಾಂತಿ ಉಂಟು ಮಾಡಿದವರ ಮೇಲೆ ಹಾಕಲಾಗಿರುವ ಕೇಸುಗಳನ್ನು ಹಿಂಪಡೆಯುತ್ತಿರುವುದು ಆತಂಕದ ಸಂಗತಿ. ಇದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಸರಕಾರ ಈ ನಡೆಯಿಂದ ಹಿಂದೆ ಸರಿಯದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಕೋಲಾರ, ಶಿವಮೊಗ್ಗ, ಹುಬ್ಬಳ್ಳಿ ಪ್ರಕರಣದ ಆರೋಪಿಗಳು ಬಹಿರಂಗವಾಗಿ ಪೊಲೀಸರ ಮುಂದೆ ತಲವಾರು ಮುಂತಾದ ಮಾರಕ ಅಸ್ತ್ರಗಳನ್ನು ಪ್ರದರ್ಶಿಸಿದ್ದಾರೆ. ಕಾಂಗ್ರೆಸ್‌ನ ಓಲೈಕೆ ರಾಜಕಾರಣದಿಂದಲೇ ಅವರಿಗೆ ಅಂಥ ಧೈರ್ಯ ಬಂದಿದೆ ಎಂದು ಆರೋಪಿಸಿದರು.

ಐಸಿಸ್‌ ಶಂಕಿತ ಉಗ್ರನಿಗೆ ಹುಬ್ಬಳ್ಳಿ -ಧಾರವಾಡ ಸಂಪರ್ಕದ ವಿಚಾರಕ್ಕೆ ಪ್ರತಿಕ್ರಿಯಿಸಿದ ಜೋಷಿ, ಯುಪಿಎ ಕಾಲದಲ್ಲಿ ದಿಲ್ಲಿಯಿಂದ ಹುಬ್ಬಳ್ಳಿವರೆಗೆ ಬಾಂಬ್‌ ಸ್ಫೋಟ ಆಗುತ್ತಿದ್ದವು. ಆದರೆ ಈಗ ಇಂಥ ಚಟುವಟಿಕೆ ಇಲ್ಲ. ಆದರೆ ಕೆಲವೆಡೆ ಉಗ್ರ ಚಟುವಟಿಕೆ ಮಾಡುವವರು ಇದ್ದಾರೆ. ಎಲ್ಲಿ ರಾಜ್ಯ ಸರಕಾರದ ಮೃದು ಧೋರಣೆ ಇರುತ್ತದೋ ಅಲ್ಲಿ ಅಂಡರ್‌ಗ್ರೌಂಡ್‌ ಸೆಲ್‌ಗ‌ಳನ್ನು ಮಾಡುತ್ತಿದ್ದಾರೆ ಎಂದರು.

Advertisement

ಕಷ್ಟದಲ್ಲಿ ಶಕ್ತಿ ಯೋಜನೆ ಮಾಡಿದ್ದೇವೆ ಎಂಬ ಡಿಕೆಶಿ ಹೇಳಿಕೆ ಬಗ್ಗೆ ಮಾತನಾಡಿದ ಸಚಿವರು, ಜನರಿಗೆ ಯಾವುದೇ ಯೋಜನೆ, ಪರಿಹಾರ ಕೊಡಲು ನಮ್ಮ ವಿರೋಧ ಇಲ್ಲ. ಆದರೆ ಮತಕ್ಕಾಗಿ ಯೋಜನೆ ಮಾಡಿದ್ದು ಎಷ್ಟು ಸರಿ? ಎಷ್ಟು ಖರ್ಚು ಆಗುತ್ತದೆ, ಸಂಪನ್ಮೂಲ ಏನು ಎಂಬ ವಿಚಾರ ಮಾಡಲಿಲ್ಲ. ಅದಕ್ಕಾಗಿ ಈಗ ಇತರೆಲ್ಲ ಸೌಲಭ್ಯಗಳನ್ನು ಸ್ಥಗಿತ ಮಾಡುತ್ತಿದ್ದಾರೆ. ಈ ಹಿಂದೆ ಪ್ರವಾಹದಲ್ಲಿ ಮನೆ ಹಾನಿಗೀಡಾದವರಿಗೆ ಬಿಎಸ್‌ವೈ 5 ಲಕ್ಷ ರೂ. ಕೊಟ್ಟಿದ್ದರು. ಆಗ ಬಿಎಸ್‌ವೈ ಕೇಂದ್ರ ಸರಕಾರವನ್ನು ಆಶ್ರಯಿಸಿ ಈ ಮೊತ್ತ ಕೊಟ್ಟದ್ದಲ್ಲ. ಆದರೆ ಕಾಂಗ್ರೆಸ್‌ ಸರಕಾರ ಪ್ರತಿಯೊಂದಕ್ಕೂ ಕೇಂದ್ರದತ್ತ ನೋಡುತ್ತಿದೆ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next